ಸಕ್ರಮೀಕರಣ ಸಮಿತಿ ನಿರ್ಧಾರವೇ ಅಕ್ರಮ
ಕ.ಪ್ರ. ವಾರ್ತೆ, ಶಿವಮೊಗ್ಗ, ಜೂ.21
ಆಯನೂರು ಸಮೀಪದ ದೊಡ್ಡದಾನವಂದಿ ಗ್ರಾಮದೊಳಗೆ ಈಗ ಬೇಗುದಿ ಮನೆ ಮಾಡಿದೆ. ತಮ್ಮೂರಿಗೆ ಸೇರಿದ ಜಾಗವನ್ನು ಅಪರಿಚಿತ ವ್ಯಕ್ತಿಗಳು ರಾತ್ರೋರಾತ್ರಿ ಒತ್ತುವರಿ ಮಾಡಲು ಹೊರಟಿರುವುದನ್ನು ಸಹಿಸಲು ಗ್ರಾಮಸ್ಥರು ಸುತಾರಾಂ ಸಿದ್ಧರಿಲ್ಲ. ಕಾರಣ, ಸರ್ಕಾರದಿಂದ ಭೂಮಿ ಪಡೆದುಕೊಂಡವರ್ಯಾರೂ ತಮ್ಮೂರಿಗೆ ಸೇರಿದವರಲ್ಲ, ಹಾಗೆಯೇ ಅವರು ಭೂಮಿ ಪಡೆಯಲು ಅರ್ಹರಲ್ಲ ಎಂಬುದೇ ಅವರ ವಾದ.
ಅಷ್ಟೇ ಅಲ್ಲದೇ, ಸಕ್ರಮೀಕರಣ ಸಮಿತಿಯ ನಿರ್ಧಾರವೇ ಅಕ್ರಮ ಎಂಬುದು ಗ್ರಾಮಸ್ಥರ ಗಂಭೀರ ಆರೋಪ. ಹೇಗೆಲ್ಲಾ ನಿಯಮಗಳ ಉಲ್ಲಂಘನೆಯಾಗಿದೆ ಎಂಬುದಕ್ಕೂ ಅವರು ಕಾರಣಗಳನ್ನು ಕೊಡುತ್ತಾರೆ.
ದೊಡ್ಡದಾನವಂದಿಯ 119 ಎಕರೆ ಗೋಮಾಳದಲ್ಲಿ 30-35 ಕುಟುಂಬಗಳು ಸಣ್ಣ ಹಿಡುವಳಿಗಳಲ್ಲಿ 15-20 ವರ್ಷಗಳಿಂದ ಬಗರ್ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಇವರೆಲ್ಲಾ ತಮಗೆ ಜಮೀನು ಮಂಜೂರು ಮಾಡುವಂತೆ ಅರ್ಜಿ ಹಾಕಿಕೊಂಡು ಬಂದಿದ್ದಾರೆ. ನಾವೇನು ಶ್ರೀಮಂತರಲ್ಲ, 2-3 ಎಕರೆಯಲ್ಲಿ ಕೃಷಿ ಮಾಡುತ್ತಿದ್ದೇವೆ. ಆದರೆ, ನಮ್ಮನ್ನು ಬಿಟ್ಟು ಊರಿಗೆ ಸಂಬಂಧಪಡದವರಿಗೆ ಸಕ್ರಮೀಕರಣ ಸಮಿತಿ ಜಮೀನು ಮಂಜೂರು ಮಾಡಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡುತ್ತಾರೆ.
