ಶಿವಮೊಗ್ಗ

ಅನುದಾನ ಬಳಕೆಗೆ ನಿರ್ಬಂಧ: ಜಿಪಂ ಆಕ್ರೋಶ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.19
ಜಿಲ್ಲಾ ಪಂಚಾಯ್ತಿಗೆ ಲಿಂಕ್ ಡಾಕ್ಯೂಮೆಂಟ್ಸ್ ಮೂಲಕ ಬರುವ ವಿವಿಧ ಅನುದಾನ ಬಳಕೆಗೆ ಸರ್ಕಾರ ಷರತ್ತು ವಿಧಿಸಿರುವುದಕ್ಕೆ ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಸ್ತೆ, ಸೇತುವೆ, ಅಭಿವೃದ್ಧಿ, 13ನೇ ಹಣಕಾಸು ಆಯೋಗದ ಅನುದಾನ ಇತ್ಯಾಧಿ ಲೆಕ್ಕಶೀರ್ಷಿಕೆಯಲ್ಲಿ ಬಿಡುಗಡೆಯಾಗುವ ಅನುದಾನದಲ್ಲಿ ಶೇ. 90ರಷ್ಟು ಭಾಗವನ್ನು ಶಾಶ್ವತ ಕಾಮಗಾರಿ (ಕಟ್ಟಡ ಇತ್ಯಾದಿ...) ಮಾತ್ರ ಕೈಗೊಳ್ಳಬೇಕು ಎನ್ನುವ ಮಾರ್ಗಸೂಚಿ ಇವರ ಅಸಮಾಧಾನಕ್ಕೆ ಕಾರಣ.
ಗುರುವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಪಕ್ಷಬೇಧ ಮರೆತು ಎಲ್ಲಾ ಸದಸ್ಯರೂ ಈ ತೀರ್ಮಾನಕ್ಕೆ ಬಂದರು. ಸದ್ಯವೇ ಜಿ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಮುಖ್ಯಮಂತ್ರಿಯವರ ಬಳಿ ನಿಯೋಗ ತೆರಳಿ ಈ ಮಾರ್ಗಸೂಚಿ ವಾಪಸ್ ಪಡೆಯುವಂತೆ ಒತ್ತಾಯಿಸಲು ತೀರ್ಮಾನಿಸಲಾಯಿತು.
ಈ ಕಾರಣದಿಂದಲೇ ಗುರುವಾರದ ಸಭೆಯಲ್ಲಿ 13ನೇ ಹಣಕಾಸು ಆಯೋಗದ ಅನುದಾನ ಬಳಕೆ, ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾರ್ಯಕ್ರಮ ಇತ್ಯಾದಿ ಅನುದಾನಗಳ ಕ್ರಿಯಾಯೋಜನೆಗೆ ಒಪ್ಪಿಗೆ ದೊರೆಯಲಿಲ್ಲ. ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ವಾಪಸಾದ ನಂತರ ಈ ಬಗ್ಗೆ ತೀರ್ಮಾನಿಸುವುದಾಗಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಹೇಳಿದರು.
ವಿಪಕ್ಷ ನಾಯಕ ಕಲಗೋಡು ರತ್ನಾಕರ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದಾಗ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಸೇರಿದಂತೆ ಎಲ್ಲಾ ಸದಸ್ಯರೂ ಬೆಂಬಲಿಸಿದರು.
ಮೊಳಗಿದ ಧಿಕ್ಕಾರ: ಈ ಹಿಂದೆ ಆಗಿರುವ ಹಲವು ಅವ್ಯವಹಾರಗಳ ತನಿಖೆಗೆ ಸಭೆಯಲ್ಲಿ ಒತ್ತಾಯಿಸಿದ ಸಂದರ್ಭದಲ್ಲಿ ಸದನ ಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು. ಹಲವು ಪ್ರಕರಣಗಳಲ್ಲಿ ತನಿಖೆ ನಡೆಸುವುದಾಗಿಯೂ ಹೇಳಲಾಗಿತ್ತು. ಆದರೆ, ಇದೂವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಕಾಂಗ್ರೆಸ್ ಸದಸ್ಯ ಸುಂದರೇಶ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಸದಸ್ಯ ಪದ್ಮನಾಭ್ ಹಾರೋಗೊಳಿಗೆ, ಜೆಡಿಎಸ್‌ನ ಕೃಷ್ಣೇಗೌಡ, ಕುಮಾರ್ ಸಹ ಬೆಂಬಲಿಸಿದರು.
