ಶಿವಮೊಗ್ಗ

ಮುಚ್ಚಿರುವ ಶಾಲೆ ಸಮೀಕ್ಷೆಗೆ ಮುಂದಾದ ಕಸಾಪ

Published On :

ಶಿವಮೊಗ್ಗ: ಮಕ್ಕಳು ಬಾರದ ನೆಪ ಹೇಳಿ ಸರ್ಕಾರಿ ಶಾಲೆಗಳನ್ನು ಮುಚ್ಚಿರುವ ಸರ್ಕಾರ ಈಗ ಪದವಿ ಕಾಲೇಜುಗಳನ್ನೂ ಮುಚ್ಚುವ ಚಿಂತನೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಮುಚ್ಚಿರುವ ಶಾಲೆಗಳು ನಿಜವಾಗಿಯೂ ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ ಕಾರಣದಿಂದಲೇ ಮುಚ್ಚಿವೆಯೇ, ಬೇರೆ ಕೃತಕ ಕಾರಣಗಳಿವೆಯೇ, ಈ ಶಾಲೆಗಳನ್ನು ಪುನಾರಂಭಿಸಲು ಸಾಧ್ಯವೇ ಎಂಬ ಬಗ್ಗೆ ವಾಸ್ತವ ಸಮೀಕ್ಷೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ.
 ಹಿರಿಯ ಲೇಖಕ ಕೋ. ಚನ್ನಬಸಪ್ಪ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲಾ ತಾಲೂಕು ಘಟಕಗಳು ಶಾಲೆಗಳ ಸಮೀಕ್ಷೆ ಕಾರ್ಯದಲ್ಲಿ ತೊಡಗಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕಗಳ ಪದಾಧಿಕಾರಿಗಳು ಮುಚ್ಚಿರುವ ಶಾಲೆಗೆ, ಊರಿಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ.
ಕಾರಣವೇನು: ರಾಜ್ಯದ ಕೆಲವು ಕಡೆ ಮುಚ್ಚಿರುವ ಒಂದೆರಡು ಶಾಲೆಗಳನ್ನು ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಪುನಾರಂಭ ಮಾಡಲಾಗಿದೆ. ಈ ವಿಷಯ ಗಮನಕ್ಕೆ ಬಂದಾಗ ರಾಜ್ಯದ ಇತರೆಡೆಯೂ ಹೀಗೆಯೇ ಆಗಿರಬಹುದೇ ಎಂದು ಕಸಾಪ ಸಭೆಗಳಲ್ಲಿ ಚರ್ಚೆ ನಡೆದಿದೆ.
 ಸರ್ಕಾರಿ ಶಾಲೆಗಳೆಂದರೆ ಕನ್ನಡ ಶಾಲೆಗಳು, ಇವುಗಳನ್ನು ಮುಚ್ಚುವುದು ಸರಿ ಅಲ್ಲ ಎಂದು ಮೊದಲಿನಿಂದಲೂ ಪ್ರತಿಪಾದಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ನಿಜವಾಗಿಯೂ ಶಾಲೆಗಳನ್ನು ಮುಚ್ಚುವುದಕ್ಕೆ ಕಾರಣಗಳೇನು ಎಂದು ಪರಿಶೀಲಿಸಲು ಮುಂದಾಗಿದೆ. ಈ ಸಮೀಕ್ಷಾ ಕಾರ್ಯಕ್ಕೆ ಕೋ. ಚನ್ನಬಸಪ್ಪ ಅವರ ಮಾರ್ಗದರ್ಶನ ಪಡೆಯಲು ನಿರ್ಧರಿಸಿದೆ. ಸಮೀಕ್ಷೆ ನಡೆಸಲು ಮುದ್ರಿತ ಮಾದರಿಯನ್ನು ಎಲ್ಲಾ ತಾಲೂಕು ಘಟಕಗಳಿಗೆ ಈಗಾಗಲೇ ಕಳುಹಿಸಿದೆ.
 ಶಾಲೆಗಳನ್ನು ಮುಚ್ಚುವ ನಿರ್ಧಾರ ಅಧಿಕಾರಿಗಳ ತಪ್ಪು ಮಾಹಿತಿಯಿಂದ ಆಗಿರಬಹುದು. ಅಥವಾ ಅಂದಿನ ಸಂದರ್ಭದಲ್ಲಿ ಉದ್ಭವಿಸಿದ್ದ ಸಮಸ್ಯೆ ಆಗಿರಬಹುದು. ಈಗ ಪರಿಸ್ಥಿತಿ ಬದಲಾಗಿದ್ದರೂ ಮತ್ತೆ ಶಾಲೆ ತೆರೆಯಲು ಅಧಿಕಾರಿಗಳು ಮುಂದಾಗದಿರಬಹುದು. ಆದ್ದರಿಂದ ಮುಚ್ಚಿರುವ ಶಾಲೆಗಳಿರುವ ಸ್ಥಳಕ್ಕೆ ತೆರಳಿ ವಾಸ್ತವ ವರದಿಯನ್ನು ಸಿದ್ಧಪಡಿಸಿ, ಕ್ರೋಢೀಕರಿಸಿ, ನಿಜವಾದ ಕಾರಣ ಹುಡುಕುವುದು ಸಮೀಕ್ಷೆಯ ಉದ್ದೇಶ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದ್ದಾರೆ. ಯಾವ ಕ್ರಮಗಳನ್ನು ಕೈಗೊಂಡರೆ ಮತ್ತೆ ಶಾಲೆಯನ್ನು ತೆರೆಯಬಹುದು ಎಂಬುದನ್ನೂ ಸರ್ಕಾರಕ್ಕೆ ತಿಳಿಸಲಾಗುವುದು ಎಂದಿದ್ದಾರೆ.
ಸರ್ಕಾರಕ್ಕೆ ಸಲ್ಲಿಕೆ: ಈ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು. ಶಾಲೆಗಳನ್ನು ಮತ್ತೆ ತೆರೆಯಲು ಸಾಧ್ಯವಿದ್ದರೆ ಇದನ್ನು ಸರ್ಕಾರದ ಗಮನಕ್ಕೆ ತಂದು ಪ್ರಯತ್ನ ನಡೆಸುತ್ತೇವೆ ಎಂದು ಡಿ. ಮಂಜುನಾಥ್ ಹೇಳಿದ್ದಾರೆ.
 15 ದಿನಗಳಲ್ಲಿ ಸಮೀಕ್ಷೆ ಮುಗಿಸಲಾಗುವುದು. ಜುಲೈ 9ರಂದು ಬೆಂಗಳೂರಿನಲ್ಲಿ ಕಸಾಪ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅಂದು ಎಲ್ಲಾ ತಾಲೂಕುಗಳಿಂದ ಸಂಗ್ರಹಿಸಿದ ಸಮೀಕ್ಷಾ ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.