ಶಿವಮೊಗ್ಗ

ಕಾನೂನು ಬಾಹಿರವಾಗಿ ವೈದ್ಯರ ಬಂಧನ: ಆರೋಪ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಜೂ.6
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ನೋಡಲ್ ಅಧಿಕಾರಿಗಳು ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರನ್ನು ಕಾನೂನು ಬಾಹಿರವಾಗಿ ಬಂಧಿಸುತ್ತಿದ್ದಾರೆ ಎಂದು ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರ ಸಂಘದ ರಾಜ್ಯ ಘಟಕದ ಪ್ರಧಾನ ಸಂಯೋಜಕ ಬಿ.ಎಸ್. ಚಂದ್ರು ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆದೇಶ ಹೊರತಾಗಿಯೂ, ಜಿಲ್ಲೆಯಲ್ಲಿ ವೈದ್ಯರನ್ನು ಬಂಧಿಸಲಾಗುತ್ತಿದ್ದು, ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ಶಿವಣ್ಣ ರೆಡ್ಡಿ ಮತ್ತು ನೋಡಲ್ ಅಧಿಕಾರಿ ಕೃಷ್ಣರಾವ್ ಕಾಳೆ ವಿರುದ್ಧ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.
ಲಂಚ ಕೊಡದಿದ್ದಕ್ಕೆ ಬಂಧನ: ಇತ್ತೀಚೆಗೆ ನಗರದಲ್ಲಿ ಗೀತಾ ಹಾಗೂ ಶೀನಿ ಎಂಬ ಇಬ್ಬರು ಪಾರಂಪರಿಕ ಮಹಿಳಾ ವೈದ್ಯರ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಅಧಿಕಾರಿ ಕೃಷ್ಣ ರಾವ್ ಕಾಳೇ ದಾಳಿ ಮಾಡಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು, ಲಂಚ ನೀಡದಿದ್ದರಿಂದ ಈ ಇಬ್ಬರು ಮಹಿಳಾ ಪಾರಂಪರಿಕ ವೈದ್ಯರ ಮೇಲೆ ದೂರು ನೀಡಿ ಬಂಧನಕ್ಕೊಳಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸುಮಾರು 3ಸಾವಿರ ಹಾಗೂ ರಾಜ್ಯದಲ್ಲಿ 30 ಸಾವಿರ ಪಾರಂಪರಿಕ ವೈದ್ಯರಿದ್ದಾರೆ. ಇವರು ಯಾರು ನಕಲಿ ವೈದ್ಯರಲ್ಲ. ಬದಲಾಗಿ ಅರ್ಹತೆ ಇಲ್ಲದ ವೈದ್ಯರಾಗಿದ್ದಾರೆ ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಯನ್ನು ನೀಡಲು ಪಾರಂಪರಿಕ ವೈದ್ಯರಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಸರ್ಕಾರ ಇದೇ ವೈದ್ಯರಿಗೆ ಸೂಕ್ತ ತರಬೇತಿ ನೀಡಿ ಗ್ರಾಮೀಣ ಪ್ರದೇಶದ ಜನತೆಯ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು.
ಕಾಯ್ದೆಯಲ್ಲಿ ಉಲ್ಲೇಖ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಹಾಗೂ 2009ರ ನಿಯಮ ಪ್ರಕಾರ ವೈದ್ಯಕೀಯ, ಆಯುರ್ವೇದ, ಹೋಮಿಯೋಪಥಿ ಮಂಡಳಿಗಳಿಂದ ವಿದ್ಯಾರ್ಹತೆ ಪಡೆದವರು ಮಾತ್ರ ನಿಯಮ 3 ನೋಂದಣಿಗೆ ಅರ್ಹರು, ಇಲ್ಲವಾದಲ್ಲಿ ನಿಯಮ 15 ರಂತೆ ಅನರ್ಹರು, ನಂತರ 19ರ ಪ್ರಕಾರ ಶಿಕ್ಷಾರ್ಹ ಎಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಈ ಸಂಬಂಧವಾಗಿ ಸಂಘದಿಂದ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿ, ಅನ್ಯಾಯದ ಬಗ್ಗೆ ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಕಾಯ್ದೆ ಸಂವಿಧಾನ ಬಾಹಿರವಾಗಿದ್ದು, ಕಾಯ್ದೆಯನ್ನು ರದ್ದು ಪಡಿಸಿ ಅಥವಾ ನಿಯಮ (3),(15) ಮತ್ತು (19) ಕ್ಕೆ ತಿದ್ದುಪಡಿ ಮಾಡುವವರೆಗೆ ಯಥಾಸ್ಥಿತಿ ಕಾಪಾಡಲು ಸೂಚಿಸಿದರೂ, ಇಲ್ಲಿನ ಡಿಎಚ್‌ಓ ಮತ್ತು ನೋಡಲ್ ಅಧಿಕಾರಿಗಳು ವಂಶಪಾರಂಪರಿಕ ವೈದ್ಯರನ್ನು ನಕಲಿ ಎಂದು ಬಂಧಿಸುವುದು ಸರಿಯಲ್ಲ ಎಂದರು.
ಕಿರುಕುಳ: ಸಂಘದ ಕಾನೂನು ಸಲಹೆಗಾರ ಈಸೂರು ಲೋಕೇಶ್ ಮಾತನಾಡಿ, ಡಿಎಚ್‌ಓ ಮತ್ತು ನೋಡಲ್ ಅಧಿಕಾರಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಇದಕ್ಕೆ ಸ್ಪಂದಿಸದ ವಂಶಪಾರಂಪರಿಕ ವೈದ್ಯರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್.ಎನ್. ಗೌಡ, ಉಪಾಧ್ಯಕ್ಷ ಗಂಗಾಧರ ನಾಯರ್, ಪ್ರಧಾನ ಕಾರ್ಯದರ್ಶಿ ಶಾಂತಕುಮಾರ್, ಖಜಾಂಚಿ ರಾಜು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.