ಸ್ಪೀಕರ್ ಸ್ಥಾನದ ಘನತೆ ಎತ್ತಿ ಹಿಡಿಯುವೆ
ಕ.ಪ್ರ.ವಾರ್ತೆ, ಹೊಸನಗರ, ಜೂ.10 ನಾನೀಗ ಒಂದು ಪಕ್ಷದ ಕಾರ್ಯಕರ್ತನಲ್ಲ ಬದಲಿಗೆ ಎಲ್ಲಾ ವರ್ಗ, ಪಕ್ಷದ ಪ್ರತಿನಿಧಿಯಾಗಿದ್ದು, ಸದನದಲ್ಲಿ ಸ್ಪೀಕರ್ ಸ್ಥಾನದ ಘನತೆಯನ್ನು ಎತ್ತಿ ಹಿಡಿಯುತ್ತೇನೆ ಎಂದು ಕ್ಷೇತ್ರದ ಜನರ ಸಮ್ಮುಖದಲ್ಲಿ ವಿಧಾಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಘೋಷಿಸಿದರು.
ತಾಲೂಕಿನ ನಿಟ್ಟೂರಿನಲ್ಲಿ ಗ್ರಾಪಂ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿದ ಕಾಗೋಡು, ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದೇನೆ. ನನಗೆ ಆಶೀರ್ವದಿಸಿದ ನಿಮಗೆ ಧನ್ಯವಾದ ಸಮರ್ಪಿಸುತ್ತೇನೆ. ಆದರೆ ಸ್ಪೀಕರ್ ಆದ ಬಳಿಕ ಪಕ್ಷಭೇದ ಮರೆತು ಕಾರ್ಯನಿರ್ವಹಿಸುವುದು ನನ್ನ ಜವಾಬ್ದಾರಿಯಾಗಿದ್ದು, ಇದನ್ನು ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸ್ವಚ್ಛ ಆಡಳಿತ: ಸ್ವಚ್ಚ ಮತ್ತು ಭಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಘೋಷಿಸಿದ್ದು ಸರ್ಕಾರ ಅದರಂತೆ ನಡೆಯುತ್ತದೆ. ತಪ್ಪು ನಡೆದಲ್ಲಿ ಕಿವಿ ಹಿಂಡಿ ಹೇಳುವ ಜವಾಬ್ದಾರಿಯನ್ನು 224 ಶಾಸಕರು ನನಗೆ ನೀಡಿದ್ದಾರೆ. ಹಾಗಾಗಿ ಸದನ, ಸರ್ಕಾರ ಮತ್ತು ಅಧಿಕಾರಿಗಳನ್ನು ಸರಿದಾರಿಯಲ್ಲಿ ನಡೆಸುವ ಕೆಲಸ ಮಾಡುತ್ತೇನೆ ಎಂದರು.
ಈ ಭಾಗದ ಹಲವು ದಶಕಗಳ ಬೇಡಿಕೆಯಾದ ಹಸಿರುಮಕ್ಕಿ ಸೇತುವೆ ನಿರ್ಮಾಣ ಸಂಬಂಧ ಗಮನ ಹರಿಸುತ್ತೇನೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಅಲ್ಲದೆ ಬಗರ್ ಹುಕುಂ, ಕುಡಿಯುವ ನೀರು, ಪಡಿತರ, ಆಶ್ರಯಮನೆಗಳ ಪರದಾಟ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಅಲ್ಲದೆ ನಿಟ್ಟೂರಿನಲ್ಲಿ ನಾಡಕಚೇರಿ ಆರಂಭಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಅರ್ಜಿ ಬೇಕಿಲ್ಲ: ಮನೆ, ಪಡಿತರ, ಕುಡಿಯುವ ನೀರಿನ ಬಾವಿ ಸೇರಿದಂತೆ ಸರ್ಕಾರದಿಂದ ನೀಡಬೇಕಾದ ಸೌಲಭ್ಯದ ಬಗ್ಗೆ ಯಾರು ಅರ್ಜಿ ಹಾಕಬೇಕಿಲ್ಲ. ಬದಲಿಗೆ ಪಿಡಿಒ, ಆರ್ಐ, ಎಲ್ಲಾ ಭಾಗ ಭೇಟಿ ನೀಡಿ ಸೌಲಭ್ಯ ವಂಚಿತರ ಪಟ್ಟಿ ಮಾಡಿ ಸರ್ಕಾರಕ್ಕೆ ಕಳುಹಿಸಲಿದ್ದು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.
ಮನವಿ: ಹಿನ್ನೀರಿನಿಂದ ಜರ್ಜರಿತವಾಗಿರುವ ನಿಟ್ಟೂರು ಸುತ್ತಮುತ್ತಲಿನ ಗ್ರಾಮದ ಹಿತರಕ್ಷಣೆ ಸಂಬಂಧ ವಿದ್ಯಾರ್ಥಿ ನಿಲಯ ಹಸಿರುಮಕ್ಕಿ, ಬೆಕ್ಕೋಡಿ, ಬಿಲ್ಸಾಗರ ಸೇತುವೆ, ಅಟಲ್ಜಿ ಜನಸ್ನೇಹಿ ಕೇಂದ್ರಸ್ಥಾಪನೆ, ಪ್ರವಾಸಿ ತಾಣಗಳ ಅಭಿವೃದ್ಧಿ, ವಿವಿಧ ರಸ್ತೆಗಳ ಅಭಿವೃದ್ಧಿ ಬಗ್ಗೆ ಸ್ಥಳೀಯರು ಮನವಿ ಪತ್ರ ಸಲ್ಲಿಸಿದರು.
ಜಿಪಂ ಸದಸ್ಯ ಕಲಗೋಡು ರತ್ನಾಕರ್, ಎ.ಒ. ರಾಮಚಂದ್ರ, ಚಂದ್ರಶೇಖರ ಶೆಟ್ಟಿ, ಶಿವರಾಮ ಶೆಟ್ಟಿ, ಶ್ರೀಕಾಂತ್, ಗರುಡಪ್ಪ ಗೌಡ, ಏರಗಿ ಉಮೇಶ್, ಪ್ರಭಾಕರ ರಾವ್, ಕಲ್ಯಾಣಪ್ಪ ಗೌಡ, ಕರುಣಾಕರ ಶೆಟ್ಟಿ, ರವೀಶ ಹೆಗಡೆ, ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

