ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಶಿವಮೊಗ್ಗ: ತಾಲೂಕಿನ ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ನವ ಕರ್ನಾಟಕ ನಿರ್ಮಾಣ ವೇದಿಕೆ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿ ಮನವಿ ಅರ್ಪಿಸಿತು.
ತಾಲೂಕಿನಲ್ಲಿ ಸುಮಾರು 150 ಖಾಸಗಿ ಅನುದಾನ ರಹಿತ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿದ್ದು ಅವುಗಳಲ್ಲಿ ಶೇ.70ರಷ್ಟು ಶಾಲೆಗಳು ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಬೋಧಿಸುತ್ತ ಕಂಗ್ಲೀಷ್ ಶಾಲೆಗಳಾಗಿ ಮಾರ್ಪಾಡಾಗಿವೆ. ಈ ರೀತಿ ಕಾನೂನು ಬಾಹಿರವಾಗಿ ಆಂಗ್ಲ ಭಾಷೆಯನ್ನು ಬೋಧಿಸುವ ಶಾಲೆಗಳು ಒಂದು ಕಡೆ ಸರ್ಕಾರಕ್ಕೆ ಮತ್ತೊಂದು ಕಡೆ ಪೋಷಕರಿಗೆ ಹಾಗೂ ಮಕ್ಕಳಿಗೆ ದ್ರೋಹ ಬಗೆಯುತ್ತಿವೆ ಎಂದು ಸಂಘಟನೆ ಆರೋಪಿಸಿದೆ.
ಆಂಗ್ಲ ಭಾಷೆಯಲ್ಲಿ ಬೋಧಿಸುತ್ತಿವೆ: ಹೆಚ್ಚು ಡೊನೇಷನ್ ಪಡೆದುಕೊಂಡು ಶಿಕ್ಷಣವನ್ನು ಮಾರಾಟ ಮಾಡುವ ಕೇಂದ್ರಗಳಾಗಿ ಈ ಶಾಲೆಗಳು ಮಾರ್ಪಾಡಾಗಿದ್ದು, ಜನ ಸಾಮಾನ್ಯರನ್ನು ವಂಚಿಸುತ್ತಿದೆ ಎಂದು ಸಂಘಟನೆ ಟೀಕಿಸಿದೆ. ಹಲವಾರು ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗೂ ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದಿದ್ದು 6ರಿಂದ 7ನೇ ತರಗತಿವರೆಗೂ ಆಂಗ್ಲ ಭಾಷೆಯಲ್ಲಿ ಬೋಧಿಸುತ್ತಿವೆ. ಆದರೆ, ರಾಜಾರೋಷವಾಗಿ ಆಂಗ್ಲ ಮಾಧ್ಯಮ ಶಾಲೆಗಳೆಂದು ನಾಮಫಲಕ ಹಾಕಿಕೊಂಡು ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮದಲ್ಲಿ ಬೋಧಿಸುತ್ತಿವೆ. ಕೆಲವು ಶಾಲೆಗಳು ನಾಮಫಲಕವಿಲ್ಲದೆ ಅನಧಿಕೃತವಾಗಿ ಆಂಗ್ಲ ಮಾಧ್ಯಮದಲ್ಲಿ ಬೋಧಿಸುತ್ತಿದ್ದು, ವೇದಿಕೆ ಹಲವು ಬಾರಿ ಈ ರೀತಿಯ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ದೂರು ನೀಡಿ ಪ್ರತಿಭಟನೆ ನಡೆಸಿದರೂ ಇಲ್ಲಿಯವರೆಗೆ ಶಾಲೆಗಳ ವಿರುದ್ಧ ಯಾವುದೇ ಕಾನೂನು ಕ್ರಮಕೈಗೊಂಡಿಲ್ಲ ಎಂದು ಸಂಘಟನೆ ಅಧ್ಯಕ್ಷ ಗೋ.ರಮೇಶ್ ಗೌಡ ಆರೋಪಿಸಿದ್ದಾರೆ.
ಮಾನ್ಯತೆ ರದ್ಧುಪಡಿಸಿ: ಇನ್ನಾದರೂ ಅನಧಿಕೃತ ಇಂಗ್ಲಿಷ್ ಶಾಲೆಗಳ ವಿರುದ್ಧ ಸೂಕ್ತ ಕಾನೂನು ಕ್ರಮತೆಗೆದುಕೊಂಡು, ಆ ಶಾಲೆಗಳ ಮಾನ್ಯತೆ ರದ್ಧುಪಡಿಸಿ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಈ ರೀತಿಯ ಶಾಲೆಗಳಿಗೆ ಅನುಮತಿ ನೀಡದೇ ಕಠಿಣ ಕ್ರಮತೆಗೆದುಕೊಳ್ಳಬೇಕು. ಹಾಗೂ ವರ್ಷದ ಆರಂಭದಲ್ಲಿಯೇ ಈ ರೀತಿಯ ಶಾಲೆಗಳ ಬಗ್ಗೆ ಪೋಷಕರಿಗೆ ಜಾಗೃತಿ ಮೂಡಿಸುವ ಮೂಲಕ ಕನ್ನಡ ಭಾಷೆಯನ್ನು, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಜೊತೆಗೆ ಆರ್ಟಿಇ ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಆರ್ಟಿಇ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದೆ.
ಮನವಿಗೆ ಸ್ಪಂದಿಸದೇ ಹೋದಲ್ಲಿ ವೇದಿಕೆಯಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಗೋ ರಮೇಶ್ಗೌಡ ಎಚ್ಚರಿಸಿದ್ದಾರೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ರಮೇಶ್ ಗೌಡ, ಮಂಜುನಾಥ, ನರಸಿಂಹ, ಶಾಂತಮ್ಮ, ರೀಟಮ್ಮ, ಮಮ್ತಾಜ್, ಸ್ನೇಹ, ರಾಜುನಾಯ್ಕ, ಮಂಜುನಾಥ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

