ಶಿವಮೊಗ್ಗ

ಠೇಂಕರಿಸಿದ ಹಲವು ಹೆಜ್ಜೆಗಳ ಸದ್ದು...

Published On :

ಕುವೆಂಪು ಮಹಾಮಂಟಪ, ಶಿವಮೊಗ್ಗ
ಮಹಿಳೆಯರೇ ನಿಮ್ಮ ಮನಸ್ಥಿತಿ ಇನ್ನಾದರೂ ಬದಲಿಸಿಕೊಳ್ಳಿ ಎಂಬ ಹಿತವಚನ, ಮಕ್ಕಳನ್ನು ಸಾಹಿತ್ಯದಿಂದ ದೂರ ಉಳಿಸುವುತ್ತಿರುವುದೇ ಪೋಷಕರು ಎಂಬ ತಿವಿ ಮಾತು, ಅಭಿವೃದ್ಧಿ ಪರಿಕಲ್ಪನೆಯೇ ಸರಿ ಇಲ್ಲ ಎಂಬ ಖಡಕ್ ವಾದ, ಪ್ರಾಚೀನ ನಾಡಿನಲ್ಲಿ ಅಧ್ಯಯನ ಆಗಬೇಕೆಂಬ ಕೂಗು...
ಇವೆಲ್ಲಾ ಜಿಲ್ಲಾ ಸಾಹಿತ್ಯ ಸಮ್ಮೇಳನದ (ಎರಡನೇ ಗೋಷ್ಠಿ) ಹಲವು ಹೆಜ್ಜೆಗಳ ಸದ್ದು ಶಿರ್ಷಿಕೆಯಡಿ ನಡೆದ ಗೋಷ್ಠಿಯಲ್ಲಿ  ಮೂಲಕ ಹೊರಹೊಮ್ಮಿದ ಠೇಂಕಾರ.
ಬದಲಾಗಲಿ ಮಹಿಳೆಯರು: ಮುಂಚಿನಿಂದಲೂ ಮಹಿಳೆಯದ್ದು ಸದ್ದೇ ಇಲ್ಲದೆ ನಡೆದು ಬಂದ ಹಾದಿ, ಅವಳದ್ದು ಮೌನದ ಭಾಷೆ. ಅಂದಿನಿಂದ ಇಂದಿನವರೆಗೂ ಆಕೆಯ ಜೀವನದಲ್ಲಿ ಅಂತಹ ಬದಲಾವಣೆಯಾಗಿಲ್ಲ ಎಂದು ಡಾ. ಅನುಪಮ ಅಭಿಪ್ರಾಯಪಟ್ಟರು.
ಸಮಕಾಲೀನ ಮಹಿಳೆ ಮತ್ತು ಸಾಹಿತ್ಯ ಕುರಿತಾಗಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ- ಪಿಯುಸಿಯಲ್ಲಿ ವಿದ್ಯಾರ್ಥಿನಿ ಮೇಲುಗೈ, ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯೆಯಾಗಿದ್ದು, ಆಕಾಶಕ್ಕೆ ಹೋಗಿಬಂದಿದ್ದು, ಕಲೆ ಸಾಹಿತ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದು ಹೀಗೆ ಮಹಿಳೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬಂದಂತೆ ಕಂಡುಬಂದಿದ್ದು ನಾಣ್ಯದ ಒಂದು ಮುಖ ಅಷ್ಟೇ. ಈ ನಾಣ್ಯಕ್ಕೆ ನೂರಾರು ಮುಖ್ಯ ಇದ್ದು, ಪ್ರತಿ ನಿತ್ಯ ಅತ್ಯಾಚಾರ, ದೌರ್ಜನ್ಯದಂತಹ ಘಟನೆಗಳು ನಡೆಯುತ್ತಲೇ ಇವೆ ಎಂದರು.
