ಸಾಗುವಳಿದಾರರನ್ನು ಒಕ್ಕಲೆಬ್ಬಿಸದಿರಿ
ಕ.ಪ್ರ.ವಾರ್ತೆ , ಸೊರಬ , ಜೂ.18
ಸತತ 30-40 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತ ಬಂದಿರುವವರನ್ನು ಒಕ್ಕಲೆಬ್ಬಿಸದೆ, ಹೊಸದಾಗಿ ಕಾಡು ಕಡಿಯಲು ಅವಕಾಶ ಕೊಡಬೇಡಿ ಎಂದು ಶಾಸಕ ಮಧು ಬಂಗಾರಪ್ಪ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿದಾರರನ್ನು ತೆರವುಗೊಳಿಸಲು ನಿಮಗೆ ಯಾವುದೇ ಆದೇಶವಿಲ್ಲ. ಸದ್ಯಕ್ಕೆ ಅಂತಹ ಜಾಗದಲ್ಲಿ ಸಸಿ ನೆಡಲು ಮುಂದಾಗಬೇಡಿ, ಈಗಾಗಲೆ ಬಗರ್ ಹುಕುಂ ಸಾಗುವಳಿ ಕುರಿತಂತೆ ನಿರ್ಣಯ ಕೈಗೊಂಡಿದ್ದು, ಸದ್ಯದಲ್ಲಿಯೇ ನಿಮ್ಮ ಕೈಸೇರುತ್ತದೆ. ಅಲ್ಲಿಯವರೆಗೂ ಸಾಗುವಳಿದಾರರಲ್ಲಿ ಭಯ ಮೂಡಿಸುವ ಕೆಲಸಕ್ಕೆ ಕೈಹಾಕಬಾರದು ಎಂದು ಅರಣ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಗುಣಮಟ್ಟದ ಪರಿಕರ: ಸಣ್ಣ ನೀರಾವರಿ ಇಲಾಖೆಯಿಂದ ಮೂಗೂರು ಬಳಿ ನಿರ್ಮಿಸಿರುವ ಬ್ಯಾರೇಜ್ ಕಂ ಬ್ರಿಡ್ ಗಳಲ್ಲಿ ಗುಣಮಟ್ಟದ ಪರಿಕರ ಉಪಯೋಗಿಸದೇ ಇರುವುದರಿಂದ ಈಗಾಗಲೇ ತೂಬಿನ ಬಾಗಿಲುಗಳು ತುಕ್ಕು ಹಿಡಿದು ಅನುಪಯುಕ್ತವಾಗಿದೆ. ಸಣ್ಣ ನೀರಾವರಿ ಇಲಾಖೆ ಚಿಟ್ಟೂರು ಕೆರೆ ಅಭಿವದ್ಧಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ ಎಂದು ಹಣ ಡ್ರಾ ಮಾಡಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ತಪ್ಪು ಮಾಹಿತಿ ನೀಡಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೆಲಸ ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು, ಇಲಾಖೆಯಿಂದ ಮಾಡಿರುವ ಎಲ್ಲಾ ಕೆರೆಗಳ ವಸ್ತುಸ್ಥಿತಿಯ ವರದಿ ನೀಡಬೇಕು, ಇಂತಹ ಕಳಪೆ ಕಾಮಗಾರಿಗಳಿಗೆ ಅವಕಾಶ ನೀಡಬಾರದು. ಕಳಪೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದರು.
