ಶಿವಮೊಗ್ಗ

ಬಿಸಿಯೂಟ ನೀಡದ ಶಾಲೆ ವಿರುದ್ಧ ಪ್ರತಿಭಟನೆ

Published On :

ಕ.ಪ್ರ.ವಾರ್ತೆ  ಸೊರಬ   ಜೂ.8
ಶಾಲಾ ತರಗತಿಗಳು ಆರಂಭವಾದಂದಿನಿಂದಲೂ ಮಕ್ಕಳಿಗೆ ಬಿಸಿ ಊಟ ನೀಡದೆ ವಂಚಿಸಲಾಗುತ್ತಿದೆ ಎಂದು ಬಿಎಸ್ಪಿ ಮುಖಂಡ ಗುಡವಿ ಬಸವಣ್ಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಚಂದ್ರಗುತ್ತಿ ಹೋಬಳಿ ನೆಲ್ಲೂರು ಗ್ರಾಮದ ಸಕಿಪ್ರಾ ಶಾಲೆಗೆ ಮುತ್ತಿಗೆ ಹಾಕಿದ್ದ ಅವರು, ಕಳೆದ 10 ದಿನಗಳಿಂದಲೂ ಬಿಸಿ ಊಟದ ವ್ಯವಸ್ಥೆಯಿಲ್ಲ, ಈ ಹಿಂದೆ ಅಡುಗೆ ಮಾಡುತ್ತಿದ್ದ ಕಾರ್ಯಕರ್ತೆ ನಾಗವೇಣಿ ಅವರನ್ನು ಉದ್ದೇಶಪೂರ್ವಕವಾಗಿ ವಜಾಗೊಳಿಸಲಾಗಿದೆ. ಶಿಕ್ಷಕರು ಬಿಸಿ ಊಟದ ಅಲಭ್ಯತೆ ತಿಳಿದಿದ್ದರೂ ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲ. ಸರ್ಕಾರದ ಯೋಜನೆ ದುರುಪಯೋಗವಾಗಿದೆ ಎಂಬ ಆರೋಪಗಳನ್ನು ಮಾಡಲಾಯಿತು.
ಕಾರಣ: ಚಂದ್ರಗುತ್ತಿ ಹೋಬಳಿ ಹರೀಶಿ ಗ್ರಾಪಂ ವ್ಯಾಪ್ತಿಯ ನೆಲ್ಲೂರು ಗ್ರಾಮದ ಸಕಿಪ್ರಾಶಾಲೆಯಲ್ಲಿ 23 ವಿದ್ಯಾರ್ಥಿಗಳು, ಒಬ್ಬ ಶಿಕ್ಷಕರು ಇದ್ದಾರೆ. ಅಡುಗೆ ಕಾರ್ಯಕರ್ತೆ ನಾಗವೇಣಿ ಹಲವಾರು ವರ್ಷದಿಂದ ಇದೇ ಶಾಲೆಯಲ್ಲಿ ಮುಖ್ಯ ಅಡುಗೆಯವಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈಗ ವಜಾ ಮಾಡಲಾಗಿದೆ. ಹೊಸಬರ ಆಯ್ಕೆ ಆಗಿಲ್ಲ, ಬಿಸಿ ಊಟ ವಿತರಣೆ ಸ್ಥಗಿತಗೊಂಡಿದೆ.
ಆರೋಪ: ಹಲವಾರು ವರ್ಷಗಳಿಂದ ಅಡುಗೆ ಕೆಲಸ ನಿರ್ವಹಿಸುತ್ತಿರುವ ನಾಗರತ್ನ ಅವರನ್ನು ಈಗ ಶಾಲಾ ಆರಂಭದ ಹೊತ್ತಿಗೆ ಶಾಲಾ ಸಮಿತಿ ಅಧ್ಯಕ್ಷ ದೇಸಾಯಿ, ಗ್ರಾಮ ಸಮಿತಿ ಅಧ್ಯಕ್ಷ ವೀರಭದ್ರಪ್ಪ, ಶಿಕ್ಷಕ ಲೋಕೇಶ್ ದುರುದ್ದೇಶದಿಂದ ವಜಾ ಮಾಡಿರುವುದು ಖಂಡನೀಯ, ಯಾವುದೇ ಕಾರಣ ಇಲ್ಲದೆ ಹೀಗೆ ಏಕಾಏಕಿ ತೆಗೆದುಹಾಕುವ ಮೂಲಕ ಸರ್ವಾಧಿಕಾರ ಧೋರಣೆ ನಡೆದಿದೆ.  23 ವಿದ್ಯಾರ್ಥಿಗಳು ಸರ್ಕಾರದ ಮಹತ್ವಪೂರ್ಣ ಯೋಜನೆಯಿಂದ ವಂಚಿತರಾಗಿದ್ದಾರೆ. ಮಕ್ಕಳ ಹಕ್ಕನ್ನು ಚಿವುಟಿ ಹಾಕಲಾಗಿದೆ ಎಂಬ ಆರೋಪ ಬಿಎಸ್ಪಿ ಮುಖಂಡ ಬಸವಣ್ಯಪ್ಪ ಅವರದು.
ರಾಜ್ಯ ಅಕ್ಷರ ದಾಸೋಹ ಯೋಜನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಹೊಸಕೊಪ್ಪ ಮಾತನಾಡಿ, ಶಾಲಾ ಸಮಿತಿ ಹಾಗೂ ಶಿಕ್ಷಕರು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಿಗೆ ಮಾಹಿತಿ ನೀಡದೆ ಈ ರೀತಿ ಮಾಡಿರುವುದು ಅಪರಾಧ, ಶಿಕ್ಷಕರನ್ನು ಕೂಡಲೆ ಇಲಾಖೆ ಅಮಾನತ್ತಿನಲ್ಲಿಡಬೇಕು ಎಂದು ಒತ್ತಾಯಿಸಿದ್ದಾರೆ.
ಸ್ಪಷ್ಟನೆ: ಶಾಲಾ ಅವ್ಯವಸ್ಥೆ ಕುರಿತು ಸಮಗ್ರ ಮಾಹಿತಿ ಪಡೆದ ಬಳಿಕ ಮುಂದಿನ ಕ್ರಮ ಎಂದು ಕ್ಷೇತ್ರದ ತಿರುಗಾಟದಲ್ಲಿರುವ ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬಿಇಒ ಹಾಲಾನಾಯ್ಕ್, ಶಾಲೆಯಲ್ಲಿ ಬಿಸಿ ಊಟ ನಿಲ್ಲಿಸಿರುವ ಬಗ್ಗೆ ನನಗೆ ತಡವಾಗಿ ತಿಳಿದು ಬಂದಿದೆ, ಸ್ಥಳಕ್ಕೆ ಭೇಟಿ ನೀಡಿ ಗ್ರಾಮ ಸಮಿತಿ ಮತ್ತು ಶಾಲಾ ಸಮಿತಿಯೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಯೋಜನೆಯ ತಾಲೂಕು ಸಂಚಾಲಕ ಹಿರೇಮಠಸ್ವಾಮಿ, ತುಕಾರಾಂ ನಡಹಳ್ಳಿ, ದತ್ತಾತ್ರೇಯ, ಬಸವರಾಜಸ್ವಾಮಿ, ಮಂಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.