ಮಹಿಳೆ ತನ್ನ ಸುತ್ತ ಗೋಡೆ ಕಟ್ಟಿಕೊಂಡಿದ್ದಾಳೆ, ಗಡಿ ಹಾಕಿಕೊಂಡಿದ್ದಾಳೆ. ಇದರಿಂದ ಹೊರಬರಲು ವಿಶಾಲ ನೆಲೆಯಲ್ಲಿ ಆಲೋಚಿಸಬೇಕಾದ ಅನಿವಾರ್ಯತೆ ಇದೆ ಎಂದ ಅನುಪಮ, ಆಕೆ ಇನ್ನಾದರೂ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪೋಷಕರೇ ಸರಿ ಇಲ್ಲ: ಮಕ್ಕಳು ಸಾಹಿತ್ಯದಿಂದ ದೂರಾಗಿದ್ದಕ್ಕೆ ಪೋಷಕರೇ ನೇರ ಕಾರಣ ಎಂದು ಮಾರ್ಪಳ್ಳಿ ಮಂಜುನಾಥ್ ಅಭಿಪ್ರಾಯಪಟ್ಟರು. ಮಕ್ಕಳ ಸಾಹಿತ್ಯ ಹೇಗಿರಬೇಕು ವಿಷಯ ಕುರಿತಾಗಿ ಮಾತನಾಡಿದ ಅವರು, ಮಕ್ಕಳಿಗೆ ಕಥೆ ಹೇಳುವ, ಕಥೆ ಪುಸ್ತಕ ತಂಡುಕೊಡುವ ಕಾರ್ಯ ಎಷ್ಟು ಮನೆಗಳಲ್ಲಿ ನಡೆಯುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದ ಅವರು, ಸಾಹಿತ್ಯದ ಮೂಲಕ ಒದಗುವ ಹುಮ್ಮಸ್ಸು ಮಕ್ಕಳಿಗೆ ತಂದುಕೊಡಲಾಗುತ್ತಿಲ್ಲ. ಇದರ ಪರಿಣಾಮ ಗಂಭೀರವಾಗಿದೆ ಎಂದು ವಿವರಿಸಿದರು. ರಾಜರತ್ನಂ, ಕುವೆಂಪು, ನಾ.ಡಿಸೋಜ ಅವರ ಮಕ್ಕಳ ಕೃತಿಗಳ ಬಗ್ಗೆ ಇಂದಿನ ಮಕ್ಕಳಿಗೆ ತಿಳಿದೇ ಇಲ್ಲ. ಏಕೆಂದರೆ ಪೋಷಕರು ಅದನ್ನು ಮಕ್ಕಳಿಗೆ ಒದಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಟಿವಿ ಮಾಧ್ಯಮಗಳಿಗೆ ಮಾರುಹೋಗಿರುವ ಪೋಷಕರು ಮಕ್ಕಳನ್ನು ಅದರತ್ತ ವಾಲುವಂತೆ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳನ್ನು ನಿಷ್ಕ್ರಿಯರನ್ನಾಗಿ ಮಾಡುತ್ತಿದ್ದಾರೆಂದರು.
ಅಭಿವೃದ್ಧಿ ಪರಿಕಲ್ಪನೆ ಸರಿಯಿಲ್ಲ: ಈಗಿನ ಅಭಿವೃದ್ಧಿ ಪರಿಕಲ್ಪನೆಯಿಂದಾಗಿ ನಮ್ಮ ಜೀವನವನ್ನು ಕಷ್ಟಕ್ಕೆ ತಳ್ಳಿಕೊಳ್ಳುತ್ತಿದ್ದೇವೆ ಎಂದು ಪರಿಸರ ತಜ್ಞ ಡಾ.ಎಲ್.ಕೆ. ಶ್ರೀಪತಿ ಆತಂಕ ವ್ಯಕ್ತಪಡಿಸಿದರು. ಅಭಿವೃದ್ಧಿ ಪರಿಕಲ್ಪನೆ ಮತ್ತು ಜಾಗತಿಕ ತಾಪಮಾನ ವಿಚಾರವಾಗಿ ಮಾತನಾಡಿದ ಅವರು, ನಾಡಿನಲ್ಲಿ ವಾರ್ಷಿಕ ಮಳೆ ಒಂದೇ ಪ್ರಮಾಣದಲ್ಲಿ ಬೀಳುತ್ತಿದ್ದರೂ ಕಾಲಕಾಲಕ್ಕೆ ಮಳೆ ಬಾರದಿರುವುದಕ್ಕೆ ಅಭಿವೃದ್ಧಿ ಪರಿಕಲ್ಪನೆಯೇ ಕಾರಣ. ಈ ಮನೋಭಾವವನ್ನು ಬದಲಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕುಟುಂಬಕ್ಕೆ ಒಂದೇ ಸೂರು ಎಂಬ ಕಾನೂನು ಜಾರಿಗೆ ಬಂದರೆ ಒಂದಷ್ಟು ಬದಲಾವಣೆ ಸಾಧ್ಯವಿದೆ. ಸಿಮೆಂಟ್, ಕಬ್ಬಿಣ, ಇಟ್ಟಿಗೆ ಮೇಲಿನ ಬೇಡಿಕೆ ಕಡಿಮೆಯಾದರೆ ಸಹಜವಾಗಿ ಪರಿಸರದ ಮೇಲೆ ಒಂದಷ್ಟು ಒತ್ತಡ ಕಡಿಮೆಯಾಗಬಹುದು ಎಂದರು.