ಅನುದಾನಕ್ಕೆ ಪ್ರಸ್ತಾವನೆ: ಪಟ್ಟಣ ಅಗಲೀಕರಣದ ವಿಷಯದಲ್ಲಿ ನಿವಾಸಿ, ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಗಲೀಕರಣಕ್ಕೆ ಮುಂದಾಗಲಾಗುತ್ತದೆ. ಪರಿಹಾರ ಮೊತ್ತ ಹೆಚ್ಚಳದ ಬಗ್ಗೆ ಯೋಚಿಸಿ, ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಆನವಟ್ಟಿಯಲ್ಲಿ ಅನುದಾನಿತ ಶಾಲೆಗಳಲ್ಲಿ ನಿಗದಿಗೊಳಿಸಿದ್ದಕ್ಕಿಂತ ಹೆಚ್ಚು ಶುಲ್ಕ ವಸೂಲಾತಿ, ಹಾಸ್ಟೆಲ್‌ಗಳಲ್ಲಿ ಬೋಧನಾ ಸಿಬ್ಬಂದಿ ಇಲ್ಲದೆ ಅವರ ಹೆಸರಲ್ಲಿ ಬಿಲ್ ಪಡೆಯುತ್ತಿರುವ ಆರೋಪ ಕೇಳಿಬಂದಿವೆ. ಈ ಬಗ್ಗೆ ಒಂದು ವಾರದೊಳಗೆ ಸಂಪೂರ್ಣ ವರದಿ ನೀಡಬೇಕು ಎಂದರು.
ಅಧಿಕ ವಸೂಲಿಯ ದೂರು: ತಾಲೂಕಿನಲ್ಲಿ ಎಂಆರ್‌ಪಿ ದರಕ್ಕಿಂತಲೂ ರು. 50 ಅಧಿಕ ಹಣವನ್ನು ರಸಗೊಬ್ಬರಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂಬ ಬಗ್ಗೆ ದೂರು ಬಂದಿದೆ. ಅಂತಹ ವರ್ತಕರ ಲೈಸೆನ್ಸ್ ರದ್ದುಗೊಳ್ಸಿ ಎಂದು ಕೃಷಿ ಅಧಿಕಾರಿಗೆ ಸೂಚಿಸಿದರು.
ತಲ್ಲೂರು ಬಳಿ ಕಾಮಗಾರಿ ಮಾಡದೆಯೇ ರಿವಿಟ್‌ಮೆಂಟ್ ಕಾರ್ಯಕ್ಕಾಗಿ ಮೊದಲೇ ರು. 2 ಲಕ್ಷ ಡ್ರಾ ಮಾಡಿಕೊಳ್ಳಲಾಗಿದೆ. ನೆಪಕ್ಕೆ ಈಗ ಕೆಲಸ ಮಾಡಿ ಕಣ್ಣೊರೆಸುವ ತಂತ್ರ ನಡೆಯುತ್ತಿದೆ. ತಾಲೂಕಿನಲ್ಲಿ ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಮದ್ಯ ಮಾರಾಟ ಮಾಡಲಾಗುತ್ತಿದೆ ಇಂತಹ ಕಾನೂನು ಬಾಹಿರ ಚಟುವಟಿಕೆಗಳತ್ತ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸೂಕ್ತ ನಿಗಾವಹಿಸಬೇಕು ಎಂದರು.
ಶಿಕ್ಷಕರ ಕೊರತೆ ಕುರಿತು ಚರ್ಚೆನಡೆಯಿತು, ವಿವಿಧ ಇಲಾಖೆ ಅಧಿಕಾರಿಗಳು ಇಲಾಖೆ ಸೌಲಭ್ಯ, ಕಾರ್ಯಪ್ರಗತಿ ಕುರಿತಂತೆ ಮಾಹಿತಿ ನೀಡಿದರು.
ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಸದಸ್ಯ ಹುನವಳ್ಳಿ ಗಂಗಾಧರಪ್ಪ, ಗುರುಕುಮಾರ್ ಪಾಟೀಲ್, ಕೋಮಲಾ ನಿರಂಜನ್, ಮಲ್ಲಮ್ಮ, ತಾಪಂ ಅಧ್ಯಕ್ಷ ಸದಾನಂದಗೌಡ, ಉಪಾಧ್ಯಕ್ಷೆ ನೀಲಮ್ಮ, ತಹಸೀಲ್ದಾರ್ ತೇಜಸ್ ಕುಮಾರ್, ಇಒ ಮಂಜುಳಾ, ರುದ್ರಗೌಡ, ಜಹಿರುದ್ಧೀನ್, ಹೆಸರಿ ಡಾಕಪ್ಪ, ಪಿಎಲ್‌ಡಿಸಿಬಿ ಅಧ್ಯಕ್ಷ ಅಣ್ಣಾಜಿಗೌಡ, ಶ್ರೀಪಾದರಾವ್ ನಿಸರಾಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

