ಫಸ್ಟ್ ಸ್ಟೆಪ್ ಡ್ಯಾನ್ಸ್ ನಿಂತಿಲ್ಲ: ಸಿಂಧು
ಶಿವಮೊಗ್ಗ: ಫಸ್ಟ್ ಸ್ಟೆಪ್ ಡ್ಯಾನ್ಸ್ ಸಂಸ್ಥೆ ಸ್ಥಗಿತಗೊಳಿಸಿಲ್ಲ, ಇದುವರೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಕಲಾರಂಗದಲ್ಲಿ ಸಕ್ರಿಯವಾಗಿದೆ. ಯಾವುದೇ ಕಾರಣಕ್ಕೂ ಸಂಸ್ಥೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸಂಸ್ಥೆಯ ಸಿಂಧು ಕೆ. ತಿಳಿಸಿದ್ದಾರೆ.
ನಮ್ಮ ಸಂಸ್ಥೆಯ ಬೆಳವಣಿಗೆ ಸಹಿಸದ ಕೆಲ ದುಷ್ಕರ್ಮಿಗಳು ವೃತಾ ಆರೋಪಿಸಿ ಮಾನಸಿಕ ಕಿರುಕುಳವಾಗುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಫಸ್ಟ್ ಸ್ಟೆಪ್ ಡ್ಯಾನ್ಸ್ ಸ್ಥಗಿತಗೊಳಿಸಲಾಗಿದೆ ಎಂಬ ಊಹಾಪೋಹಗಳನ್ನು ಬಿತ್ತರಿಸುತ್ತಿದ್ದಾರೆ. ಈ ಸುದ್ದಿ ನಗರದಲ್ಲಿ ಹರಡಿ ನನ್ನ ಸಂಸ್ಥೆಯ ವಿವಿಧ ಶಾಖೆಗಳಲ್ಲಿ ತರಬೇತಿ ಪಡೆಯುತ್ತಿರುವ ನೃತ್ಯ ಕಲಾ ವಿದ್ಯಾರ್ಥಿಗಳು, ಪೋಷಕರು ಫೋನಾಯಿಸಿ ವಿಚಾರಿಸುತ್ತಿದ್ದಾರೆ. ಹೀಗಾಗಿ ಸುಳ್ಳುಸುದ್ದಿ ಬಿತ್ತರಿಸುತ್ತಿರುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಹಿತಿ ದೂರು ನೀಡುವುದಾಗಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಸ್ತೆ ಅಪಘಾತ; ಬೈಕ್ ಸವಾರ ಸಾವು
ಶಿವಮೊಗ್ಗ: ಟಾಟಾ ಏಸ್ ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೊಳೆಹೊನ್ನೂರು ಬಳಿ ಭಾನುವಾರ ನಡೆದಿದೆ. ಮಲ್ಲೇಶ್ (26) ಮೃತಪಟ್ಟವರು.
ಮೂಲತಃ ಅಗರದಹಳ್ಳಿಯವರಾದ ಇವರು ಕೈಮರದಿಂದ ಹೊಳೆಹೊನ್ನೂರಿಗೆ ಬೈಕ್‌ನಲ್ಲಿ ಬರುತ್ತಿರುವಾಗ ಹಿಂದಿನಿಂದ ಬಂದ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಮಲ್ಲೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಾಟಾ ಏಸ್ ಚಾಲಕ ನಾಪತ್ತೆಯಾಗಿದ್ದು, ಪ್ರಕರಣ ಹೊಳೆಹೊನ್ನೂರು ಠಾಣೆಯಲ್ಲಿ ದಾಖಲಾಗಿದೆ.
ಆನ್‌ಲೈನ್ ಮೂಲಕ ಸಕಾಲ ಸೇವೆ
ಶಿವಮೊಗ್ಗ: ಸರ್ಕಾರ ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮಗಳಡಿ ನೀಡುತ್ತಿರುವ ಸೇವೆಯನ್ನು ಆನ್‌ಲೈನ್ ಮೂಲಕ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸಕಾಲದ ಮನವಿಗಳನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅನುಕೂಲಕ್ಕಾಗಿ ಕಂಪ್ಯೂಟರ್ ಸ್ಕ್ಯಾನರ್, ಪ್ರಿಂಟರ್, ವೆಬ್‌ಕ್ಯಾಮ್ ಹಾಗೂ ಇಂಟರ್‌ನೆಟ್ ವ್ಯವಸ್ಥೆ ಹೊಂದಿರುವ ಸೈಬರ್ ಕೆಫೆ ಅಥವಾ ಫೋಟೋ ಸ್ಟುಡಿಯೋ ಮುಂತಾದವರಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ಅರ್ಜಿ ನಮೂನೆ ಹಾಗೂ ವಿವರಗಳಿಗಾಗಿ ಸಕಾಲ ಸಹಾಯವಾಣಿ ಕೇಂದ್ರ, ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾದಿಕಾರಿ ವಿಫುಲ್ ಬನ್ಸಲ್ ತಿಳಿಸಿದ್ದಾರೆ.
ಸೀಳುತುಟಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರ
ಶಿವಮೊಗ್ಗ: ಆಪರೇಷನ್ ಸ್ಮೈಲ್ ಸಂಸ್ಥೆ ತನ್ನ 11ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ಆಗಸ್ಟ್ ಮಾಹೆಯ ಮೊದಲ ವಾರದಲ್ಲಿ ಮಣಿಪಾಲ್‌ನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸೀಳುತುಟಿ ಮತ್ತು ರಸನೇಂದ್ರಿಯ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಿದೆ. ಈ ಚಿಕಿತ್ಸಾ ಶಿಬಿರದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಪರಿಣಿತ ತಜ್ಞರು ಭಾಗವಹಿಸಿ, ಶಸ್ತ್ರಚಿಕಿತ್ಸೆ ನಡೆಸಿಕೊಡುವರು. ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರೊಂದಿಗೆ ಬರುವ ಪೋಷಕರಿಗೂ ಉಚಿತ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಸೌಲಭ್ಯ ಪಡೆಯಲಿಚ್ಚಿಸುವವರು ನೋಂದಣಿಗಾಗಿ ದೂ-0820-2922209ನ್ನು ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಣ್ಣರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾಗರದ ಶಿಶು ಅಭಿವೃದ್ಧಿ ಯೋಜನಾ ಪ್ರದೇಶದ ವ್ಯಾಪ್ತಿಯ ವಿವಿಧ ಗ್ರಾಮಗಳ ಅಂಗನವಾಡಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹೆರಬೆಟ್ಟು, ಲಕ್ಕವಳ್ಳಿ ಮತ್ತು ಆನಂದಪುರ-2 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದೆಗೆ, ಕಾನ್ಲೆಪುರ ಎಸ್.ಸಿ. ಕಾಲೋನಿ ಮತ್ತು ಕಾನ್‌ತೋಟ ಮಿನಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದೆಗೆ ಹಾಗೂ ಕಾಳಮಂಜಿ ಮತ್ತು ಹಿರಿತೋಟ ಕೇಂದ್ರಗಳ ಸಹಾಯಕಿಯರ ಹುದ್ದೆಗೆ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸಲಿಚ್ಚಿಸುವ ಸ್ಥಳೀಯ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಾಗರದ ಸೊರಬ ರಸ್ತೆಯಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜುಲೈ 24ರೊಳಗಾಗಿ ಸಲ್ಲಿಸಬೇಕು. ಮಾಹಿತಿಗಾಗಿ ಇಲಾಖಾ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