ಮತ್ತಷ್ಟು ಅಧ್ಯಯನ ಆಗಬೇಕು: ಐತಿಹಾಸಿಕವಾಗಿ ಶಿವಮೊಗ್ಗ ಜಿಲ್ಲೆ ಸಾಕಷ್ಟು ಶ್ರೀಮಂತ. ಇಲ್ಲಿ ಸಾಕಷ್ಟು ಶಾಸನಗಳು ದೊರೆತಿದ್ದು, ಇನ್ನಷ್ಟು ಸಂಶೋಧನೆಯ ಅವಶ್ಯಕತೆ ಇದೆ ಎಂದು ಸಂಶೋಧಕ ಸಾಮಕ್ ಅಭಿಪ್ರಾಯಪಟ್ಟರು. ಜಿಲ್ಲೆಯ ಶಾಸಸನಗಳು, ಹೊಸ ಸಂಶೋಧನೆ ಕುರಿತಾಗಿ ಅವರು ಮಾತನಾಡಿದರು.
ಹೊಸಗುಂದ, ತಾಳಗುಂದದಲ್ಲಿ ಸಿಕ್ಕ ಶಾಸನಗಳಿಂದ ಇತಿಹಾಸದ ಹೊಸ ಮಾಹಿತಿಗಳು ದೊರೆತಿವೆ. ಹೀಗಾಗಿ ಸಂಶೋಧನೆಗೆ ಹೆಚ್ಚಿನ ಒತ್ತುಕೊಡಬೇಕಾಗಿದೆ.  ಸ್ಥಾನಕುಂದೂರು ಉತ್ಸವವನ್ನು ನಡೆಸಬೇಕೆಂದು ಸರ್ಕಾರದ ಮುಂದೆ ಬೇಡಿಕೆ ಮಂಡಿಸಿದರು.

ಕುಟುಂಬಕ್ಕೆ ಒಂದೇ ಮನೆಯೆಂಬ ಕಾನೂನಾಗಲಿ
ಒಂದು ಕುಟುಂಬಕ್ಕೆ ಒಂದೇ ಮನೆ ಎಂಬ ಕಾನೂನು ಜಾರಿಯಾದರೆ ಪ್ರಕೃತಿ ಮೇಲಿನ ಒತ್ತಡ ಒಂದಷ್ಟು ಕಡಿಮೆಯಾಗಬಹುದು ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಾ. ಡಿಸೋಜ ಅಭಿಪ್ರಾಯಪಟ್ಟರು.
ಈ ವಿಚಾರ ಸಾರ್ವಜನಿಕವಾಗಿಯೂ ಚರ್ಚೆಯಾಗಬೇಕು ಎಂದ ಅವರು, ಪ್ರಾಕೃತಿಕ ಸಂಪತ್ತು ರಕ್ಷಣೆಗಾಗಿ ಇಂತಹ ಒಂದು ಬದಲಾವಣೆ ಆಗಬೇಕಾಗಿದೆ ಎಂದರು. ಅದೇ ರೀತಿ ಒಂದು ಕುಟುಂಬಕ್ಕೆ ಒಂದೇ ಜಮೀನು ಎಂಬಂಶವೂ ಜಾರಿಯಾಗಬೇಕು ಎಂದು ತಿಳಿಸಿದರು.
ಮಕ್ಕಳ ಸಾಹಿತ್ಯ ಬದಲಾಗಿಲ್ಲ. ವೈಚಾರಿಕತೆ, ವೈಜ್ಞಾನಿಕತೆಯ ಮಕ್ಕಳ ಸಾಹಿತ್ಯ ಹೊರ ಬರುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು. ಪುರುಷ ರಾಕ್ಷಸರು ಮತ್ತೆ ಮತ್ತೆ ಅತ್ಯಾಚಾರ- ದೌರ್ಜನ್ಯದಲ್ಲಿ ತೊಡಗುತ್ತಿದ್ದಾರೆ. ಈ ಬೆಳವಣಿಗೆಗೆ ಮಹಿಳೆ ಮೇಲಿನ ಸೇಡಿನ ಭಾವನೆ ಇದೆಯೇನೋ ಎಂಬ ಅನುಮಾನ ಕಾಡುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.