ಅಧ್ಯಕ್ಷರಿಂದ ಸೂಕ್ತ ಉತ್ತರ ದೊರೆಯದ ಕಾರಣ ದಿಢೀರನೇ ಅಧ್ಯಕ್ಷ ಪೀಠದ ಎದುರು ತೆರಳಿದ ಈ ಸದಸ್ಯರು ಧರಣಿ ಆರಂಭಿಸಿದರು. ಸದನ ಸಮಿತಿ ರಚಿಸದ ಕಾರಣ ಅಧ್ಯಕ್ಷರೂ ಸಹ ಶಾಮೀಲಾಗಿರುವ ಶಂಕೆ ಇದೆ ಎಂದು ಆರೋಪಿಸಿದರು. ಅವರನ್ನು ಸಮಾಧಾನಪಡಿಸಲು ಸ್ವತಃ ಅಧ್ಯಕ್ಷರೇ ಪೀಠದಿಂದ ಕೆಳಗಿಳಿದು ಬಂದರು. ಉಪಾಧ್ಯಕ್ಷೆ ಹೇಮಾ ಪಾವನಿ ಅವರ ಜತೆಗೆ ಸಭೆಯಲ್ಲಿದ್ದ ಶಾಸಕ ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯ ಪಿ.ವಿ. ಕೃಷ್ಣಭಟ್ ಅವರೂ ಸಹ ಧರಣಿನಿರತರ ಬಳಿ ಬಂದರು. ಅವರು ಯಾವುದಕ್ಕೂ ಮಣಿಯಲಿಲ್ಲ.
ಕೊನೆಗೆ ಅಧ್ಯಕ್ಷೆ ಗೀತಾ ಅವರು ಸಭೆಯಲ್ಲಿ ಅರ್ಧ ಗಂಟೆ ಮುಂದೂಡಿ ತಮ್ಮ ಕೊಠಡಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿಯಲ್ಲಿಯೇ ಉಳಿದಿರುವ ಐವರು ಸದಸ್ಯರು ಸಭೆಯಲ್ಲಿಯೇ ಇದ್ದರು.
ಸದನ ಸಮಿತಿ ರಚನೆ: ನಂತರ ವಾಪಸು ಬಂದ ಅಧ್ಯಕ್ಷರು, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಗೊಂದಲಗಳನ್ನು ನಿವಾರಿಸಲು ಸ್ಥಾಯಿ ಸಮಿತಿಗಳ ಮೂಲಕ ತನಿಖೆ ನಡೆಸಿ ನಂತರ ಸದನ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ವಿಷಯಕ್ಕೆ ಅಂತ್ಯ ಹಾಡಿದರು.
ಖಂಡನಾ ನಿರ್ಣಯ: ಕೆಲವು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಅರಣ್ಯ ಭೂಮಿಯ ಒತ್ತುವರಿ ತೆರವು ಕಾರ್ಯಚರಣೆ ಗುರುವಾರದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಮತ್ತೆ ಚರ್ಚೆಗೆ ಬಂದಿತು. ಜೆಡಿಎಸ್ ಸದಸ್ಯ ಕುಮಾರ್ ಅವರು ಬದನವಾಳ್ ಗ್ರಾಮದ ಘಟನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧವೂ ಅರಣ್ಯ ಇಲಾಖೆ ಅಧಿಕಾರಿಗಳು ದೂರು ನೀಡಿರುವ ವಿಷಯವನ್ನು ಪ್ರಸ್ತಾಪಿಸಿದರು. ಒತ್ತುವರಿ ತೆರವು ಮಾಡದಂತೆ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದರೂ ಸಹ ಕಾರ್ಯಾಚರಣೆ ಮುಂದುವರಿಸಿದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಲಗೋಡು ರತ್ನಾಕರ್ ಸಹ ಅನುಮೋದಿಸಿದರು. ಸುದೀರ್ಘ ಚರ್ಚೆಯ ನಂತರ ಜಿ.ಪಂ. ಸದಸ್ಯರ ವಿರುದ್ಧವೂ ಪೊಲೀಸರಿಗೆ ದೂರು ನೀಡಿದ ಅರಣ್ಯ ಇಲಾಖೆ ಕ್ರಮದ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಲಾಯಿತು.