ಇದ್ದವರಿಗೇ ಜಮೀನು: ಗ್ರಾಮ ಪಂಚಾಯಿತಿ ಸಿಬ್ಬಂದಿಯೊಬ್ಬರು ತಮ್ಮ ಹೆಸರಿನಲ್ಲಿ ಜಮೀನಿದ್ದರೂ ತಮ್ಮ ಪತ್ನಿ ಹೆಸರಿಗೆ ಇಲ್ಲಿ ಜಮೀನು ಕೊಡಿಸಿದ್ದಾರೆ. ಅದೇ ರೀತಿ ಗಂಡನ ಹೆಸರಿನಲ್ಲಿ 8-10 ಎಕರೆ ಜಮೀನಿದ್ದರೂ, ಪತ್ನಿ ಹೆಸರಿಗೆ ಇಲ್ಲಿ ಸಿಗುವಂತೆ ನೋಡಿಕೊಂಡಿದ್ದಾರೆ. ಜೊತೆಗೆ ತಮ್ಮನ ಹೆಸರಿಗೂ 4.38 ಎಕರೆ ಜಮೀನು ಸಿಗುವಂತೆ ನೋಡಿಕೊಂಡಿದ್ದಾರೆ. ಇದು ಎರಡು ಉದಾಹರಣೆಯಷ್ಟೇ, ಒಟ್ಟಾರೆ ಇಲ್ಲಿ ಬಹುಪಾಲು ಉಳ್ಳವರೇ ಜಮೀನು ದಕ್ಕಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಅನುಮಾನಾಸ್ಪದ ನಡೆ: ಸಕ್ರಮೀಕರಣ ಸಮಿತಿ ನಿರ್ಣಯದಂತೆ ಫಲಾನುಭವಿಗೆ ಭೂಮಿ ಹಂಚಿದ ನಂತರ ಸಂಬಂಧಪಟ್ಟ ಆದೇಶವನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪ್ರಕಟಿಸಬೇಕು. ನಂತರವಷ್ಟೇ ಮಂಜೂರಾತಿ ನೀಡಬೇಕು. ಆದರೆ, ಈ ಪ್ರಕರಣದಲ್ಲಿ ಎಲ್ಲವೂ ಗುಟ್ಟಾಗಿ ನಡೆದಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ ನಾಯ್ಕ ಹೇಳುತ್ತಾರೆ.
ಪ್ರಭಾವಿಗಳ ಕೈವಾಡ, ದುಡ್ಡಿನ ವ್ಯವಹಾರ, ಅರ್ಜಿ ತಿದ್ದುಪಡಿ ಇತ್ಯಾದಿಯಿಂದಾಗಿ ಅನರ್ಹರಿಗೆ ಜಮೀನು ಸಕ್ರಮ ಮಾಡಿಕೊಡಲಾಗಿದೆ. ಇದು ಸ್ಪಷ್ಟ ಅಧಿಕಾರ ದುರುಪಯೋಗ ಎಂದೇ ಅವರು ವಿವರಿಸುತ್ತಾರೆ.
ಇದಕ್ಕಿಂತ ಮುಖ್ಯವಾಗಿ 15-20 ವರ್ಷದಿಂದ ಬಗರ್ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿರುವ ಬಡ ಕುಟುಂಬಗಳಿಗೆ ಜಮೀನು ಹಂಚಿಕೆ ಮಾಡದೇ, ಊರಿಗೆ ಸಂಬಂಧಪಡದ ಅನರ್ಹರಿಗೆ ಜಮೀನು ಹಂಚಿದ್ದು ಎಷ್ಟು ಸರಿ ಎಂಬುದು ಜಯರಾಮನಾಯ್ಕ ಅವರ ಪ್ರಶ್ನೆ.
ನಕಲಿ ದಾಖಲೆ ಸೃಷ್ಟಿಯೇ? ಗೋಮಾಳ ಭೂಮಿ ಹಂಚಲು ನಕಲಿ ದಾಖಲೆ ಸೃಷ್ಟಿಯಾಯಿತೇ, ಈಗ ದೊಡ್ಡದಾನವಂದಿ ಗ್ರಾಮಸ್ಥರು ಎತ್ತಿರುವ ಪ್ರಶ್ನೆ ಇದು. ಅರ್ಹರಲ್ಲದವರನ್ನು ಸಕ್ರಮೀಕರಣ ಸಮಿತಿ ಆಯ್ಕೆ ಮಾಡಿದ್ದಾದರೂ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ. ಫಲಾನುಭವಿಯ ಪೂರ್ವಾಪರದ ಖಚಿತತೆ ಇಲ್ಲದೇ ಹಣದ ವ್ಯವಹಾರ ನಡೆದಿರುವ ಕಾರಣ ಸುಳ್ಳುದಾಖಲೆ ಸೃಷ್ಟಿಯಾಗಿದೆ ಎಂದು ನೇರಾನೇರ ಹೇಳುತ್ತಾರೆ.
