ದ್ವಂದ್ವ ನೀತಿ ಬಿಟ್ಟು ಶ್ವೇತಪತ್ರ ಹೊರಡಿಸಿ
ಕಪ್ರ ವಾರ್ತೆ, ಶಿವಮೊಗ್ಗ, ಜೂ.2
ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಎಂದು ಒಂದೆಡೆ ಹೇಳುತ್ತೀರಿ. ಇನ್ನೊಂದೆಡೆ ಸದೃಢವಾಗಿದ್ದರಿಂದಲೇ ಹೊಸ ಯೋಜನೆಗಳನ್ನು ಘೋಷಿಸಿದ್ದೇನೆಂದು ಹೇಳುತ್ತೀರಿ. ಈ ದ್ವಂದ್ವ ಏಕೆ ಕೂಡಲೇ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತಪತ್ರ ಮಂಡಿಸಿ. ವಸ್ತುಸ್ಥಿತಿ ಹೇಗಿದೆ ಎಂದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಕರ್ನಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ನಗರದಲ್ಲಿ ಭಾನುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿಯಲ್ಲಿ ಸಿದ್ದರಾಮಯ್ಯ ಅವರು ಮಾತನಾಡುವಾಗ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದಿದ್ದಾರೆ. ನಾನು ಏಳು ಬಾರಿ ಬಜೆಟ್ ಮಂಡಿಸಿದ್ದೇನೆ. ಹಿಂದಿನ ಅವಧಿಯ ಸರ್ಕಾರದ ಪಾಲುದಾರನಾಗಿದ್ದೆ. ನನಗೆ ಗೊತ್ತು. ರಾಜ್ಯದ ಆರ್ಥಿಕ ಪರಿಸ್ಥಿತಿ ಚನ್ನಾಗಿಯೇ ಇದೆ ಎಂದರು.
ಚುನಾವಣೆಯ ಕಾರಣ ಕಳೆದ ನಾಲ್ಕೈದು ತಿಂಗಳುಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತವಾಗಿದೆ. ಶೇ.10ರಷ್ಟು ಹಣ ಕೂಡ ಖರ್ಚಾಗಿಲ್ಲ. ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಮುಖ್ಯಮಂತ್ರಿಯವರು ಹೇಳುವುದು ಸರಿ ಅಲ್ಲ ಎಂದರು.
ತರಾತುರಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸ್ಥಾನಕ್ಕೇರಿದ ಉತ್ಸಾಹದಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಇವೆಲ್ಲರೂ ತರಾತುರಿ ನಿರ್ಧಾರ ಎಂದು ಯಡಿಯೂರಪ್ಪ ಟೀಕಿಸಿದರು.
ಸಾಮಾನ್ಯವಾಗಿ ಮುಖ್ಯಮಂತ್ರಿ ಒಬ್ಬರೇ ಪ್ರಮಾಣ ವಚನ ಸ್ವೀಕರಿಸುವುದಿಲ್ಲ. ಇವರು ಸ್ವೀಕರಿಸಿದರು. ನಂತರ ನಡೆಯುವ ಸಂಪುಟ ಸಭೆ ಔಪಚಾರಿಕ ಮಾತ್ರ. ಆದರೆ, ಸಿದ್ದರಾಮಯ್ಯ ಅವರು ಸಹೋದ್ಯೋಗಿಗಲೇ ಇಲ್ಲದ ಸಂಪುಟ ಸಭೆಯಲ್ಲಿ ರಾಜ್ಯಕ್ಕೆ ಸುಮಾರು 6 ಸಾವಿರ ಕೋಟಿ ಹೊರೆಯಾಗುವ ಹಲವು ಯೋಜನೆಗಳನ್ನು ಘೋಷಿಸಿದರು. ಇದನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಸಾಧಕ ಬಾಧಕಗಳನ್ನು ಚಿಂತಿಸಬೇಕಿತ್ತು ಎಂದರು.