ಡೆಂಘಿ ತೀವ್ರ: ಜಿಲ್ಲೆಯಾದ್ಯಂತ ಡೆಂಘೀ ತೀವ್ರವಾಗುತ್ತಿದೆ. ಈ ರೋಗ ನಿಯಂತ್ರಣಕ್ಕೆ ಜಿಲ್ಲೆಯಾದ್ಯಂತ ಆಂದೋಲನ ತೀವ್ರಗೊಳಿಸಿ ಎಂದು ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಸೂಚಿಸಿದರು. ಡೆಂಘೀ ರೋಗ ನಿಯಂತ್ರಣದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂದರ್ಭದಲ್ಲಿ ಸ್ಥಳಿಯ ಸಂಘ-ಸಂಸ್ಥೆಗಳನ್ನು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಅವರ ಸಹಯೋಗದಲ್ಲಿ ಹಮ್ಮಿಕೊಳ್ಳುವ ಮೂಲಕ ರೋಗ ನಿಯಂತ್ರಣದ ಬಗ್ಗೆ ಜನರಿಗೆ ವಿಶ್ವಾಸಾರ್ಹತೆ ಮೂಡಿಸಬೇಕು ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಆಯಾ ಕೇಂದ್ರಸ್ಥಾನದಲ್ಲೇ ಉಳಿಯಬೇಕು ಹಾಗೂ ರೋಗಿಗಳಿಗೆ ಸರಿಯಾದ ಸೇವೆ ಸಿಗುವಂತೆ ನೋಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲೆಯಲ್ಲಿ ಈವರೆಗೆ 136 ಡೆಂಘೀ ಪ್ರಕರಣಗಳು ದೃಢಪಟ್ಟಿದ್ದು ಒಂದು ಮಾತ್ರ ಸಾವು ಸಂಭವಿಸಿದೆ. ಆದರೆ ಜಿಲ್ಲೆಯಲ್ಲಿ ರೋಗ ನಿಯಂತ್ರಣದಲ್ಲಿದೆ ಎಂದು ಮಾಹಿತಿ ನೀಡಿದರು.
ಆರಂಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್, ಹೊಸನಗರ ತಾಲೂಕು ಮೇಲಿನಬೆಸಗೆ ಗ್ರಾಮ ಪಂಚಾಯ್ತಿ ಹಾಗೂ ಶಿಕಾರಿಪುರ ತಾಲೂಕು ಪಂಚಾಯ್ತಿಗಳಿಗೆ ಕೇಂದ್ರ ಸರ್ಕಾರ ನೀಡುವ ಪಂಚಾಯ್ತಿಗಳ ಸಬಲೀಕರಣ ಪ್ರಶಸ್ತಿ ಲಭಿಸಿದೆ ಎಂದು ಹೇಳಿ ಶ್ಲಾಘಿಸಿದರು.

ಸದಸ್ಯರು ಹೇಳಿದ್ದು...
