ಶಿವಮೊಗ್ಗ

ಕನ್ನಡಿಗರಿಂದಲೇ ಕನ್ನಡ ಅವನತಿ: ಕಾಗೋಡು

Published On :

ಕ.ಪ್ರ.ವಾರ್ತೆ, ಹೊಸನಗರ,  ಜೂ.9
ಕನ್ನಡ ಭಾಷೆ, ನಾಡು ನುಡಿ ಬಗ್ಗೆ ಅತೀವ ಕಾಳಜಿ ತೋರುವವರೆ ತೆರೆಮರೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ಕೋರುತ್ತಿರುವುದು ನೋವಿನ ಸಂಗತಿ ಎಂದು ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ ವಿಷಾದಿಸಿದರು.
ಪಟ್ಟಣದ ವಿದ್ಯಾಸಂಘ ರಂಗಮಂದಿರದಲ್ಲಿ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಅವರು, ಕನ್ನಡದ ಹೋರಾಟಗಾರರು ಎಂದು ಸೋಗು ಹಾಕಿಕೊಂಡವರಿಂದಲೆ ಕನ್ನಡ ಅವನತಿಯಾಗುತ್ತಿದೆ. ನಮ್ಮ ನಾಡು ನುಡಿ, ಸಂಸ್ಕೃತಿ ಬಗ್ಗೆ ಸ್ವಯಂ ಪ್ರೇರಿತ ಕಾಳಜಿ ಹೊಂದಿದಾಗ ಮಾತ್ರ ಕನ್ನಡದ ಉದ್ಧಾರ ಸಾಧ್ಯ ಎಂದರು.
ಕನ್ನಡಭವನ ನಿರ್ಮಾಣ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಕನ್ನಡ ಪ್ರೀತಿ, ಪುಸ್ತಕ ಪ್ರೀತಿ, ಪುಸ್ತಕ ಓದು ಮತ್ತು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಸಾರಸ್ವತ ಲೋಕಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅಧ್ಯಯನ ಪ್ರವೃತಿ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂಬುದನ್ನು ಅರಿಯಬೇಕು ಎಂದರು.
ಸಮ್ಮೇಳನಾಧ್ಯಕ್ಷ ಡಾ.ಎಸ್.ಪಿ. ಪದ್ಮಪ್ರಸಾದ್, ಕನ್ನಡರೇ ಕನ್ನಡದ ಬಗ್ಗೆ ಇರುವ ಕೀಳರಿಮೆಯಿಂದ ಹೊರಬರಬೇಕು. ಕನ್ನಡದ ನೆಲದಲ್ಲಿ ಬದುಕಲು ಬರುವ ಹೊರನಾಡಿನವರಿಗೆ ಕನ್ನಡ ಕಲಿಯ ಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಮಾಡಬೇಕಿದೆ ಎಂದರು. ಹೊಸ ತಂತ್ರಜ್ಞಾನ, ಮತ್ತು ಆಧುನಿಕತೆಯ ಭರಾಟೆಯಲ್ಲಿ ಕನ್ನಡದ ಸಂವೇದನೆ ಕಣ್ಮರೆಯಾಗುತ್ತಿದೆ. ನಾಡುನುಡಿ ನೆಲಜಲದ ಬಗ್ಗೆ ಮಾತನಾಡುವ ಸಾರಸ್ವತಲೋಕದ ಕೆಲವು ದಿಗ್ಗಜರೆ ಕನ್ನಡದ ಬಗ್ಗೆ ಸರ್ಕಾರವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತ ಪಡಿಸಿದರು.
ತಾಲೂಕಿನಲ್ಲಿ ಕನ್ನಡಭವನದ ಅಗತ್ಯವಿದ್ದು ಆರಂಭಿಕ ಹಂತವಾಗಿ ರು.10 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ಜಿಪಂ ಸದಸ್ಯರಾದ ಜ್ಯೋತಿ ಚಂದ್ರಮೌಳಿ, ಕಲಗೋಡು ರತ್ನಾಕರ್, ಶುಭ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷ ನಾಗರತ್ನ ದೇವರಾಜ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಗರ್ತಿಕೆರೆ ರಾಘಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹರಿಕುಮಾರ್,
ತಹಸೀಲ್ದಾರ್ ಅರ್ಚನಾ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.