98.17 ಲಕ್ಷ ಬಿಪಿಎಲ್ ಕಾರ್ಡ್: ಜೂ.1ರಿಂದ ಬಿಪಿಎಲ್ ಕಾರ್ಡುದಾರರಿಗೆ 30 ಕಿ.ಗ್ರಾ. ಅಕ್ಕಿ ಕೊಡುತ್ತೇನೆ ಎಂದಿದ್ದಾರೆ. ಈಗ ಅದನ್ನು ಒಂದು ತಿಂಗಳು ಮುಂದೂಡಿದ್ದಾರೆ. ಜತೆಗೆ ಎಪಿಎಲ್ ಕಾರ್ಡುದಾರರಿಗೂ ಅಕ್ಕಿ ಕೊಡುತ್ತೇನೆ ಎಂದಿದ್ದಾರೆ. ಆದರೆ, ರಾಜ್ಯದಲ್ಲಿ 98.17 ಲಕ್ಷ ಬಿಪಿಎಲ್ ಕಾರ್ಡುದಾರರಿದ್ದಾರೆ. 11 ಲಕ್ಷ ಅಂತ್ಯೋದಯ ಕಾರ್ಡುದಾರರಿದ್ದಾರೆ. ಬಿಪಿಎಲ್ ಸಿಗದವರೂ ಇದ್ದಾರೆ. ಸರಿಸುಮಾರು 1 ಕೋಟಿ ಕುಟುಂಬಗಳಿಗೆ ಸವಲತ್ತು ಕೊಡಬೇಕು. ಆದರೆ, ಕೇಂದ್ರ ಸರ್ಕಾರವೇ ಇವರ ಬೇಡಿಕೆ ತಿರಸ್ಕರಿಸಿದೆ ಎಂದರು.
ಮೇ ತಿಂಗಳಲ್ಲಿ ಬಿಪಿಎಲ್- ಎಪಿಎಲ್ ಫಲಾನುಭವಿಗಳಿಗೆ 1.44 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಿತ್ತು. ಆದರೆ, 28 ಸಾವಿರ ಟನ್ ಕಡಿಮೆ ಅಕ್ಕಿ ಕೇಂದ್ರದಿಂದ ಬಿಡುಗಡೆಯಾಗಿದೆ. ಅವರು ಕೊಡಬೇಕಾಗಿರುವುದನ್ನೇ ಕೊಟ್ಟಿಲ್ಲ. ಅಲ್ಲದೇ 30 ಕೆ.ಜಿ. ಅಕ್ಕಿ ಯೋಜನೆಗೆ ನಮ್ಮಲ್ಲಿ ದಾಸ್ತಾನು ಇಲ್ಲ ಎಂದೂ ಹೇಳಿದ್ದಾರೆ. ಹಾಗಾಗಿ ಜನರಿಗೆ ಸಂಶಯ ಕಾಡುತ್ತಿದೆ ಎಂದರು.
ಮೊದಲ ಸಿಎಂ: ವಿಧಾನಸಭೆ ರಚನೆಯಾಗಿ, ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡುವ ಸಂದರ್ಭದಲ್ಲಿ ಅವರು ಸರ್ಕಾರದ ನೀತಿ ನಿಲವುಗಳನ್ನು ಹೇಳಿದ ನಂತರ ಮುಖ್ಯಮಂತ್ರಿಯವರು ಕಾರ್ಯಕ್ರಮ ಘೋಷಣೆ ಮಾಡುವುದು ಪರಂಪರೆ. ಆದರೆ, ದೇಶದ ಇತಿಹಾಸದಲ್ಲಿ ಔಪಚಾರಿಕ ಸಂಪುಟ ಸಭೆಯಲ್ಲಿಯೇ ಬೃಹತ್ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ ಮೊದಲ ಸಿಎಂ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದರು.
ಕಾರ್ಯಕ್ರಮ ಘೋಷಣೆಗೆ ಮುನ್ನ ಹಣಕಾಸು ಪರಿಸ್ಥಿತಿ, ಸಂಪನ್ಮೂಲಗಳನ್ನು ನೋಡಿ, ಅನುಮತಿ ಪಡೆದು ಘೋಷಣೆ ಮಾಡಿದರೆ ಅದಕ್ಕೆ ಮಹತ್ವ. ತರಾತುರಿಯಲ್ಲಿ ಘೋಷಣೆ ಮಾಡಿ ನಂತರ ಬದಲಿಸಲು ಹೋಗಬಾರದು ಎಂದು ಅವರು ಕಿವಿಮಾತು ಹೇಳಿದರು.
ಬಿಜೆಪಿಯೇತರ ಹೊಂದಾಣಿಕೆ
ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆ ಮೀಸಲಾತಿ ಘೋಷಣೆಯಾದ ನಂತರ ಅತಂತ್ರವಿರುವ ಸ್ಥಳಗಳಲ್ಲಿ ಬಿಜೆಪಿಯೇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಕರ್ನಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಆದರೂ ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ಅಲ್ಲಿಯ ಮುಖಂಡರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಿಜೆಪಿಯೊಂದಿಗೆ ದೂರವಿರಲು ಗರಿಷ್ಠ ಪ್ರಯತ್ನ ನಡೆಸುತ್ತೇವೆ ಎಂದಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಕ್ತ ಮನಸ್ಸಿನಿಂದ ಇದ್ದೇನೆ. ಹಲವು ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.
