ಯಶಸ್ಸಿನತ್ತ ಶಿಕ್ಷಣ ಹಕ್ಕು ಕಾಯ್ದೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.19
6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳು ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಪಡೆಯಬೇಕೆಂಬ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಶಿಕ್ಷಣ ಹಕ್ಕು ಕಾಯಿದೆ-2009 ಜಿಲ್ಲೆಯಲ್ಲಿ ಯಶಸ್ಸಿನ ಹಾದಿ ತುಳಿಯುತ್ತಿದೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶಿಕ್ಷಣ ಹಕ್ಕು ಕಾಯ್ದೆಯಡಿ ಶಾಲೆಗೆ ದಾಖಲಾದ ಮಕ್ಕಳ ಸಂಖ್ಯೆ ದ್ವಿಗುಣಗೊಂಡಿದೆ. 2012-13 ಶೈಕ್ಷಣಿಕ ಸಾಲಿನಲ್ಲಿ ಜಾರಿಯಾದ ಯೋಜನೆಯನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಮಕ್ಕಳಿಗೆ ತಲುಪಿಸುವಲ್ಲಿ ಪ್ರಯತ್ನಿಸುತ್ತಿದ್ದರೆ, ತಾಲೂಕು ಮಟ್ಟದ ಅಧಿಕಾರಿಗಳು ಇದನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ.
ದುರ್ಬಲ ವರ್ಗದವರಿಗೆ: ಕಾಯ್ದೆಯ ಸೆಕ್ಷನ್ 12(1)(ಬಿ), (ಇ) ಸೆಕ್ಷನ್ 12(1)(ಸಿ) ಪ್ರಕಾರ ಅನುದಾನ ರಹಿತ ಶಾಲೆಗಳಲ್ಲಿ ಆ ಶಾಲೆಯಲ್ಲಿ 1ನೇ ತರಗತಿಗೆ ಅಥವಾ ಪೂರ್ವ ಪ್ರಾಥಮಿಕ ತರಗತಿಗೆ ಲಭ್ಯವಿರುವ ಸೀಟುಗಳ ಪೈಕಿ (ಶೇ.25ಕ್ಕೆ ಕಡಿಮೆ ಇಲ್ಲದಂತೆ) ನೆರೆ ಹೊರೆಯಲ್ಲಿ ವಾಸಿಸುವ ಅನನುಕೂಲ ಪರಿಸ್ಥಿತಿಯಲ್ಲಿರುವ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಪ್ರವೇಶ ನೀಡಬೇಕು.
ಈ ಮಕ್ಕಳಿಗೆ 8ನೇ ತರಗತಿವರೆಗೆ ಶಿಕ್ಷಣ ಸಂಪೂರ್ಣ ಉಚಿತವಾಗಿರುತ್ತದೆ. ಈ ನಿಯಮದ ಅಡಿಯಲ್ಲಿ ದಾಖಲಾದ ಮಕ್ಕಳಿಂದ ಯಾವುದೇ ಶುಲ್ಕ ಪಡೆಯುವಂತಿಲ್ಲ.
132 ಅರ್ಜಿ ತಿರಸ್ಕೃತ: ಶಿಕ್ಷಣ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಕಳೆದ ಬಾರಿ 2012-13ನೇ 225 ಶಾಲೆಗಳು ಕಾಯ್ದೆಗೆ ಒಳಪಟ್ಟಿದ್ದು, 564 ಅರ್ಜಿಗಳಲ್ಲಿ 432 ಮಕ್ಕಳು ಶಾಲೆಗೆ ಪ್ರವೇಶ ಪಡೆದರೆ, ಉಳಿದ 132 ಅರ್ಜಿಗಳು ತಿರಸ್ಕೃತಗೊಂಡಿದ್ದವು. ಈ ಸಾಲಿನಲ್ಲಿ ಈ ಯೋಜನೆಗೆ ರು. 24 91.042 ವ್ಯಯಿಸಲಾಗಿದೆ.
ಆದರೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಇದು ಗಣನೀಯ ಪ್ರಮಾಣದಲ್ಲಿ ದ್ವಿಗುಣಗೊಂಡಿದ್ದು, ಶಿಕ್ಷಣ ಹಕ್ಕು ಕಾಯ್ದೆಯಡಿ ಈ ಬಾರಿ 414 ಶಾಲೆಗಳಿಂದ 2,088 ಸೀಟು ಕಾಯ್ದಿರಿಸಲಾಗಿತ್ತು.
ಅದರಂತೆ 3,437 ಅರ್ಜಿ ಬಂದಿದ್ದು, ಇವುಗಳಲ್ಲಿ 1,939 ಅರ್ಜಿಗಳು ಪುರಸ್ಕೃತಗೊಂಡು 1,768 ಮಕ್ಕಳು ಅನುದಾನ ರಹಿತ ಶಾಲೆಗಳಲ್ಲಿ, ಎಲ್ಕೆಜಿಗೆ 602 ಮತ್ತು 1ನೇ ತರಗತಿಗೆ 1,166 ಮಕ್ಕಳು ದಾಖಲಾಗಿದ್ದಾರೆ.
ಉಳಿದ ಪ್ರವೇಶಾತಿ ಅವಧಿಯಲ್ಲಿ ಮತ್ತಷ್ಟು ಸೀಟು ಭರ್ತಿಯಾಗುವ ನೀರಿಕ್ಷೆಯಲ್ಲಿದೆ ಇಲಾಖೆ. ದಾಖಲಾದ ಪ್ರತಿ ಮಗುವಿಗೆ (ಎಲ್ಕೆಜಿ) 5,924, (1ನೇ ತರಗತಿಗೆ)11, 848 ರುಪಾಯಿ ಪ್ರತಿ ವರ್ಷ ಖರ್ಚು ಮಾಡಲಾಗಿದೆ. ಇದು ಮಗು 8ನೇ ತರಗತಿ ಓದುವವರೆಗೂ ಅನ್ವಯಲಾಗುತ್ತಿದೆ.
ತಾಲೂಕುವಾರು ಪ್ರಗತಿ: ಭದ್ರಾವತಿ 387, ಹೊಸನಗರ 63, ಸಾಗರ 205, ಶಿಕಾರಿಪುರ 268, ಶಿವಮೊಗ್ಗ (ತಾ)974, ಸೊರಬ 79, ತೀರ್ಥಹಳ್ಳಿ 112 ಒಟ್ಟು 2,088 ಸೀಟುಗಳು ಮೀಸಲಿಡಲಾಗಿತ್ತು. ಇವುಗಳಲ್ಲಿ (ಎಲ್ಕೆಜಿ) ಭದ್ರಾವತಿ 66, ಹೊಸನಗರ 10, ಸಾಗರ 80, ಶಿಕಾರಿಪುರ 26, ಶಿವಮೊಗ್ಗ (ತಾ)406, ಸೊರಬ 0, ತೀರ್ಥಹಳ್ಳಿ 14 ಒಟ್ಟು 602.
(1ನೇ ತರಗತಿ)ಭದ್ರಾವತಿ 268, ಹೊಸನಗರ 29, ಸಾಗರ 89, ಶಿಕಾರಿಪುರ 186, ಶಿವಮೊಗ್ಗ (ತಾ)418, ಸೊರಬ 82, ತೀರ್ಥಹಳ್ಳಿ 94 ಒಟ್ಟು 1169.
