ಶಿವಮೊಗ್ಗ

ವಾಹನ ಕಳ್ಳತನ ಗೊತ್ತುಮಾಡಲು ತಂತ್ರಜ್ಞಾನ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಜೂ.16
ವಾಹನ ಕಳ್ಳತನ ಎಂಬುದು ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರ ಕೊಡುವ ದೃಷ್ಟಿಯಿಂದ ಜೆಎನ್‌ಎನ್‌ಸಿಇ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಬಳಸಬಹುದಾದ ತಂತ್ರಜ್ಞಾನವೊಂದನ್ನು ರೂಪಿಸಿದ್ದಾರೆ.
ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿನಿಯರಾದ ಜೆ.ಎಸ್. ಮಮತಾ, ಎಂ.ಪಿ. ಕಾವ್ಯ, ಟಿ. ದಿವ್ಯ ಶೆಣೈ, ಎಂ.ಎಸ್. ಭಿಮ ಈ ತಂತ್ರಜ್ಞಾನ ರೂಪಿಸಿದ್ದಾರೆ. ಡಾ. ಮಂಜುನಾಥ್, ಶಕುಂತಲಾ ಮಾರ್ಗದರ್ಶನ ಮಾಡಿದ್ದಾರೆ.
ಏನಿದು ತಂತ್ರಜ್ಞಾನ: ಜಿಪಿಎಸ್ ಮತ್ತು ಜಿಎಸ್‌ಎಂ ಎಲೆಕ್ಟ್ರಾನಿಕ್ ಉಪಕರಣ ಬಳಸಿಕೊಂಡು ವಾಹನದ ಟ್ರ್ಯಾಕ್ ಮಾಡುವುದು ಈ ತಂತ್ರಜ್ಞಾನ. ಜಿಪಿಎಸ್ ವಾಹನದ ಸ್ಥಳ ಗುರುತಿಸಿದರೆ, ಜಿಎಸ್‌ಎಂ ಸ್ಥಳದ ಮಾಹಿತಿಯನ್ನು ಎಸ್‌ಎಂಎಸ್ ಮೂಲಕ ಮಾಲಿಕರ ಮೊಬೈಲ್‌ಗೆ ತಲುಪುತ್ತದೆ.
ಸಂದೇಶ ರವಾನೆ: ಈ ವಿದ್ಯಾರ್ಥಿಗಳ ತಂಡ ಇದಕ್ಕಾಗಿ ಒಂದು ಸಾಫ್ಟ್‌ವೇರ್ ರಚಿಸಿದ್ದು, ಅದರ ಆಧಾರದ ಮೇಲೆ ವಾಹನ ಮಾಲಿಕನಿಗೆ ನಿಗದಿತವಾಗಿ ಸಂದೇಶ ರವಾನೆಯಾಗುತ್ತಿರುತ್ತದೆ. ಕಡಿಮೆ ಬಜೆಟ್‌ನಲ್ಲಿ ಸಿದ್ಧಪಡಿಸಿದ ಯಂತ್ರವನ್ನು ವಾಹನದಲ್ಲಿ ಅಳವಡಿಸಿದರಾಯಿತು. ಅದು ವಾಹನವನ್ನು ರಕ್ಷಿಸುತ್ತದೆ. ವಾಹನದ ಚಲನವಲನವು ವಾಹನ ಮಾಲಿಕನಿಗೆ ಎಸ್‌ಎಂಎಸ್ ರೂಪದಲ್ಲಿ ಬರುತ್ತಿರುತ್ತದೆ. ಒಂದು ವೇಳೆ ಕಳ್ಳರು ವಾಹನ ಅಪಹರಿಸಿದರೆ, ವಾಹನವನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು ಎನ್ನುತ್ತಾರೆ ವಿದ್ಯಾರ್ಥಿನಿಯರು.
ಸರಕುಗಳನ್ನು ಸಾಗಣೆ ವಾಹನದಲ್ಲೂ ಈ ತಂತ್ರಜ್ಞಾನ ಬಳಸಿದರೆ ಸರಕು ವಾಹನದ ಮೇಲೆ ನಿಗಾವಹಿಸಬಹುದಾಗಿದೆ.
