ಶಿವಮೊಗ್ಗ

ರಾಜ್ಯದಲ್ಲೂ ಸಿಡಿಯಲಿದ್ದಾರೆಯೇ ನಕ್ಸಲರು?

Published On :

ಶಿವಮೊಗ್ಗ: ನಕ್ಸಲರಿಂದ ಛತ್ತೀಸ್‌ಗಡ ಕಾಂಗ್ರೆಸ್ ರ್ಯಾಲಿ ಮೇಲೆ ದಾಳಿಯಾಯಿತು, ಬಿಹಾರದಲ್ಲಿ ಸಂಚರಿಸುತ್ತಿದ್ದ ರೈಲಿನ ಮೇಲೆಯೂ ಗುಂಡಿನ ಮಳೆ ಸುರಿಯಲ್ಪಟ್ಟಿತು. ಮುಂದೆ ಈ ರೀತಿಯ ದಾಳಿ ಕರ್ನಾಟಕದಲ್ಲೇ ಎಂಬ ಪ್ರಶ್ನೆ ಉದ್ಭವಿಸಿದೆ.
ದಾಳಿಯ ಮುನ್ಸೂಚನೆ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದರೆ, ದಾಳಿ ನಡೆದರೂ ನಡೆಯಬಹುದು, ದಾಳಿ ನಡೆಯಲು ಸಾಕಷ್ಟು ಕಾರಣವೂ ಇದೆ ಎಂದು ಪ್ರತಿಕ್ರಿಯಿಸುತ್ತಾರೆ.
 ಕೇಂದ್ರ ಗುಪ್ತಚರ ಇಲಾಖೆ ರಾಜ್ಯಕ್ಕೆ ದಾಳಿ ನಡೆಯುವ ಸಂಬಂಧ ಮಾಹಿತಿ ನೀಡಿದ್ದು, ಕರ್ನಾಟಕದ ನಕ್ಸಲರು ಅಟ್ಟಹಾಸ ಮೆರೆಯಬಹುದು ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳು ಖಚಿತಪಡಿಸಿವೆ.
ನಿರಂತರ ಕೂಂಬಿಂಗ್: ಈ ಸಂದೇಶ ಬಂದು ಹಲವು ದಿನಗಳಾದವು, ಇದಾದ ನಂತರ ರಾಜ್ಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿ ಕನ್ನಡಪ್ರಭಕ್ಕೆ ತಿಳಿಸಿದ್ದು, ನಕ್ಸಲ್ ಪೀಡಿತ ಜಿಲ್ಲೆಗಳ ಪೊಲೀಸರನ್ನು ಇದಕ್ಕಾಗಿ ಸಜ್ಜುಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ನಕ್ಸಲ್ ನಿಗ್ರಹ ದಳ ಕಾರ್ಯೋನ್ಮುಖವಾಗಿದ್ದು, ನಿರಂತರ ಕೂಂಬಿಂಗ್ ಚಟುವಟಿಕೆಯಲ್ಲಿ ತೊಡಗಿದೆ. ಹಾಗೆಯೇ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಆಸಕ್ತರಾದ ಯುವ ಪೊಲೀಸರನ್ನು ಬಳಸಿಕೊಳ್ಳಲು ಇಲಾಖೆ ಮುಂದಾಗಿದೆ.
ಪ್ರತಿರೋಧ ಖಚಿತ: ನಕ್ಸಲ್ ನಾಯಕ ಸಾಕೇತ್‌ರಾಜನ್ ಹತ್ಯೆ ನಂತರ ಕಳೆಗುಂದಿದ ಮಲೆನಾಡಿನ ನಕ್ಸಲ್ ಬಳಗ ಪ್ರತಿರೋಧಕ್ಕಂತೂ ಹಾತೊರೆಯುತ್ತಿರುವುದು ನಿಜ. ನಕ್ಸಲ್ ತಂಡದ ಕೆಲವು ಸದಸ್ಯರು ಅನಾರೋಗ್ಯ ಪೀಡಿತರಾಗಿ ನಗರ ಸೇರಿರುವ ಸಾಧ್ಯತೆ ಇದೆ. ಮತ್ತೆ ಕೆಲವರು ಕಾಡಿನಲ್ಲೇ ಸಾವರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ಬಲ ಕಡಿಮೆಯಾಗಿದೆ. ಆದರೆ, ಬೇರೆ ರಾಜ್ಯಗಳ ನಡುವಿನ ನಕ್ಸಲ್ ನಂಟು ಅಲ್ಲಗಳೆಯುವಂತಿಲ್ಲ ಎಂದು ಮಲೆನಾಡು ವ್ಯಾಪ್ತಿಯಲ್ಲಿ ಪೊಲೀಸ್ ತಂಡದ ನೇತೃತ್ವ ವಹಿಸಿ ಇದೀಗ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ಅಭಿಪ್ರಾಯಪಡುತ್ತಾರೆ.
 ಮಲೆನಾಡು ವ್ಯಾಪ್ತಿಯಲ್ಲಿ ಜನರಿಂದ ನಕ್ಸಲರಿಗೆ ಅಂತಹಾ ಬೆಂಬಲ ಸಿಕ್ಕಿಲ್ಲ ಎಂದು ಕೂರುವ ಸಮಯ ಇದಲ್ಲ. ಮಲೆನಾಡಿನಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಅದನ್ನು ಬಗೆಹರಿಸುವುದು ತ್ರಾಸವೇ. ಹೀಗಾಗಿ ಇದನ್ನು ಬಳಸಿಕೊಂಡು ಜನರ ಮನಸ್ಸು ಬದಲಿಸುವ ಎಲ್ಲಾ ಅವಕಾಶ ನಕ್ಸಲರಿಗಿದೆ. ಈಗಲೂ ಆಹಾರ ಸೇರಿದಂತೆ ನಕ್ಸಲರಿಗೆ ಅವಶ್ಯಕ ಸಾಮಗ್ರಿಯನ್ನು ಕಾಡಿನೊಳಗಿನ ಕೆಲವು ಮನೆಯವರು ಸರಬರಾಜು ಮಾಡುತ್ತಲೇ ಇದ್ದಾರೆ. ಹೀಗಿರುವಾಗ ಉದಾಸೀನ ಸರಿಯಲ್ಲ ಎಂದವರು ಹೇಳುತ್ತಾರೆ.
ನಕ್ಸಲ್ ಓಡಾಟ: ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ನಕ್ಸಲ್ ಓಡಾಟ ನಿಂತಿಲ್ಲ. ಜಿಲ್ಲೆಯ ಗಡಿ ಪ್ರದೇಶದಲ್ಲಿ ನಕ್ಸಲ್ ತಂಡದ ಸಂಚಾರ ನಡೆಯುತ್ತಲೇ ಇದೆ. ಮಂಡಗಾರು ಲತಾ ನೇತೃತ್ವದ ತಂಡ ಇಲ್ಲಿ ಚಟುವಟಿಕೆ ನಡೆಸುತ್ತಿದೆ ಎಂಬ ಮಾಹಿತಿ ಇದೆ.
 ಮಳೆಗಾಲ ಆರಂಭವಾಗುತ್ತಿದ್ದಂತೆ ನಕ್ಸಲರ ಚಟುವಟಿಕೆ ಚುರುಕಾಗುತ್ತದೆ ಎಂಬುದು ಪೊಲೀಸರ ವಿವರಣೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಳೆಯ ಭೋರ್ಗರೆತ ಹೆಚ್ಚಿರುವ ಕಾರಣ ಕೂಂಬಿಂಗ್‌ಗೆ ಬರುವವರು ಹಿಂದೇಟು ಹಾಕುತ್ತಾರೆ, ಸುಲಭವಾಗಿ ಪೊಲೀಸರ ಸಂಚಾರವೂ ಸಾಧ್ಯವಿಲ್ಲದ ಕಾರಣ ನಕ್ಸಲರ ಮನೆ ಭೇಟಿ ಸುಲಭ. ಜೊತೆಗೆ ಕಾಡಿನೊಳಗೆ ಹೆಜ್ಜೆ ಸಪ್ಪಳದ (ಬೇಸಿಗೆಯಲ್ಲಿ ಒಳಗಿನ ಎಲೆಯಿಂದ ಓಡಾಟದ ಸದ್ದು ಕೇಳಿಬರುತ್ತದೆ) ಭೀತಿಯೂ ಅವರಿಗಿರುವುದಿಲ್ಲ ಎಂಬ ಮಾತು ಕೇಳಿಬಂದಿದೆ.

