ಶಿವಮೊಗ್ಗ

ದಾದಿಯರಿಗೆ ಕರ್ತವ್ಯದ ಸ್ಥಳದಲ್ಲೇ ವಾಸ ಕಡ್ಡಾಯ

Published On :

ಕಪ್ರ ವಾರ್ತೆ ,  ಶಿವಮೊಗ್ಗ ,  ಜೂ. 22
ಎಎನ್‌ಎಂ ಸಹಾಯಕ ದಾದಿಯರು ಕೂಡಲೇ ತಮ್ಮ ಕರ್ತವ್ಯದ ಸ್ಥಳದಲ್ಲಿ ವಾಸ ಮಾಡದಿದ್ದರೆ ಅಂಥವರನ್ನು ಗುರುತಿಸಿ ಇನ್ನೊಂದು ವಾರದಲ್ಲಿ ಅವರನ್ನು ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗುವುದು.
 ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯು ಇಂತವರ ಪಟ್ಟಿ ಮಾಡಿಕೊಂಡಿದ್ದು, ದೀರ್ಘ ಕಾಲದಿಂದ ಯಾರು ತಮ್ಮ ಕರ್ತವ್ಯ ನಿಯೋಜನೆಯ ಸ್ಥಳದಲ್ಲಿ ವಾಸ ಮಾಡುತ್ತಿಲ್ಲವೋ ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ನಿರ್ಧರಿಸಿದೆ.
 ಶನಿವಾರ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಾಗ ಕಲಗೋಡು ರತ್ನಾಕರ್ ಹಾಗೂ ಅಶೋಕ್ ನಾಯ್ಕ್ ಅವರು ಎಎನ್‌ಎಂಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದರು.
ಸ್ಥಳದಲ್ಲೇ ಅಮಾನತು: ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಓ ಶಿವಣ್ಣ ರೆಡ್ಡಿ, ಭದ್ರಾವತಿ ತಾಲೂಕಿನಲ್ಲಿ ಕೆಲವರು ಸ್ಥಳದಲ್ಲಿಯೇ ವಾಸಿಸುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ರೂಂ ಬಾಡಿಗೆ ಪಡೆದು ಅಲ್ಲಿ ವಾಸಯೋಗ್ಯ ವಸ್ತುಗಳನ್ನು ಜೋಡಿಸಿರುತ್ತಾರೆ. ಪರಿಶೀಲನೆಗೆ ಹೋದಾಗ ಇದನ್ನೇ ತೋರಿಸುತ್ತಾರೆ ಎಂದರು.
 ಆಗ ಸಿಇಓ ಸಸಿಕಾಂತ್ ಸೆಂಥಿಲ್, ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರಿಂದ ಮಾಹಿತಿ ಪಡೆಯಿರಿ. ಅವರು ವಾಸವಾಗಿಲ್ಲ ಎಂದು ಗೊತ್ತಾದರೆ ಸ್ಥಳದಲ್ಲೇ ಅಮಾನತು ಮಾಡಿ ಎಂದು ಸೂಚನೆ ನೀಡಿದರು.
ಬ್ಯಾಕೋಡು ಸಂಕಷ್ಟ: ಸಾಗರ ತಾಲೂಕಿನ ತುಮರಿ-ಬ್ಯಾಕೋಡು ಹೋಬಳಿಯ ನಿವಾಸಿಗಳ ಅವಸ್ಥೆಯು ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಸದಸ್ಯೆ ಪದ್ಮಾವತಿ ಚಂದ್ರಕುಮಾರ್ ಅವರು ವಿಷಯ ಪ್ರಸ್ತಾಪಿಸಿ, ಅಪಘಾತವಾದಾಗ ಮರಣೋತ್ತರ ಪರೀಕ್ಷೆಯನ್ನು ಬಯಲಲ್ಲಿಯೇ ಮಾಡಬೇಕಾಗಿದೆ. ಶಾಲೆಯ ಹತ್ತಿರವೇ ಈ ಕಾರ್ಯ ನಡೆಯುವುದರಿಂದ ಮಕ್ಕಳು ಭಯಬೀತರಾಗಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ಕೋರಿದರು.
