'ಭಕ್ತಿ ಪಂಥದಿಂದ ಸಾತ್ವಿಕತೆ ನಿರ್ಮಾಣ ಸಾಧ್ಯ'
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.9
ಭಕ್ತಿ ಪಂಥಕ್ಕೆ ಸಮಾಜದಲ್ಲಿ ಸಾತ್ವಿಕತೆ ನಿರ್ಮಾಣ ಮಾಡುವ ಶಕ್ತಿ ಇದ್ದು, ಅದಕ್ಕಾಗಿಯೇ ಎಲ್ಲ ಧರ್ಮದ ಗುರುಗಳೂ ಸಂಗೀತಕ್ಕೆ ಶರಣಾದರು. ಸಂಗೀತದಿಂದ ಹೊರ ಹೊಮ್ಮವ ಕಂಪನ ವ್ಯಕ್ತಿಯ ಮನಸ್ಸಿನ ಮೇಲೆ ನಾನಾ ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ವಿದ್ವಾನ್ ಆರ್.ಕೆ. ಪದ್ಮನಾಭ ಹೇಳಿದರು.
ನಗರದ ಕರ್ನಾಟಕ ಸಂಘದಲ್ಲಿ ಭಾನುವಾರ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಸಂಗೀತ ಮತ್ತು ಭಕ್ತಿ ಕುರಿತು ಮಾತನಾಡಿದ ಅವರು, ಭಕ್ತಿ ಎಂಬುದು ಬದುಕಿನ ಒಂದು ರೀತಿ. ಅದಕ್ಕಾಗಿ ನಾವು ಕೆಲವೊಂದು ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅದರಿಂದ ಮಾತ್ರ ಭಕ್ತಿ ಪಂಥದ ಹುಟ್ಟು ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಜಾತಿ, ಮತಕ್ಕೆ ಅವಕಾಶ ಇಲ್ಲದ ಭಕ್ತಿ ಪಂಥದಲ್ಲಿ ಎಲ್ಲರೂ ಒಂದೇ ಆಗಿರುತ್ತಾರೆ. ಅಷ್ಟೇ ಅಲ್ಲ ಅವರು ಕರ್ಮಯೋಗಿಯೋ ಆಗಿರುತ್ತಾರೆ. ಪುರಂದರ ಹಾಗೂ ಕನಕದಾಸರು ಕರ್ಮಯೋಗಿಗಳಾಗಿದ್ದರು. ಹಾಗೆಯೇ ಮಠದ ದೈನಂದಿನ ಚಟುವಟಿಕೆಯಿಂದ ಹೊರಬಂದು ವಾದಿರಾಜರು ಬೆಸ್ತ ಸಮಾಜಕ್ಕೆ ತುಳುವಿನಲ್ಲಿ ಸರಳವಾಗಿ ಭಕ್ತಿಯ ಮಹತ್ವ ಹೇಳಿಕೊಟ್ಟರು ಎಂದರು.
ಕನಕದಾಸರ ಕೊಡುಗೆ ಅಪಾರ: ಭಕ್ತಿ ಸಂಗೀತಕ್ಕೆ ಕನಕದಾಸರು, ವಾದಿರಾಜರು ಹಾಗೂ ಪುರಂದರದಾಸರು ಅಪಾರ ಕೊಡುಗೆ ನೀಡಿದ್ದಾರೆ. ನಂತರದಲ್ಲಿ ಬಂದ ವಿಜಯ ದಾಸರು, ಶ್ಯಾಮಾಶಾಸ್ತ್ರಿಗಳು, ಮುತ್ತುರಾಜ ದೀಕ್ಷಿತರು ಈ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಿದರು. ತಮ್ಮ ಸ್ವಾರ್ಥ ರಹಿತ ಭಕ್ತಿಯ ಜತೆಗೆ ಸಂಗೀತ ಬಳಸಿಕೊಂಡು ಜನ ಸಾಮಾನ್ಯರ ಮೇಲೆ ದೊಡ್ಡ ಪರಿಣಾಮ ಬೀರಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಸಾತ್ವಿಕ ವಾತಾವರಣ ನಿರ್ಮಾಣ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಸಾಹಿತ್ಯದ ಜತೆಗೆ ಸಂಗೀತ ಬೆರೆತಲ್ಲಿ ಅದರ ಪರಿಣಾಮ ಇನ್ನೂ ಹೆಚ್ಚಾಗುತ್ತದೆ. ಆದ್ದರಿಂದ ಸಂಗೀತ, ಸಂಗೀತ ಹಾಗೂ ಭಕ್ತಿ ಒಂದಕ್ಕೊಂದು ಬೆಸೆದುಕೊಂಡಿವೆ. ಮಹಾ ಜ್ಞಾನಿಯಾಗಿದ್ದ ಬಸವಣ್ಣ ಸಹ ಸಂಗೀತದ ಮಹತ್ವವನ್ನು ತಮ್ಮ ವಚನಗಳಲ್ಲಿ ಸಾರಿದ್ದಾರೆ ಎಂದು ಹೇಳಿದರು.
ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಡಾ.ಎಚ್.ಎಸ್.ನಾಗಭೂಷಣ, ಉದಯ ಶಂಕರಶಾಸ್ತ್ರಿ ಮತ್ತಿತರು ಕಾರ್ಯಕ್ರಮದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

