ಶಿವಮೊಗ್ಗ

ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಮಧು ಭೇಟಿ

Published On :

ಕ.ಪ್ರ.ವಾರ್ತೆ  ಸೊರಬ   ಜೂ.8
ತಾಲೂಕು ಪ್ರವಾಸದಲ್ಲಿರುವ ನೂತನ ಶಾಸಕ ಮಧು ಬಂಗಾರಪ್ಪ ಶನಿವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದರು.
ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕುಂದು, ಕೊರತೆ, ಸಮಗ್ರ ಮಾಹಿತಿಯನ್ನು ಕೂಡಲೇ ಒದಗಿಸಿಕೊಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯೂ ಸೇರಿದಂತೆ ಇನ್ನೂ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇರುವುದು ಗಮನಕ್ಕೆ ಬಂದಿದೆ, ಈ ಬಗ್ಗೆ ವಿವರ ನೀಡಿದ ಬಳಿಕ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ಕೊರತೆ ನೀಗಿಸಲು ಪ್ರಯತ್ನಿಸಲಾಗುವುದು. ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿರುವ ಯಾವುದೇ ವೈದ್ಯರನ್ನು ನನ್ನ ಗಮನಕ್ಕೆ ತಾರದೆ ವರ್ಗಾಯಿಸಕೂಡದು ಎಂದು ತಿಳಿಸಿದರು.
ಸ್ವಚ್ಛತೆಗೆ ಗಮನ ಹರಿಸಿ: ಆಸ್ಪತ್ರೆಯಲ್ಲಿನ ಎಲ್ಲ ರೋಗಿಗಳಿಗೆ ಊಟೋಪಚಾರದ ವ್ಯವಸ್ಥೆ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಖರ್ಚು, ವೆಚ್ಚ ಇತ್ಯಾದಿ ಗಮನಿಸಿ ಅಳವಡಿಸಲು ಮುಂದಾಗುತ್ತೇವೆ, ಮುಖ್ಯವಾಗಿ ಆಸ್ಪತ್ರೆ ಸ್ವಚ್ಛತೆ ಕುರಿತಂತೆ ಹೆಚ್ಚಿನ ಗಮನಹರಿಸಬೇಕು, ಡೆಂಘೀ ಜ್ವರದ ಬಗ್ಗೆ ಮುಂಜಾಗೃತ ಕ್ರಮ ತೆಗೆದುಕೊಂಡು ರೋಗ ಹರಡದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ. ನಾಗೇಂದ್ರಪ್ಪ ಡೆಂಘೀ ಸೋಂಕಿನ, ಮುಂಜಾಗ್ರತೆ ಕ್ರಮದ ಕುರಿತು ಮಾಹಿತಿ ನೀಡಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಅರವಳಿಕೆ ತಜ್ಞರ ನೇಮಕ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸ್ಥಳಾಂತರಿಸಿ, ಅಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ತೆರೆಯುವುದು, ಇರುವ 30 ಹಾಸಿಗೆ ವೈದ್ಯರ ನೇಮಕಾತಿಯಿಂದ 100 ಹಾಸಿಗೆಗೆ ಉನ್ನತೀಕರಿಸುವುದು. ವೈದ್ಯರೊಂದಿಗೆ ಸಿಬ್ಬಂದಿ ಕೊರತೆ ನೀಡಿಸುವುದು, ಸಿಬ್ಬಂದಿ ವಸತಿ ಗೃಹ ದುರಸ್ಥಿ, ಹೆಚ್ಚೂವರಿ ವಸತಿ ಗೃಹಗಳ ನಿರ್ಮಾಣ, ಮುಂತಾದ ಬೇಡಿಕೆಗಳುಳ್ಳ ಮನವಿಯನ್ನು ಇದೇ ವೇಳೆ ಶಾಸಕರಿಗೆ ನೀಡಲಾಯಿತು.
ತಾಲೂಕು ಪಂಚಾಯಿತಿ  ಅಧ್ಯಕ್ಷ ಸದಾನಂದಗೌಡ, ಇಒ ಪುಷ್ಪಾ ಎಂ. ಕಮ್ಮಾರ್, ಪಿಡಬ್ಲ್ಯೂಡಿ ಸಾಗರ ಉಪವಿಭಾಗದ ಅಭಿಯಂತರ ರಾಜಕುಮಾರ್, ಸೊರಬ ಎಇಇ ಬಾಲನ್, ಡಾ. ಸತೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀರೇಶ್
ಕುಮಾರ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.