ಗೋಷ್ಠಿಯಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್ಎಂ. ಮಂಜುನಾಥ ಗೌಡ, ಜಿಲ್ಲಾ ಕೆಜೆಪಿ ಅಧ್ಯಕ್ಷ ಜ್ಯೋತಿಪ್ರಕಾಶ್, ರಾಜ್ಯ ಕಾರ್ಯದರ್ಶಿ ಅನಂತರಾಮಯ್ಯ, ಪಕ್ಷದ ನಗರಸಭಾ ಸದಸ್ಯರು ಹಾಜರಿದ್ದರು.
ಸಂಸದ ರಾಘವೇಂದ್ರ ಪ್ರತ್ಯಕ್ಷ: ಚುನಾವಣೆ ಸಂದರ್ಭದಲ್ಲಿಯೂ ಕರ್ನಾಟಕ ಜನತಾ ಪಕ್ಷದೊಂದಿಗೆ ನೇರವಾಗಿ ಕಾಣಿಸಿಕೊಳ್ಳದ ಸಂಸದ ಬಿ.ವೈ. ರಾಘವೇಂದ್ರ ಅವರು ಭಾನುವಾರ ಯಡಿಯೂರಪ್ಪ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡರು. ಪಕ್ಷದ ಪತ್ರಿಕಾಗೋಷ್ಠಿ ಅಥವಾ ಬಹಿರಂಗ ಸಭೆಗಳಲ್ಲಿ ಅವರು ಹಿಂದೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಭಾನುವಾರ ಕಾಣಿಸಿಕೊಳ್ಳುತ್ತಿರುವುದು ಮೊದಲು.
ಪ್ರಣಾಳಿಕೆಯಲ್ಲಿ ಇರಲಿಲ್ಲ....
ಗುಟ್ಕಾ ನಿಷೇಧ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ರಾ ಯಾಕೆ ನಿಷೇಧ ಮಾಡಿದ್ರಿ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಗುಟ್ಕಾ ನಿಷೇಧಿಸಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಇದಕ್ಕೂ ಮುನ್ನ ವಿಪಕ್ಷ ನಾಯಕರೊಂದಿಗೆ, ರೈತರೊಂದಿಗೆ ಚರ್ಚಿಸಿ ಅವರನ್ನು ವಿಶ್ವಾಸಕ್ಕೆ ಪಡೆಯಬೇಕಿತ್ತು ಎಂದು ಅವರು ಹೇಳಿದ್ದಾರೆ.
ಕೆಲಕಾಲದಿಂದ ಬರ ಬಂದಿದೆ. ಆಡಕೆ ಮರಗಳು ಒಣಗಿವೆ. ಇಂತಹ ಸಂದರ್ಭದಲ್ಲಿ ಗುಟ್ಕಾ ನಿಷೇಧದಂತಹ ನಿರ್ಧಾರವನ್ನು ಚರ್ಚಿಸಿ ತೆಗೆದುಕೊಳ್ಳಬೇಕಿತ್ತು. ಇದು ಪ್ರಜಾಪ್ರಭುತ್ವ, ಸರ್ವಾಧಿಕಾರ ಅಲ್ಲ ಎಂದು ಅವರು ಕಿಡಿ ಕಾರಿದರು.
ಉಡುಪಿ- ಗೋಕರ್ಣ ಮಠಗಳನ್ನು ಮುಜರಾಯಿ ಇಲಾಖೆ ಸುಪರ್ದಿಗೆ ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ರಾ ಕಡಿಮೆ ದರದ ಮದ್ಯ ತರುತ್ತೇನೆ ಎಂದಿದ್ದೀರಿ ಇದು ನಿಮ್ಮ ನಿಲವು ತದ್ವಿರುದ್ಧವಾಗಿದೆ. ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಜಾರಿಗೆ ತಂದರೆ ನಮ್ಮ ಅಭ್ಯಂತರವಿರಲಿಲ್ಲ. ಈಗ ತರಾತುರಿ ಏಕೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಆಡಳಿತ ಪಕ್ಷದ ಸದಸ್ಯರಿಗೇ ಮುಖ್ಯಮಂತ್ರಿಯವರ ಮಾತುಗಳು ಸಮಾಧಾನ ತಂದಿವೆ ಎಂದು ನನಗನಿಸುತ್ತಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

