ಪುಷ್ಕರಣಿ ಪೋಷಣೆಯಲ್ಲಿ ಎಡವಿದ ಇಲಾಖೆ
ಕ.ಪ್ರ.ವಾರ್ತೆ, ಶಿಕಾರಿಪುರ, ಜೂ.19 ಸ್ವಚ್ಛತೆ ನೆಪದಲ್ಲಿ ಪಟ್ಟಣದ ಹುಚ್ಚೂರಾಯಸ್ವಾಮಿ ಪುಷ್ಕರಣಿಯಲ್ಲಿದ್ದ ಆಮೆ, ಮೀನು ಮತ್ತಿತರ ಜಲಚರಗಳನ್ನು ಹೊರತೆಗೆದಿದ್ದು, ಇದೀಗ ಅಳಿದುಳಿದ ಜಲಚರಗಳೂ ನೀರಿನ ಕೊರತೆಯಿಂದ ಸತ್ತು ಸುತ್ತಲಿನ ವಾತಾವರಣ ದಿನದಿಂದ ದಿನಕ್ಕೆ ಹದಗೆಡುತ್ತಿದೆ.
ಇದರಿಂದಾಗಿ ದೇವಾಲಯದ ಭಕ್ತರ ಸಹಿತ ಪ್ರಾಣಿಪ್ರಿಯರಿಂದ ನಿತ್ಯ ಸ್ವಚ್ಛತೆಯ ಉಸ್ತುವಾರಿ ಹೊತ್ತಿರುವ ಭಾರೀ ನೀರಾವರಿ ಇಲಾಖೆಯ ಅಧಿಕಾರಿಗಳ ಜತೆಗೆ ಜನಪ್ರತಿನಿಧಿಗಳು ಛೀಮಾರಿ ಹಾಕಿಸಿಕೊಳ್ಳತೊಡಗಿದ್ದಾರೆ.
ಏಕಾಏಕಿ ಸ್ಥಗಿತ: ಪಟ್ಟಣದ ಇತಿಹಾಸ ಪ್ರಸಿದ್ಧ ಹುಚ್ಚೂರಾಯಸ್ವಾಮಿ ದೇವಾಲಯದ ಸಮೀಪದ ನೂತನ ಪುಷ್ಕರಣಿಯ ಸ್ವಚ್ಛತಾ ಕಾರ್ಯ ಭರದಿಂದ ಆರಂಭವಾಗಿ ಇದೀಗ ಏಕಾಏಕಿ ಸ್ಥಗಿತಗೊಂಡಿದೆ. ಇದರಿಂದಾಗಿ ಪುಷ್ಕರಣಿಯಲ್ಲಿದ್ದ ಆಮೆ, ಮೀನು ಮತ್ತಿತರ ಜಲಚರಗಳು ಮಾತ್ರ ಮನುಷ್ಯನ ಉದರ ಸೇರಿದ್ದು, ಸ್ವಚ್ಛತಾ ಕಾರ್ಯ ಮಾತ್ರ ಸ್ಥಗಿತಗೊಂಡಿದೆ. 2 ವರ್ಷದ ಹಿಂದೆ ತಾಲೂಕಿನ ಶಾಸಕ ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ಸತತ 3 ವರ್ಷದ ಕಾಮಗಾರಿ ಮೂಲಕ ಸುಂದರ ಪುಷ್ಕರಣಿ ನಿರ್ಮಿಸಲಾಗಿತ್ತು. ಇದರಿಂದಾಗಿ ರಾಜ್ಯದ ಮೂಲೆ ಮೂಲೆಯಿಂದ ಸ್ವಾಮಿಯ ದರ್ಶನಕ್ಕೆ ಆಗಮಿಸುವ ಸಾವಿರಾರು ಭಕ್ತರು ಪುಷ್ಕರಣಿಯ ತೀರ್ಥವನ್ನು ಪ್ರೋಕ್ಷಿಸಿಕೊಳ್ಳುತ್ತಿದ್ದರು. ಪುಷ್ಕರಣಿಯ ಸಮೀಪದಲ್ಲಿನ ನೂತನ ಸುಂದರ ಉದ್ಯಾನವನ, ರಾಘವೇಂದ್ರಸ್ವಾಮಿಯ ಮಠ, ಹುಚ್ಚೂರಾಯನ ಕೆರೆ, ತೋಟ ಮೊದಲಾದ ಸ್ಥಳದಿಂದಾಗಿ ಪುಷ್ಕರಣಿಯ ಅಂದ ಹೆಚ್ಚಾಗಿದ್ದು, ಭಕ್ತರ ಧಾರ್ಮಿಕ ಭಾವನೆ ಶ್ರದ್ಧೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ.