ಪುಷ್ಟಿ ನೀಡಿದ ದಾಖಲೆ: ಶೃಂಗೇರಿ ಬಳಿ ಕೆಲ ತಿಂಗಳ ಹಿಂದಷ್ಟೆ ನಕ್ಸಲರ ಬಗ್ಗೆ ಕೆಲ ಮಾಹಿತಿ ಸಂಗ್ರಹವಾಗಿದ್ದು, ಇದು ನಕ್ಸಲ್ ದಾಳಿಯ ಮುನ್ಸೂಚನೆಗೆ ಸಂಬಂಧಿಸಿದ್ದು ಎಂದು ವಿಶ್ಲೇಷಿಸಲಾಗುತ್ತಿದೆ. ಕಾಡಿನಂಚಿಗೆ ಹೊಂದಿಕೊಂಡ ಪೊಲೀಸ್ ಠಾಣೆ- ಚೆಕ್‌ಪೋಸ್ಟ್, ಪೊಲೀಸ್ ಕ್ಯಾಂಪ್‌ಗಳ ಬಗ್ಗೆ ನಕ್ಸಲರು ಮಾಹಿತಿ  ಕಲೆ ಹಾಕಿರುವ ದಾಖಲೆ ಇದಾಗಿದೆ ಎಂದು ಮೂಲಗಳು ತಿಳಿಸಿವೆ.

