ಶಿವಮೊಗ್ಗ

ವಿಶಿಷ್ಟ ರೀತಿಯಲ್ಲಿ ಪರಿಸರ ದಿನಾಚರಣೆ

Published On :

ಕ.ಪ್ರ. ವಾರ್ತೆ ಸಾಗರ   ಜೂ.6
ಬುಧವಾರ ಪರಿಸರ ದಿನಾಚರಣೆ ಅಂಗವಾಗಿ ಎಲ್ಲೆಡೆ ಸವಕಲು ಭಾಷಣ, ಕಳೆದ ವರ್ಷ ಗಿಡನೆಟ್ಟ ಜಾಗದಲ್ಲಿಯೇ ಮತ್ತೆ ಗಿಡ ನೆಡುವ ಭರಾಟೆ ನಡೆದರೆ ತಾಲೂಕಿನ ಚಿಪ್ಪಳಿ  ಲಿಂಗದಹಳ್ಳಿ ಗ್ರಾಮದ ನಾಗರಿಕರು ಕಳೆದ ನಾಲ್ಕಾರು ತಿಂಗಳಲ್ಲಿ ಅಕಾಲಿಕ ಮರಣಕ್ಕೆ ತುತ್ತಾದವರನ್ನು ಸ್ಮರಿಸಿಕೊಂಡು ಅವರ ನೆನಪಲ್ಲಿ ಗಿಡನೆಟ್ಟು ಮಾದರಿಯಾದರು.
ಪರಿಸರ ಪ್ರೇಮ: ಇಕ್ಕೇರಿ ಭಾಗದ ಶಿವಪ್ಪನಾಯಕ ಸ್ಮಾರಕ ಔಷಧ ವನ ಸಮಿತಿ ಪ್ರತಿವರ್ಷ ಜೂ.5ರಂದು ಪರಿಸರ ದಿನಾಚರಣೆಯನ್ನು ಸಭಾಕಾರ್ಯಕ್ರಮ ನಡೆಸಿ ಆಚರಿಸುತ್ತಿತ್ತು. ಆದರೆ ಈ ಬಾರಿ ಸಂಘಟನೆಯ ಕಾರ್ಯಕರ್ತರಲ್ಲಿ ಆಜುಬಾಜಿನ ದೊಡ್ಡ ಸಂಖ್ಯೆಯ ಗ್ರಾಮವಾಸಿಗಳ ಸಾವಿನ ಕಟು ಕಹಿ ಕಂಗೆಡಿಸಿತ್ತು. ಸಮೀಪದ ಹೊಸೂರು ಗ್ರಾಮದ ಎಚ್.ಎಸ್. ಗೌತಮ ಎನ್ನುವ ಯುವಕ ಧಾರವಾಡದಲ್ಲಿ ನಾಲ್ಕು ದಿನಗಳ ಹಿಂದೆ ಕಾರು ಅಪಘಾತದಲ್ಲಿ ದುರ್ಮರಣ ಹೊಂದಿದ ಕಾರಣ ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿಲ್ಲ. ಆದರೆ ಪರಿಸರ ಪ್ರೇಮಕ್ಕೆ ಯಾವುದೇ ಚ್ಯುತಿ ಬರಲಿಲ್ಲ.
 ಷಟಲ್‌ಬ್ಯಾಡ್ಮಿಂಟನ್‌ನಲ್ಲಿ ರಾಜ್ಯದ ಮೂರನೇ ಶ್ರೇಯಾಂಕ ಪಡೆದಿದ್ದ ಗೌತಮ, ಸಂಘಟನೆಯ ಕಾರ್ಯದರ್ಶಿಯಾಗಿ ದುಡಿದಿದ್ದ ಎಲ್.ಡಿ. ಸುರೇಶಭಟ್, ಹೋಮಿಯೋಪಥಿಕ್ ವೈದ್ಯರಾಗಿ ಉಚಿತವಾಗಿ ಸೇವೆ ಸಲ್ಲಿಸಿದ್ದ ಟಿ.ಎಸ್.ಚಂದ್ರಶೇಖರರಾವ್, ಅನಾರೋಗ್ಯದಿಂದ ಅಸು ನೀಗಿದ ಹೊಸೂರಿನ ಶರಾವತಿ ಎಸ್. ರಾವ್ ಸ್ಮರಣಾರ್ಥ ಸಸಿಗಳನ್ನು ನೆಡಲಾಯಿತು.
 ಕಲ್ಮನೆ ಗ್ರಾಪಂ ಅಧ್ಯಕ್ಷ ಎಲ್.ವಿ. ಅಕ್ಷರ, ದಾನಿ ಸಿ. ಗೋಪಾಲಕೃಷ್ಣರಾವ್, ಮೂಲಿಕಾ ವೈದ್ಯ ರಮೇಶ ಕೊಡ್ಲುತೋಟ, ಗ್ರಾಪಂ ಸದಸ್ಯ ಸುರೇಶ್‌ಗೌಡ, ಸುಬ್ರಾಯ ಭಟ್ ಇಕ್ಕೇರಿ, ಸುದರ್ಶನ ಯುವಕ ಸಂಘದ ಅಧ್ಯಕ್ಷ ಶೇಖರಪ್ಪ, ಜಯಪ್ರಕಾಶ್ ಗೋಳಿಕೊಪ್ಪ, ಎಲ್.ವಿ. ಸತೀಶ್, ಹೊಸೂರು ಶ್ರೀಕಾಂತ್, ಕಲಾವಿದ ನರಸಿಂಹಮೂರ್ತಿ ಹಳೆಇಕ್ಕೇರಿ, ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.