ಪೋಷಕರ ಪ್ರಶ್ನೆ ಐವಿಆರ್‌ಎಸ್ ಉತ್ತರ: ಇಂಟರ್ ಯಾಕ್ಟಿವ್ ವಾಯ್ಸ್ ಸ್ಪಾನ್ಸ್ ಸಿಸ್ಟಂ (ಐವಿಆರ್‌ಎಸ್) ಧ್ವನಿ ಆಧಾರಿತ ಈ ವ್ಯವಸ್ಥೆ ದೂರ ಸಂಪರ್ಕ, ಅಡುಗೆ ಅನಿಲ, ರೈಲ್ವೆ, ಮೊಬೈಲ್, ವಿಮೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಅದು ಶಾಲಾ ಕಾಲೇಜು ವ್ಯವಸ್ಥೆಗೂ ಬಂದರೆ ಹೇಗಿರುತ್ತದೆ...
ಈ ಆಲೋಚನೆ ಮಾಡಿದ್ದು ಜೆಎನ್‌ಎನ್‌ನ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಾದ ಎಂ.ಎಂ. ಅಭಿಷೇಕ್, ಟಿ.ಆರ್. ಭರತ್, ಎಚ್.ಎಸ್. ಗುರುಮೂರ್ತಿ ಮತ್ತು ಸುನೀಲ್. ಇವರೆಲ್ಲಾ ಸೇರಿ ವಿದ್ಯಾರ್ಥಿಗಳ ಮಾಹಿತಿಯನ್ನು ಪೋಷಕರು ನೇರವಾಗಿ ತಿಳಿಯುವ ಐವಿಆರ್‌ಎಸ್ ಸೇವೆಯನ್ನು ಸಿದ್ಧಪಡಿಸಿದ್ದಾರೆ.
ಎಲ್ಲ ಮಾಹಿತಿ ಲಭ್ಯ: ಶಾಲೆ ಅಥವಾ ಕಾಲೇಜಿನಲ್ಲಿ ವಿದ್ಯಾರ್ಥಿಯ ಹಾಜರಾತಿ, ವಿವಿಧ ವಿಷಯಗಳಲ್ಲಿ ಆತ ಪಡೆದಿರುವ ಅಂಕ, ಪರೀಕ್ಷೆ ವೇಳಾಪಟ್ಟಿ, ಉದ್ಯೋಗಾವಕಾಶಗಳು, ಮರು ಮೌಲ್ಯಮಾಪನ ಹಾಗೂ ಮರು ಪರೀಕ್ಷೆ ವಿವರ ಹೀಗೆ ವಿದ್ಯಾರ್ಥಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಈ ಐವಿಆರ್‌ಎಸ್ ಪದ್ಧತಿಯಡಿ ಸುಲಭವಾಗಿ ಪಡೆಯಬಹುದು.
ಪ್ರತಿ ವಿದ್ಯಾರ್ಥಿ ಶೈಕ್ಷಣಿಕ ಸಾಧನೆ ಹಾಗೂ ಆತನಿಗೆ ಸಂಬಂಧಿಸಿದ ಮಾಹಿತಿಗಳನ್ನು ಶಿಕ್ಷಣ ಸಂಸ್ಥೆಗಳು ಪತ್ರ ಅಥವಾ ಫ್ಯಾಕ್ಸ್ ಮೂಲಕ ಪೋಷಕರಿಗೆ ಕಳಿಸುವ ಬದಲು ಐವಿಆರ್‌ಎಸ್ ಮೂಲಕವೇ ಎಲ್ಲ ವಿವರಗಳನ್ನು ಒದಗಿಸಬಹುದು ಎಂಬುದು ಈ ತಂತ್ರಜ್ಞಾನ ರೂಪಿಸಿರುವ ವಿದ್ಯಾರ್ಥಿಗಳ ವಿವರಣೆ.