ಆಗುಂಬೆ, ಸಿರಿಮನೆ ಜಲಪಾತ ಮುಂತಾದ ಕಡೆಗಳಿಗೆ ಪ್ರವಾಸಿಗರ ರೂಪದಲ್ಲಿ ಬೇರೆ ರಾಜ್ಯಗಳ ನಕ್ಸಲ್ ಪ್ರತಿನಿಧಿಗಳು ಬಂದುಹೋಗಿರಲಿಕ್ಕೂ ಸಾಕು. ಜೊತೆಗೆ ಸ್ಥಳೀಯ ನಕ್ಸಲರೊಂದಿಗೆ ಛತ್ತೀಸಘಡ ನಕ್ಸಲರ ಸಂಪರ್ಕ ಇದ್ದೇ ಇದೆ ಎಂದು ಸ್ಥಳೀಯ ಪೊಲೀಸರು ವಿವರಿಸುತ್ತಾರೆ.
 ಹಿಂದಿನ ಕೆಲವು ನಕ್ಸಲ್ ಕ್ಯಾಂಪ್ ಮೇಲಿನ ದಾಳಿ ಸಂದರ್ಭದಲ್ಲಿ ದೊರೆತ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಿದರೆ ಸ್ಥಳೀಯ ನಕ್ಸಲರಿಗೆ ಹೊರಗಿನವರ ಸಂಪರ್ಕ ಇದ್ದೇ ಇದೆ ಎಂಬುದು ಖಚಿತವಾಗುತ್ತದೆ ಎಂದು ಅವರು ಹೇಳುತ್ತಾರೆ.
ಒಟ್ಟಾರೆ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ನಕ್ಸಲರು ಸಿಡಿಯುವ ಎಲ್ಲಾ ಅವಕಾಶವೂ ಇಲ್ಲದಿಲ್ಲ.

ಒತ್ತುವರಿ ತೆರವು ನಕ್ಸಲರಿಗೆ ಅಸ್ತ್ರ
ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಆಗುಂಬೆ ವಲಯದ 3,43,472 ಹೆಕ್ಟೇರ್ ಅರಣ್ಯ ಪ್ರದೇಶ ಸೇರ್ಪಡೆಗೊಳಿಸಿದ ಅಧಿಸೂಚನೆಯ ಅನುಷ್ಠಾನ ಪ್ರಕ್ರಿಯೆ ಆರಂಭವಾಗಿದೆ. ತಲ್ಲೂರು, ಬಾಳೇಹಳ್ಳಿ, ಶುಂಠಿಹಕ್ಕಲು, ದಾಸನಕೊಡಿಗೆ ಸೇರಿದಂತೆ ಅನೇಕ ನಕ್ಸಲ್ ಪೀಡಿತ ಗ್ರಾಮಗಳೂ ಅಭಯಾರಣ್ಯ ವ್ಯಾಪ್ತಿಗೆ ಬರಲಿದೆ.
 ಆಗುಂಬೆ ಭಾಗದಲ್ಲಿ ಅರಣ್ಯಕ್ಕೆ ಹೊಂದಿಕೊಂಡು ಬದುಕು ಸಾಗಿಸುವುದು ಸಾರ್ವಜನಿಕರಿಗೆ ಅನಿವಾರ್ಯ. ಆದರೆ, ವನ್ಯಜೀವಿ ಅಭಯಾರಣ್ಯ ಕಾಯಿದೆ ಕಠಿಣವಾಗಿ ಜಾರಿಗೊಳ್ಳಲಿದ್ದು, ಒತ್ತುವರಿ ಪ್ರದೇಶ ತೆರವಿಗೆ ಇಲಾಖೆ ಮುಂದಾಗುವುದು ಖಚಿತ. ಜೊತೆಗೆ ಅರಣ್ಯೇತರ ಚಟುವಟಿಕೆಗೆ ಅವಕಾಶ ಇರುವುದಿಲ್ಲ. ಪ್ರಮುಖವಾಗಿ ಒತ್ತುವರಿ ಪ್ರದೇಶ ತೆರವು ಮಾಡಲು ಮುಂದಾದರೆ ಸಹಜವಾಗಿ ಸ್ಥಳೀಯವಾಗಿ ಆಕ್ರೋಶ ಹೆಚ್ಚಾಗಲಿದ್ದು, ಇದು ನಕ್ಸಲರಿಗೆ ಅಸ್ತ್ರವಾದರೂ ಆಶ್ಚರ್ಯವೇನಿಲ್ಲ.
-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.