ಶಿವಮೊಗ್ಗ ತಾಲೂಕಿನ ಮುದವಾಲ ಗ್ರಾಮದಲ್ಲಿ ಮನೆ ಮೇಲೆಯೇ ವಿದ್ಯುತ್‌ಲೈನ್ ಹಾದು ಹೋಗಿದೆ. ಎಷ್ಟು ಹೇಳಿದರೂ ಮೆಸ್ಕಾಂನವರು ಕ್ರಮ ಕೈಗೊಂಡಿಲ್ಲ. ಅನಾಹುತ ಆಗುವ ಮುನ್ನ ಎಚ್ಚರ ವಹಿಸಿ
-ರೇಣುಕಮ್ಮ

ತೀರ್ಥಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಸ್ತ್ರೀಶಕ್ತಿ ಭವನ ಕಾಮಗಾರಿ ಅರ್ಧಕ್ಕೆ ನಿಂತು ವರ್ಷಗಳುರುಳಿವೆ. ಇಲ್ಲಿ ಅವ್ಯವಹಾರ ಆಗಿರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಿ.
- ಸುಂದರೇಶ್

ತಮ್ಮ ಕ್ಷೇತ್ರಕ್ಕೆ ನೀಡಿದ್ದ ಅನುದಾನ ಕಳೆದುಹೋಗಿದೆ. ಹುಡುಕಿಕೊಡಿ ಎಂದು ಕೇಳಿದ್ದೆ. ಅದು ಕಳೆದುಹೋಗಿಲ್ಲ ಎಂದು ಅಧಿಕಾರಿಗಳು ಅನುಸರಣಾ ವರದಿಯಲ್ಲಿ ಹೇಳಿದ್ದಾರೆ. ಹಾಗಿದ್ದರೆ ಸತ್ಯ ಏನು ಸಭೆಯ ದಿಕ್ಕು ತಪ್ಪಿಸಬೇಡಿ.
-ಸುಮಂಗಲ

ಕಾಡು ಕಡಿಯಲು ಹೋಗೋಣ ಬನ್ನಿ...
ಈ ರೀತಿಯ ಘೋಷಣೆ ಜಿಲ್ಲಾ ಪಂಚಾಯ್ತಿಯಲ್ಲಿ ಕೇಳಿಬಂತು. ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದ್ದು ಚಿತ್ರಶೆಟ್ಟಿಹಳ್ಳಿಗೆ ಕಳೆದ 45 ವರ್ಷದಿಂದ ವಿದ್ಯುತ್ ಸಂಪರ್ಕ ಒದಗಿಸಲು ಸಾಧ್ಯವಾಗದಿದ್ದುದು.
ಇಲ್ಲಿಗೆ ವಿದ್ಯುತ್ ಕೊಡಲೇಬೇಕೆಂಬ ದೃಢ ನಿರ್ಧಾರ ಮೆಸ್ಕಾಂ ಅಧಿಕಾರಿಗಳಿಗೆ ಇಲ್ಲ. ಅರಣ್ಯ ಇಲಾಖೆಯು ಯಾವುದು ತಮ್ಮ ಜಾಗವೆಂದು ಹೇಳುತ್ತಿದ್ದಾರೆಯೇ ಅದು ಅವರದೆಂದು ಇನ್ನೂ ತೀರ್ಮಾನ ಆಗಿಲ್ಲ. ಹಾಗೆಂದು ಹೇಳುವ ಧೈರ್ಯ ಅಧಿಕಾರಿಗಳಿಗೆ ಇಲ್ಲ ಎಂದು ಭಾನುಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು. 6 ಕಿ.ಮೀ. ದೂರ ಕಂಬ ಹಾಕುವುದಕ್ಕೆ ಅಧಿಕಾರಿಗಳು ಅಡ್‌ಡಿ ಪಡಿಸುತ್ತಿದ್ದಾರೆ. ಆದ್ದರಿಂದ ಎಲ್ಲರೂ ಒಟ್ಟಿಗೆ ಹೋಗಿ ವಿದ್ಯುತ್ ಮಾರ್ಗ ಸಾಗುವುದಕ್ಕೆ ಅಲ್ಲಿರುವ ಮರಗಳ ರಂಬೆ ಕಡಿದು ದಾರಿ ಮಾಡಿಕೊಡೋಣ ಬನ್ನಿ ಎಂದಾಗ ಸದಸ್ಯರು, ಒಟ್ಟಿಗೇ ಹೋಗೋಣ. ಯಾರು ತಡೆಯುತ್ತಾರೋ ನೋಡೋಣ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.