ವಿಮಾನ ಅಪಹರಣ ತಡೆಯಲೊಂದು ಆಹತ್
ವಿಮಾನ ಅಪಹರಣ ಸಂದರ್ಭದಲ್ಲಿ ಪ್ರಯಾಣಿಕರನ್ನು ರಕ್ಷಿಸಿ, ಅಪಹರಣಕಾರರನ್ನು ವಿಮಾನದೊಳಗೆ ಸದೆಬದಿಯುವ ಅಪರೂಪದ ತಂತ್ರಜ್ಞಾನವನ್ನು ಜೆಎನ್‌ಎನ್‌ಸಿಇ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ.
ಜಗತ್ತಿನ ನಾನಾ ದೇಶಗಳಲ್ಲಿ ಸಾಕಷ್ಟು ವಿಮಾನ ಅಪಹರಣ ಪ್ರಕರಣ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭದ್ರತಾ ದೃಷ್ಟಿಯಿಂದ ಅಗತ್ಯವಾದ ತಂತ್ರಜ್ಞಾನವನ್ನು ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಬಿ.ಸಿ. ಶ್ರೀಧರ, ಎ.ಎನ್. ನವೀನ್, ಎಸ್.ಡಿ. ಸಚಿನ್ ಮತ್ತು ಎನ್.ಜಿ. ಭರತ್ ರೂಪಿಸಿದ್ದಾರೆ.
ವಿದ್ಯಾರ್ಥಿಗಳು ಸಂಶೋಧಿಸಿರುವ ಆಹತ್ ಎಂಬ ವಿನೂತನ ತಂತ್ರಜ್ಞಾನ ವಿಮಾನ ಅಪಹರಣವನ್ನು ತಡೆದು ಪ್ರಯಾಣಿಕರ ಜೀವ ಉಳಿಸುವಲ್ಲಿ ವರದಾನವಾಗಲಿದೆ. ಆಂಟಿ ಏರ್ ಕ್ರಾಫ್ಟ್  ಹೈಜಾಕ್ ಆಟೋಮೇಷನ್ ಟೆಕ್ನಾಲಜಿ (ಆಹತ್) ಎಂಬ ಈ ತಂತ್ರಜ್ಞಾನ ಅಪಹರಣಕ್ಕೆ ಮುಂದಾಗುವ ದುಷ್ಕರ್ಮಿಯನ್ನು ಕ್ಷಣ ಮಾತ್ರದಲ್ಲಿ ಮೂರ್ಚೆಗೊಳಿಸಿ ಪ್ರಯಾಣಿಕರ ಜೀವವನ್ನು ಕಾಪಾಡಬಹುದಾಗಿದೆ.
ಅಪಹರಣವಾದ ವಿಮಾನದ ಸಂಪೂರ್ಣ ಮಾಹಿತಿಯನ್ನು ಕಂಟ್ರೋಲ್ ರೂಂಗೆ ರವಾನಿಸುತ್ತದೆ. ಕಂಟ್ರೋಲ್ ರೂಂನಿಂದಲೇ ಅಪಹರಣಕಾರರನ್ನು ಗುರುತಿಸಲು ಸಾಧ್ಯವಿದೆ. ಒಂದು ವೇಳೆ ಅಪಹರಣಕಾರರು ಗುಂಪಿನಲ್ಲಿ ಪ್ರವೇಶಿಸಿದ್ದರೆ ವಿಮಾನದ ನಾನಾ ಕಡೆಯಿರುವ ಆಹತ್ ವ್ಯವಸ್ಥೆ ಅವರ ಚಲನವಲನದ ಮೇಲೆ ಹದ್ದಿನಕಣ್ಣಿಟ್ಟು ಕಿರಣ ಹರಿಸಿ ದುಷ್ಕರ್ಮಿಗಳು ಮೂರ್ಚೆಗೊಳ್ಳುವಂತೆ ಮಾಡುತ್ತದೆ. ಈ ತಂತ್ರಜ್ಞಾನಕ್ಕೆ ಹಕ್ಕುಸ್ವಾಮ್ಯ (ಪೇಟೆಂಟ್) ಪಡೆಯುವ ಉದ್ದೇಶ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.