 ಪ್ರತಿಕ್ರಿಯಿಸಿದ ಡಿಎಚ್‌ಓ, ಇಲ್ಲಿರುವ ಆಸ್ಪತ್ರೆಯಲ್ಲಿದ್ದ ಏಕೈಕ ವೈದ್ಯರು ಇತ್ತೀಚೆಗೆ ವರ್ಗಾವಣೆ ಪಡೆದಿದ್ದಾರೆ. ಅಲ್ಲೀಗ ವೈದ್ಯರೇ ಇಲ್ಲ ಎಂದರು.
ಅಲ್ಲಿ 108 ವಾಹನವೂ ಇಲ್ಲ ಎಂಬುದನ್ನು ಗಮನಿಸಿದ ಸಿಇಓ ಸಸಿಕಾಂತ್ಸೆಂಥಿಲ್, ಈ ಬಗ್ಗೆ ಚರ್ಚಿಸಿ ಪ್ರಯತ್ನಿಸುವುದಾಗಿ ಹೇಳಿದರು.
ಖಾಸಗಿ ಜಾಗದಲ್ಲಿ ಬಾವಿ: ಖಾಸಗಿ ಜಾಗದಲ್ಲಿ ಸರ್ಕಾರಿ ಬಾವಿ ತೋಡಿದರೆ ಅದಕ್ಕೆ ಹಣ ನೀಡುತ್ತಿಲ್ಲ ಎಂದು ಸದಸ್ಯ ಯಲ್ಲಪ್ಪ ಆಕ್ಷೇಪಿಸಿದರು. ಸರ್ಕಾರಿ ಆಸ್ತಿ ಸರ್ಕಾರಿ ಜಾಗದಲ್ಲಿಯೇ ಇರಬೇಕು ಎಂದು ಅಧಿಕಾರಿಗಳು ಸಮಾಜಯಿಷಿ ನೀಡಿದಾಗ, ಎಲ್ಲೆಲ್ಲೋ ಬಾವಿ ತೆಗೆದರೆ ನೀರು ಸಿಗಬೇಕಲ್ಲ ಎಂದು ಯಲ್ಲಪ್ಪ ಮರು ಪ್ರಶ್ನಿಸಿದರು.
ಕೊನೆಗೆ ಸಿಇಓ, ಬಾವಿ ಖಾಸಗಿ ಜಾಗದಲ್ಲಿಯೇ ಇದ್ದರೂ ಇದು ಸರ್ಕಾರಕ್ಕೆ ಸೇರಿದ್ದು ಎಂದು ಗ್ರಾಮ ಪಂಚಾಯ್ತಿಗಳಿಂದ ದೃಢೀಕರಿಸಿ ಹಣ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಚರ್ಚೆಗೆ ಕೊನೆ ಹಾಡಿದರು.
ಧಿಕ್ಕಾರ... ಸಭಾತ್ಯಾಗ...
ಬೆಳಿಗ್ಗೆ ಸಭೆ ಆರಂಭವಾಗುತ್ತಿದ್ದಂತೆ ಕೃಷ್ಣೇಗೌಡ ಅವರು ಶಿವಮೊಗ್ಗ ತಾಲೂಕಿನ ಬಿಸಿಎಂ ಹಾಸ್ಟೆಲ್‌ಗಳಿಗೆ ಆಹಾರ ಸರಬರಾಜು ಮಾಡಬೇಕಿದ್ದ ಟೆಂಡರ್‌ದಾರರು ನಿಲ್ಲಿಸಿದ್ದರಿಂದ ಪಕ್ಕದ ತಾಲೂಕಿನ ಟೆಂಡರ್‌ದಾರರಿಂದ ಸರಬರಾಜು ಮಾಡಿದ್ದನ್ನು ಆಕ್ಷೇಪಿಸಿದರು. ಬೇರೆಯವರಿಗೆ ಕೊಡಬೇಕಿತ್ತು ಎಂದರು.
