ಪದೇಪದೇ ಸಂದರ್ಶನ ಬೇಡ: ಅತಿಥಿ ಉಪನ್ಯಾಸಕರ ಮನವಿ
ಕ.ಪ್ರ.ವಾರ್ತೆ ಸಾಗರ ಜೂ.17 ಕಳೆದ 10-12 ವರ್ಷಗಳಿಂದ ಅರೆಕಾಲಿಕ ಹಾಗೂ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಸರ್ಕಾರ ತನ್ನ ಹೊಸ ಆದೇಶದ ಮೂಲಕ ಕಡೆಗಣಿಸುತ್ತಿದ್ದು, ಸೇವಾ ಹಿರಿತನವನ್ನೂ ಪರಿಗಣಿಸದೆ ಪದೇಪದೇ ಸಂದರ್ಶನ ಮಾಡುವುದನ್ನು ನಿಲ್ಲಿಸುವಂತೆ ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಸರ್ಕಾರ ಅತಿಥಿ ಉಪನ್ಯಾಸಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದೆಯೇ ವಿನಃ ಅವರಿಗೆ ಜೀವನಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆಸಿಲ್ಲ. ತಿಂಗಳಿಗೆ ಸರಿಯಾಗಿ ಗೌರವಧನವನ್ನೂ ನೀಡುತ್ತಿಲ್ಲ ಎಂದು ದೂರಿದರು.
10,500 ಉಪನ್ಯಾಸಕರು: ರಾಜ್ಯದಲ್ಲಿ 10,500 ಅತಿಥಿ ಹಾಗೂ ಅರೆಕಾಲಿಕ ಉಪನ್ಯಾಸಕರಿದ್ದೇವೆ. ಶಿವಮೊಗ್ಗ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದು, ಎಲ್ಲರೂ ಮೂಲ ಸೌಕರ್ಯದಿಂದ ವಂಚಿತರಾಗಿದ್ದರೂ, ಪ್ರಾಮಾಣಿಕವಾಗಿ ನಮ್ಮ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದೇವೆ ಎಂದರು.
ರಜೆ ಮಾಡಿದರೆ ಸಂಬಳ ಕಡಿತ ಮಾಡುವ ಬಗ್ಗೆ ಯೋಚಿಸುವ ಸರ್ಕಾರ ಹೆಚ್ಚುವರಿ ತರಗತಿ ತೆಗೆದುಕೊಂಡು ಪಾಠ ಪೂರ್ಣಗೊಳಿಸಿದಾಗ ನಮಗೆ ಹೆಚ್ಚು ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿದರು.
ಪದವಿ ಕಾಲೇಜುಗಳಿಗೂ ಮುಂದುವರೆಸಿ: ಸೇವಾ ಹಿರಿತನ ಪರಿಗಣಿಸಿ 2005ರಿಂದ ಈತನಕ ಅರೆಕಾಲಿಕ ಹಾಗೂ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನೇ ಪದವಿ ಕಾಲೇಜುಗಳ ಸೇವಾವಧಿಯಲ್ಲಿ ಮುಂದುವರೆಸಬೇಕು. ಹಿಂದಿನಿಂದಲೂ ಸೇವೆ ಸಲ್ಲಿಸಿಕೊಂಡು ಬಂದವರಿಗೆ ಪ್ರಥಮ ಆದ್ಯತೆ ನೀಡಬೇಕು. ಪ್ರತಿ ತಿಂಗಳ ವೇತನವನ್ನು ಅದೇ ತಿಂಗಳು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಆಂಧ್ರಪ್ರದೇಶ, ಕೇರಳ, ತ್ರಿಪುರ, ಗುಜರಾತ್ ಹಾಗೂ ಪಂಜಾಬ್ ಸರ್ಕಾರಗಳು ಒಮ್ಮೆ ತೆಗೆದುಕೊಂಡ ಅತಿಥಿ ಉಪನ್ಯಾಸಕರನ್ನು ಪ್ರತಿವರ್ಷ ಸಂದಶಂನಕ್ಕೆ ಒಳಪಡಿಸುವುದಿಲ್ಲ. ಅವರನ್ನೇ ಮುಂದುವರೆಸುವ ಜೊತೆಗೆ ರು. 25,000 ವೇತನ ನಿಗದಿಪಡಿಸಿದೆ. ರಾಜ್ಯದಲ್ಲೂ ಇದೇ ಮಾನದಂಡ ಅನುಸರಿಸಬೇಕು. ಈ ಹಿಂದೆ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ಯಾವುದೇ ಷರತ್ತಿಲ್ಲದೆ ಮುಂದುವರೆಸಬೇಕು. ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ನವೀನ್ ಸಿ., ಜಿಲ್ಲಾಧ್ಯಕ್ಷ ಬಸವರಾಜ ಕಟ್ಟಿಮನಿ, ಬೃಂದಾ ಹೆಗಡೆ, ಎಂ.ಪಿ. ಅಣ್ಣಪ್ಪ, ಎನ್.ಜಿ. ಆಶಾ ಮೊದಲಾದರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