ವಿಫಲ: ಇನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಹಕ್ಕು ಕಾಯ್ದೆ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದು, ನಿರಿಕ್ಷೆಯ ಮಟ್ಟ ಮುಟ್ಟಿಲ್ಲ. ಕೆಲ ತಾಲೂಕುಗಳಲ್ಲಿ ಸೀಟುಗಳು ಹಾಗೇ ಉಳಿದಿವೆ. ಭದ್ರಾವತಿ 50, ಸಾಗರ 54, ಶಿಕಾರಿಪುರ 50 ಮತ್ತು ತೀರ್ಥಹಳ್ಳಿಯಲ್ಲಿ 11 ಸೀಟು ಉಳಿದುಕೊಂಡು ಒಟ್ಟಾರೆ 165 ಸೀಟುಗಳು ವ್ಯರ್ಥವಾಗಿವೆ. ಆದರೆ, ಶಿವಮೊಗ್ಗ ತಾಲೂಕಿನಲ್ಲಿ ಕಾಯ್ದೆಯನ್ನು ಸದ್ಬಳಕೆ ಮಾಡಿಕೊಂಡಿರುವ ಕ್ಷೇತ್ರಶಿಕ್ಷಾಧಿಕಾರಿಗಳು 18 ಸೀಟುಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಅಂದರೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಅರ್ಜಿಗಳು ಬಂದಿವೆ.
ಪ್ರತಿ ತಾಲೂಕಿಗೂ ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆಗೆ ಸಾರ್ವಜನಿಕ ಶಿಕ್ಷಣ ಅಭಿಯಾನದ ಅಧಿಕಾರಿಗಳು ಮತ್ತು ಶಿಕ್ಷಣ ಸಂಯೋಜಕರ ತಂಡ ಇರುತ್ತದೆ. ಆದರೆ ಶಿಕ್ಷಣ ಹಕ್ಕು ಕಾಯ್ದೆ ಬಗ್ಗೆ ಗ್ರಾಮಾಂತರ ಪ್ರದೇಶಗಳಲ್ಲಿ ಅರಿವು ಮೂಡಿಸುವಲ್ಲಿ ವಿಫಲರಾಗಿದ್ದಾರೆ.
ಏಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಕಾಯ್ದೆ ಕುರಿತು ಯಾವುದೇ ಮಾಹಿತಿ ಇಲ್ಲದಿರುವುದು ಕಾಯ್ದೆಯು ತಾಲೂಕು ಮಟ್ಟದಲ್ಲಿ ವಿಫಲವಾಗಲು ಕಾರಣವಾಗಿದೆ.
ದೂರುಗಳೇ ಬಂದಿಲ್ಲ: ಶಿಕ್ಷಣ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ ಇದುವರೆಗೂ ಯಾವುದೇ ದೂರು ಬಂದಿಲ್ಲ. ಪ್ರವೇಶಾತಿ ಅವಧಿ ಇನ್ನು ಒಂದು ತಿಂಗಳು ಇರುವುದರಿಂದ ದೂರುಗಳು ಬರಬಹುದು. ಒಂದು ವೇಳೆ ದೂರು ಬಂದರೆ ಅಂತಹ ಶಾಲೆಗಳ ಮಾನ್ಯತೆ ರದ್ದು ಮಾಡಲಾಗುತ್ತದೆ ಎನ್ನತ್ತಾರೆ ಇಲಾಖೆ ಅಧಿಕಾರಿಗಳು.
ಇವರೇನಂತಾರೆ?
ಕಳೆದ ಬಾರಿಗಿಂತ ಈ ಬಾರಿ ಕಾಯ್ದೆ ಬಳಸಿಕೊಳ್ಳುವಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಸಫಲರಾಗಿದ್ದಾರೆ. ಆದರೆ, ತಾಲೂಕು ಮಟ್ಟದಲ್ಲಿ ಆರ್ಟಿಐ ಬಳಕೆ ಆಗದಿರುವುದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಾರಣಗಳನ್ನು ಕೇಳಲಾಗಿದೆ ಹಾಗೂ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
-ಎಸ್.ಕುಮಾರ್, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ
- ಮೋಹನ್ ಕುಮಾರ್ ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