 ನಿಯಮದಂತೆ ಇದು ಸಾಧ್ಯವಿಲ್ಲ ಎಂದು ಸಿಇಓ ಹೇಳಿದರು. ಈ ಕುರಿತ ಸುತ್ತೋಲೆ ಕೊಡಿ ಎಂದು ಕೇಳಿದಾಗ, ಸುತ್ತೋಲೆ ಇಲ್ಲ. ಪಾರದರ್ಶಕ ಕಾಯ್ದೆಯಲ್ಲಿ ಈ ರೀತಿ ಇದೆ ಎಂದರು. ಇದಕ್ಕೆ ಸಿಟ್ಟುಗೊಂಡ ಕೃಷ್ಣೇಗೌಡ, ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ, ಅಧ್ಯಕ್ಷರಿಗೆ ಧಿಕ್ಕಾರ ಎಂದು ಹೇಳಿ ಸಭೆಯಿಂದ ಹೊರನಡೆದರು. ಅಧ್ಯಕ್ಷರು ಸ್ವಲ್ಪ ಕಾಲ ಸಭೆ ಮುಂದೂಡಿ ಅವರ ಮನಮೊಲಿಸಿ ಕರೆತಂದರು. ಅಷ್ಟೊತ್ತಿಗಾಗಲೇ ಒಂದು ಗಂಟೆಗೂ ಹೆಚ್ಚು ಕಾಲ ಕಳೆದುಹೊಗಿತ್ತು.
 ಈ ಸಂದರ್ಭದಲ್ಲಿ ಸುಮಂಗಲ ಅವರು ಅಧ್ಯಕ್ಷರು ಸಭೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ಅದಕ್ಕೆ ಸರಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸದಸ್ಯರು ಇತ್ಯರ್ಥವಾಗಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ವೃಥಾ ಚರ್ಚೆ ನಡೆಸಿದರು. ಮೂರ್ನಾಲ್ಕು ಜನ ಒಟ್ಟಿಗೇ ನಿಂತು ಮಾತನಾಡಿದರು. ಪರಸ್ಪರ ಅಸಂಸದೀಯ ಪದಗಳನ್ನು ಬಳಸಿದರು. ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಅವರು ಬೆಲಲ್ಬಾರಿಸುವುದನ್ನು ಬಿಟ್ಟರೆ ಸಭೆ ನಿಯಂತ್ರಣಕ್ಕೆ ಇತರೆ ಪ್ರಯತ್ನಗಳನ್ನು ಮಾಡದಿದ್ದುದು ಕಂಡುಬಂತು.
ಸಭೆಯ ಹೈಲೈಟ್ಸ್....
 ಶಿವಮೊಗ್ಗಕ್ಕೆ ಜಿಲ್ಲಾ ಆಸ್ಪತ್ರೆ ಜತೆಗೆ ಸರ್ಕಾರಿ ಹೆರಿಗೆ ಆಸ್ಪತ್ರೆ ಬೇಕೆಂದು ಕಲಗೋಡು ರತ್ನಾಕರ್ ಆಗ್ರಹ. ಡೆಂಘೀ ಕಾಯಿಲೆ ಹರಡುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ಲೇಟ್‌ಲೆಡ್ಸ್ ಹೊಂದಿದ ರಕ್ತ ಒದಗಿಸುವ ವ್ಯವಸ್ಥೆ ಇಲ್ಲವೆಂದು ವಿಷಯ ಮುಂದುವರಿಸಿದ ಸದಸ್ಯ ಅಶೋಕ್ ನಾಯ್ಕ್.
 ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ 29ನೇ ಸ್ಥಾನ ಗಳಿಸಿರುವ ಬಗ್ಗೆ ತೀವ್ರ ಚರ್ಚೆ. ಶಿಕ್ಷಕರ ಕೊರತೆ ಮುಂದೊಡ್ಡಿದ ಡಿಡಿಪಿಐ. ಮುಂದಿನ ವರ್ಷ ಫಲಿತಾಂಶ ಹೆಚ್ಚಿಸಲು ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್, ಶಿಕ್ಷಕರಿಗೆ ತರಬೇತಿ ಇತ್ಯಾದಿ ಕ್ರಮ ಕೈಗೊಳ್ಳುವುದಾಗಿ ಸಿಇಓ ಭರವಸೆ.
