ಸಿಎಂ ಸಿದ್ದರಾಮಯ್ಯ ಆಷಾಡಭೂತಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.14
ಸಿದ್ದರಾಮಯ್ಯ ಒಬ್ಬ ಆಷಾಡಭೂತಿ, ಸಂವೇದನರಹಿತ, ಗೊಂದಲದ ಮುಖ್ಯಮಂತ್ರಿ ಎಂದು ರಾಜ್ಯ ಬಿಜೆಪಿ ವಕ್ತಾರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಟೀಕಿಸಿದ್ದಾರೆ.
ಪಂಚಾಯತ್ರಾಜ್ ಕಾಯ್ದೆಗೆ ತಿದ್ದುಪಡಿ ಮಾಡಿ 6 ತಿಂಗಳಿಗೆ ಗ್ರಾಮಸಭೆ ನಡೆಸದ ಅಧ್ಯಕ್ಷ, ವಾರ್ಡ್ ಸಭೆ ನಡೆಸದ ಸದಸ್ಯನನ್ನು ಅನರ್ಹಗೊಳಿಸಬಹುದು ಎಂಬ ತಿದ್ದುಪಡಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಇದನ್ನು ವಿರೋಧಿಸಿ ಬಿಜೆಪಿಯು ಹೋರಾಟ ನಡೆಸಲಿದೆ. ಗ್ರಾಮ ಪಂಚಾಯ್ತಿ ಸದಸ್ಯರ ಸಮಾವೇಶವನ್ನು ನಡೆಸಲಿದೆ. ಸದ್ಯವೇ ಈ ಬಗ್ಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಘೋಷಿಸಿದರು.
ಸಿಎಂ ಕೆಳಗಿಳಿಸುತ್ತೀರಾ: 6 ತಿಂಗಳಿಗೊಮ್ಮೆ ಗ್ರಾಮಸಭೆ ನಡೆಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ವಾಸ್ತವ ಪರಿಸ್ಥಿತಿಯನ್ನು ಮುಖ್ಯಮಂತ್ರಿಯವರು ಗಮನಿಸಲಿ ಎಂದಿದ್ದಾರೆ.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಈ ರೀತಿಯ ನಿರ್ಭಂಧ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗೆ ಏಕೆ ಇಲ್ಲ. ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಬೇಕಿರುವ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಮೇಲೆ ಕ್ರಮ ಕೈಗೊಳ್ಳಲು ಕಾಯ್ದೆ ತರುತ್ತೀರಾ ವರ್ಷಕ್ಕೆ ಕನಿಷ್ಠ 60 ದಿನ ವಿಧಾನಸಭೆ ಕಲಾಪ ನಡೆಸದಿದ್ದರೆ ಮುಖ್ಯಮಂತ್ರಿಯನ್ನು ಕೆಳಗಿಳಿಸುತ್ತೀರಾ ಎಂದು ಪ್ರಶ್ನಿಸಿದರು.
ಪಂಚಾಯತ್ ಕಾಯ್ದೆ ತಿದ್ದುಪಡಿ ಒಂದು ದುಷ್ಟ ಯೋಚನೆ. ದುರ್ಬಳಕೆ ಆಗುವ ಸಾಧ್ಯತೆಯೇ ಹೆಚ್ಚು. ಕರೆದ ಗ್ರಾಮಸಭೆಯನ್ನು ವಿರೋಧಿಗಳು ನಡೆಯಲು ಬಿಡದಿದ್ದರೆ ಗ್ರಾಪಂ ಸದಸ್ಯ ಬಲಿಪಶು ಆಗಬೇಕಾಗುತ್ತದೆ ಎಂದು ಆಯನೂರು ಟೀಕಿಸಿದರು.
ಸರ್ವಾಧಿಕಾರಿ ಧೋರಣೆ: ಯಾವುದೇ ಪೂರ್ವತಯಾರಿ ಇಲ್ಲದೇ ಮಾಡಿರುವ ತಿದ್ದುಪಡಿ ಇದು. ಮೇಲ್ಮನೆಯಲ್ಲಿ ಚರ್ಚಿಸದೇ, ಒಪ್ಪಿಗೆ ಪಡೆಯದೇ, ನೇರ ವಿಧಾನಸಭೆಯಲ್ಲಿ ಮಂಡನೆ ಮಾಡಿ ತರಾತುರಿಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಇದು ಸರ್ವಾಧಿಕಾರಿ ದೋರಣೆ ಎಂದರು.
ಢಿ6 ತಿಂಗಳಿಗೊಮ್ಮೆ ಗ್ರಾಮಸಭೆ-ವಾರ್ಡ್ ಸಭೆಯನ್ನು ಕಡ್ಡಾಯವಾಗಿ ಮಾಡಿದರೆ ಅವು ಕಾಟಾಚಾರದ ಸಭೆ ಆಗುತ್ತವೆಯೇ ಹೊರತು ಅಧಿಕಾರ ವಿಕೇಂದ್ರೀಕರಣದ ಉದ್ದೇಶ ಸಫಲವಾಗುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಮುಖಂಡರಾದ ಗಿರೀಶ್ ಪಟೇಲ್, ದತ್ತಾತ್ರಿ, ಅರುಣ್ ಮತ್ತಿತರರು ಇದ್ದರು.
ಸಂಪುಟದಿಂದ ಸದನಕ್ಕೆ ಅವಮಾನ...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಅಧಿವೇಶನದಲ್ಲಿಯೇ ಒಂದು ಬಿಪಿಎಲ್ ಕಾರ್ಡ್ಗೆ 30 ಕಿಲೋ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದು ಸದನಕ್ಕೆ ಮಾಡಿದ ಅವಮಾನ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.
ಕುಟುಂಬದಲ್ಲಿ ಒಬ್ಬ ಸದಸ್ಯರಿದ್ದರೆ 10 ಕಿಲೋ, ಇಬ್ಬರಿದ್ದರೆ 20 ಕಿಲೋ, ಜಾಸ್ತಿ ಇದ್ದರೆ 30 ಕಿಲೋ ಎಂದು ತೀರ್ಮಾನಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿತ್ತೇ. ಎಲ್ಲರಿಗೂ 30 ಕಿಲೋ ಅಕ್ಕಿ ಕೊಡುವುದಾಗಿ ಹೇಳಿ ಈಗ ಮಾತಿಗೆ ತಪ್ಪುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು, ಈ ಮೊದಲು ತೀರ್ಮಾನಿಸಿದಂತೆ ಎಲ್ಲರಿಗೂ 30 ಕಿಲೋ ಅಕ್ಕಿ ಕೊಡಬೇಕೆಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

