ಒತ್ತುವರಿ ಭೂಮಿಗೆ ನೋಟಿಸ್: ರೈತರ ಆಕ್ರೋಶ
ನರಸಿಂಹರಾಜಪುರ: ಒತ್ತುವರಿ ಭೂಮಿಯನ್ನು ಖುಲ್ಲಾ ಮಾಡಿಸುವ ಬಗ್ಗೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡುತ್ತಿರುವ ವಿಷಯದ ಬಗ್ಗೆ ಗ್ರಾಮ ಸಭೆಯಲ್ಲಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೆಣಸೂರು ಗ್ರಾಪಂ ವ್ಯಾಪ್ತಿಯ ಕಲ್ಲುಗುಡ್ಡೆ ಗ್ರಾಮದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ವಿಷಯ ಪ್ರಸ್ತಾಪ ಮಾಡಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಅರಣ್ಯಾಧಿಕಾರಿಗಳು, ಸರ್ಕಾರದ ಆದೇಶದಂತೆ ಮೀಸಲು ಅರಣ್ಯ, ರಾಜ್ಯ ಅರಣ್ಯ ಪ್ರದೇಶದಲ್ಲಿ 10 ಎಕರೆ ಒತ್ತುವರಿ ಮಾಡಿದ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.
ಚರ್ಚೆ ತಾರಕಕ್ಕೇರಿದಾಗ ಮಧ್ಯೆ ಪ್ರವೇಶ ಮಾಡಿದ ಮೆಣಸೂರು ಗ್ರಾಪಂ ಅಧ್ಯಕ್ಷ ಶ್ರೀನಾಥ್, ಅರಣ್ಯ ಒತ್ತುವರಿ ತೆರವು ನಿರ್ಧಾರದ ಬಗ್ಗೆ ಗ್ರಾಪಂ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಚರ್ಚೆ ಬೇಡ ಎಂದು ಚರ್ಚೆಗೆ ಅಂತ್ಯ ಹಾಡಿದರು.
ಗಿಡ ವಿತರಿಸುವ ಕಾರ್ಯಕ್ರಮ: ಅರಣ್ಯ ಇಲಾಖೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಅರಣ್ಯಾಧಿಕಾರಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗ್ಯಾಸ್ ಒಲೆ, ಅಸ್ತ್ರ ಒಲೆ ನೀಡುವ ಯೋಜನೆ ಇದೆ. ಸ್ವಂತ ಹಿಡುವಳಿ ಹೊಂದಿದ ರೈತರಿಗೆ ಗಿಡ ವಿತರಿಸುವ ಕಾರ್ಯಕ್ರಮವಿದೆ. ಪ್ರತಿ ಗಿಡಕ್ಕೆ 1 ನೇ ವರ್ಷ 10 ರುಪಾಯಿ, 2 ನೇ ವರ್ಷ 15 ರು ಹಾಗೂ 3 ನೇ ವರ್ಷ 20 ರುಪಾಯಿ ನೀಡಲಾಗುತ್ತದೆ. ಒಟ್ಟು 40 ರುಪಾಯಿ ಸಹಾಯಧನ ನೀಡಲಾಗುತ್ತದೆ ಎಂದರು.
ಉಚಿತ ತರಬೇತಿ: ಕೃಷಿ ಇಲಾಖೆ ಅಧಿಕಾರಿ ಶ್ರೀಧರ್ ಸಭೆಗೆ ಮಾಹಿತಿ ನೀಡಿ, ಬತ್ತದ ಬಿತ್ತನೆ ಬೀಜ ಬಂದಿದ್ದು ಖಾತೆ ಹೊಂದಿದ ರೈತರಿಗೆ ಸಹಾಯ ಧನದಲ್ಲಿ ವಿತರಿಸಲಾಗುತ್ತದೆ. ಸುಣ್ಣ, ಟಾರ್ಪೆಲ್ ಕೃಷಿ ಇಲಾಖೆಯಿಂದ ರಿಯಾಯ್ತಿ ದರದಲ್ಲಿ ನೀಡಲಾಗುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿ, ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಪರೀಕ್ಷೆ ತೆಗೆದುಕೊಂಡರೆ ಅಂತವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ತರಬೇತಿ ನೀಡುವ ಸೌಲಭ್ಯವಿದೆ ಎಂದರು.
ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ, ಬಿಪಿಎಲ್ ಕುಟಂಬದವರಿಗೆ ಹೃದಯ, ಕಿಡ್ನಿ ಮುಂತಾದ ಖಾಯಿಲೆಗೆ ಸಂಬಂಧಿಸಿ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದವರಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಡೆಂಘೀ ಜ್ವರ ಕಾಣಿಸಿಕೊಂಡಿದ್ದು ಇದನ್ನು ತಡೆಯಲು ಗ್ರಾಮಸ್ಥರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ಮೆಣಸೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹೇಶ್, ನಿರ್ಮಲ ಅಭಿಯಾನ ಯೋಜನೆಯಡಿ ಮನೆ ಕಟ್ಟಲು, ಶೌಚಾಲಯ ನಿರ್ಮಿಸಲು ಸಹಾಯಧನ ನೀಡಲಾಗುವುದು ಎಂದರು.
ಮೆಣಸೂರು ಗ್ರಾಪಂ ಅಧ್ಯಕ್ಷ ಶ್ರೀನಾಥ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ವನಜಾಕ್ಷಿ, ಸದಸ್ಯರಾದ ರತ್ನೇಶ್, ಡಯನಾ, ರವಿಚಂದ್ರ, ನೋಡಲ್ ಅಧಿಕಾರಿ ಬಿ.ಜಿ. ಮಾಳಮ್ಮನವರ್, ತಾಪಂ ಸಹಾಯಕ ನಿರ್ದೇಶಕ ರಾಜೇಗೌಡ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