 ಅಂಗನವಾಡಿಯ ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಸದಸ್ಯರಾದ ಕುಮಾರ್, ಕೃಷ್ಣೇಗೌಡ, ಲಲಿತಾ ನಾರಾಯಣ್, ರೇಣುಕಮ್ಮ, ಜ್ಯೋತಿ ಚಂದ್ರಮೌಳಿ ಮತ್ತಿತರರು. ಗ್ರಾಮ ಪಂಚಾಯ್ತಿ ಸದಸ್ಯರು ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರೆ ಇನ್ನೆರಡು ದಿನಗಳಲ್ಲಿ ಅವರನ್ನು ವಜಾ ಮಾಡಲು ಕ್ರಮ ಕೈಗೊಳ್ಳುವುದಾಗಿ ಸಿಇಓ ಭರವಸೆ.
 257 ಲಕ್ಷ ರು.ಅಭಿವೃದ್ಧಿ ಅನುದಾನದಲ್ಲಿ 86 ಲಕ್ಷ ರು. ಕೆಲವೇ ದಿನಗಳಲ್ಲಿ ಖರ್ಚಾಗಿದ್ದು ಹೇಗೆ ಎಂದು ಕಲಗೋಡು ರತ್ನಾಕರ್ಪ್ರ್‌ಶ್ನೆ. ಮಾರ್ಚ್ ತಿಂಗಳ ಮೊದಲ ವಾರ ಬಿಡುಗಡೆಯಾಗಿದ್ದು, ಆರ್ಥಿಕ ವರ್ಷದಲ್ಲಿ ಬಳಸಿಕೊಳ್ಳಲೇಬೇಕಿತ್ತು ಎಂದು ಅಧಿಕಾರಿಗಳ ಸಮಾಜಾಯಿಷಿ. ಮಾರ್ಚ್ ತಿಂಗಳಲ್ಲಿ ಅನುದಾನ ಬಿಡುಗಡೆಯಾದರೆ ಸಿಬ್ಬಂದಿ- ಎಂಜಿನಿಯರ್ ಕೊರತೆ ಇತ್ಯಾದಿ ಕೊರತೆಯ ವಾದ ಮುಂದಿಟ್ಟ ಅಧಿಕಾರಿ.
 ತೀರ್ಥಹಳ್ಳಿ ತಾ. ಜಡ್ಡುಗದ್ದೆಯಲ್ಲಿ ಸಣ್ಣ ನೀರಾವರಿ ಇಲಾಖೆ ನಿರ್ವಹಿಸುತ್ತಿರುವ ಪಿಕಪ್ ಕಾಮಗಾರಿ ಕಳಪೆ ಎಂದು ಸದಸ್ಯ ಯಲ್ಲಪ್ಪ ಆರೋಪ. ಮೂರನೇ ವ್ಯಕ್ತಿಯಿಂದ ಪರಿಶೀಲನೆಗೆ ಸಭೆ ಸೂಚನೆ.
 ಗೋರಖಖ್ಸಿಂಗ್ವ್‌ರದಿ ಜಾರಿಗೆ ಕ್ರಮ ಕೈಗೊಳ್ಳುವಂತೆ ಸದಸ್ಯ ಗುರುಕುಮಾರ ಪಾಟೀಲ್ ಒತ್ತಾಯ.
 ಮಲೆನಾಡು ಭಾಗದಲ್ಲಿ ಹಳ್ಳಕೊಳ್ಳಗಳು ಹೆಚ್ಚಾಗಿರುವುದರಿಂದ ಶಾಲಾಮಕ್ಕಳಿಗೆ, ನಾಗರೀಕರಿಗೆ ಅನುಕೂಲವಾಗುವಂತೆ ಕಾಲುಸೇತುವೆ ನಿರ್ಮಿಸುವಂತೆ ಕಲಗೋಡು ರತ್ನಾಕರ್ ಒತ್ತಾಯ. ಅದರಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧ್ಯಕ್ಷರ ಸೂಚನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.