ಫಲಾನುಭವಿಗಳ ವಾಸ ದೃಢೀಕರಣ ಪ್ರಕ್ರಿಯೆಯೇ ಸರಿಯಾಗಿ ನಡೆದಿಲ್ಲ. ಕೆಳಹಂತದ ಸಿಬ್ಬಂದಿಯಿಂದ ತಹಸೀಲ್ದಾರ್ವರೆಗೆ ಕೆಲ ಫಲಾನುಭವಿಗಳ ಸುಳ್ಳು ದೃಢೀಕರಣ ಪತ್ರ ಒಪ್ಪಿ ಸಹಿ ಮಾಡಲಾಗಿದೆ. ಈ ಸುಳ್ಳಿಗೇ ಬೆಲೆ ಬಂದಿದೆ ಎಂದು ಗ್ರಾಮದ ಪ್ರಮುಖರು ವಸ್ತುಸ್ಥಿತಿ ವಿವರಿಸುತ್ತಾರೆ.
ಸಕ್ರಮೀಕರಣ ಸಮಿತಿಗೆ ಪ್ರಶ್ನೆ
ಶಿವಮೊಗ್ಗ ತಾಲೂಕು ಹಾರ್ನಹಳ್ಳಿ ಹೋಬಳಿ ದೊಡ್ಡದಾನವಂದಿ ಗ್ರಾಮದ ಸ.ನಂ.3ರಲ್ಲಿ ಬಗರ್ಹುಕುಂ ಸಾಗುವಳಿ ಮಾಡುತ್ತಿರುವ 9 ಜನರಿಗೆ ಜಮೀನು ಸಕ್ರಮೀಕರಿಸಲು ತೀರ್ಮಾನಿಸಲಾಗಿದೆ ಎಂದು ಸಕ್ರಮೀಕರಣ ಸಮಿತಿ ಆದೇಶ ನೀಡಿದೆ.
ಇದಾದ ನಂತರ ತಹಸೀಲ್ದಾರ್ ಸಕ್ರಮೀಕರಣ ಸಮಿತಿಯ ನಿರ್ಣಯವನ್ನು ಅನುಷ್ಠಾನಕ್ಕೆ ತಂದರು. ಅಂದರೆ, ಸ.ನಂ.3ರಲ್ಲಿ 9 ಜನರಿಗೆ ಹಂಚಲಾದ ಭೂಮಿಯಲ್ಲಿ ಮುಂಚಿನಿಂದ ಕೃಷಿ ಚಟುವಟಿಕೆ ನಡೆಸಲಾಗಿದೆ ಎಂಬುದು ಖಚಿತ.
ವಸ್ತುಸ್ಥಿತಿ ಎಂದರೆ ಅದು ಕುರುಚಲು ಗಿಡ ಬೆಳೆದ ಕಾಡು ಪ್ರದೇಶ. ಗ್ರಾಮದ ಗೋವುಗಳು ಮೇವು ಅರಸಿ ಬರುವ ಪ್ರದೇಶ. ಭವಿಷ್ಯದಲ್ಲಿ ಸರ್ಕಾರಿ ಕಟ್ಟಡಗಳು, ಬಡವರಿಗೆ ನಿವೇಶನ ಹಂಚಲು ಉಪಯೋಗವಾಗುತ್ತದೆಂದು ಗ್ರಾಮಸ್ಥರು ಕನಸು ಕಟ್ಟಿದ ಭೂಮಿ.
ಇದೀಗ ಫಲಾನುಭವಿ ರಾತ್ರೋರಾತ್ರಿ ಜನರ ಕಣ್ಣಿಗೆ ಮಣ್ಣೆರೆಚಿ ಕುರುಚಲು ಕಾಡನ್ನು ಕಡಿದು, ಭೂಮಿಯನ್ನು ಕೃಷಿಗೆ ಹಸನು ಮಾಡುವ ಪ್ರಯತ್ನ ಏಕೆ ಎಂದು ದೊಡ್ಡದಾನವಂದಿ ಗ್ರಾಮಸ್ಥರು ಸಕ್ರಮೀಕರಣ ಸಮಿತಿಯನ್ನು ಪ್ರಶ್ನಿಸುತ್ತಾರೆ. ಈ ಭೂಮಿ ಹಂಚಿಕೆಯ ಹಿಂದೆ ಹಣದ ವಹಿವಾಟು ನಡೆದಿಲ್ಲ ಎಂಬುದನ್ನು ಹೇಗೆ ನಂಬೋದು ಎಂದೂ ಅವರು ಕೇಳುತ್ತಿದ್ದಾರೆ.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