15 ಅಡಿ ಆಳ: ಪುಷ್ಕರಣಿ ನಿರ್ಮಾಣವಾಗಿ 2 ವರ್ಷ ಗತಿಸಿದ್ದು, ಈ ಅವಧಿಯಲ್ಲಿ ಇಬ್ಬರು ಕಾಲು ಜಾರಿ ಮೃತಪಟ್ಟಿರುವುದರಿಂದ ಅಂದಾಜು 15 ಅಡಿ ಆಳದಲ್ಲಿನ ಸಂಪೂರ್ಣ ನೀರನ್ನು ಯಂತ್ರದ ಮೂಲಕ ಹೊರಹಾಕಿ ಸ್ವಚ್ಛತಾ ಕಾರ್ಯ ಕಳೆದ ವಾರದಿಂದ ಭರದಿಂದ ಆರಂಭವಾಗಿದೆ. ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಅಧಿಕವಾಗಿದ್ದ ದೊಡ್ಡ ಗಾತ್ರದ ಆಮೆ, ಮೀನು ಮತ್ತಿತರ ಜಲಚರಗಳನ್ನು ಹೊತ್ತೊಯ್ಯಲಾಗಿದೆ.
ಸ್ವಚ್ಛತಾ ಕಾರ್ಯ ಕೈಗೆತ್ತಿಕೊಂಡ ಭಾರೀ ನೀರಾವರಿ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತು ಪರೋಕ್ಷವಾಗಿ ಸಹಕರಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.
ರಕ್ಷಣೆ ಇಲ್ಲ: ಕಾವಲುಗಾರರ ರಕ್ಷಣೆ ಇಲ್ಲದೇ ಏಕಾಏಕಿ ನೀರನ್ನು ಹೊರಹೊಕಿದ ನೀರಾವರಿ ಇಲಾಖೆ ಅಳಿದುಳಿದ ನೀರನ್ನು ಕೈಬಿಟ್ಟಿರುವುದರಿಂದ ಇದೀಗ ಪುಷ್ಕರಣಿಯಲ್ಲಿದ್ದ ಕೆಲ ಜಲಚರಗಳು ಸತ್ತು ತೇಲುತ್ತಿದ್ದು, ಇದರಿಂದ ಸ್ಥಳದಲ್ಲಿ ಕೆಟ್ಟ ಬೀರತೊಡಗಿದೆ.
ಮಳೆಗಾಲ ಆರಂಭವಾಗಿದ್ದು, ಈ ಕೂಡಲೇ ಪುಷ್ಕರಣಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ಸತ್ತಿರುವ ಪ್ರಾಣಿಗಳನ್ನು ಹೊರಹಾಕದಿದ್ದಲ್ಲಿ ಮಳೆ ನೀರು ಸಂಗ್ರಹವಾಗಿ ಸರ್ಕಾರದ ಹಣ ಪೋಲಾಗುವ ಜತೆಗೆ ದುರ್ವಾಸನೆಯಿಂದ ಸ್ಥಳೀಯರ ನೆಮ್ಮದಿಯೂ ಹಾಳಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ವಿ.ಹಿಂ.ಪ ಉಪಾಧ್ಯಕ್ಷ ಎಸ್.ಎಂ. ಪ್ರಕಾಶ್, ಪುಷ್ಕರಣಿ ಪುರಾತನ ದೇವಾಲಯದ ಅಂದವನ್ನು ಹೆಚ್ಚಿಸಿದೆ. ಕಾಲಕಾಲಕ್ಕೆ ಸ್ವಚ್ಛತಾ ಕಾರ್ಯ ಅನಿವಾರ್ಯವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಇಲಾಖೆಯ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿದ್ದಾರೆ. ರೈತ ಚಂದ್ರಶೇಖರ್ ಗೌಡ ಮಾತನಾಡಿ, ಪುಷ್ಕರಣಿ ನಿರ್ಮಾಣ ನೆಪದಲ್ಲಿ ಕೆರೆಯ ಪುರಾತನ ತೂಬನ್ನು ಮುಚ್ಚಲಾಗಿದೆ. ಕೆರೆ, ಪುಷ್ಕರಣಿಯ ಬಗ್ಗೆ ರೈತರ ಜತೆ ಸಹಾನುಭೂತಿಯಿಂದ ವರ್ತಿಸದ ಇಲಾಖೆಯ ಅಧಿಕಾರಿಗಳ ಬಗ್ಗೆ ಕಿಡಿಕಾರಿದರು.
--
ಸಮಾಲೋಚನಾ ಸಭೆ
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜೂ.23ರ ಭಾನುವಾರ ಬೆಳಗ್ಗೆ 11ಗಂಟೆಗೆ ಭದ್ರಾವತಿಯ ನ್ಯೂಟೌನ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರ ಸಮಾಲೋಚನಾ ಸಭೆ ಏರ್ಪಡಿಸಿದೆ. ಸಭೆಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವ ವಿಚಾರ ಕುರಿತು ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ್ ದಸ್ಯರೊಂದಿಗೆ ಸಮಾಲೋಚಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

