ಶಿವಮೊಗ್ಗ

ರಿಜಿಸ್ಟ್ರಾರ್ ಬದಲಾವಣೆ ಮಾಡಲು ಆಗ್ರಹ

Published On :

ಕ.ಪ್ರ.ವಾರ್ತೆ   ಶಿವಮೊಗ್ಗ   ಜೂ.25
ಸರ್ವಾಧಿಕಾರಿ ಧೋರಣೆ ಹೊಂದಿರುವ ನಗರದ ಡಿವಿಎಸ್ ಸಂಸ್ಥೆಯ ರಿಜಿಸ್ಟಾರ್ ಕೃಷ್ಣಮೂರ್ತಿ ಅವರನ್ನು ಕೂಡಲೇ ಬದಲಾವಣೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಎನ್. ರಮೇಶ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು, ಡಿವಿಎಸ್ ಸಾರ್ವಜನಿಕ ಸಂಸ್ಥೆಗೆ ಸರ್ಕಾರದಿಂದ ಅನುದಾನ ಬರುತ್ತಿದ್ದು, ಎಲ್ಲಾ ವರ್ಗದ ಮಕ್ಕಳಿಗೆ ಶಿಕ್ಷಣ ನೀಡಬೇಕಾದ ಸಂಸ್ಥೆ ಇದೀಗ ಕೆಲವು ಸರ್ವಾಧಿಕಾರಿಗಳ ದಬ್ಬಾಳಿಕೆಯಿಂದ ಅಳಿವಿನ ಅಂಚಿಗೆ ಬಂದಿದೆ ಎಂದು ದೂರಿದರು.
ಲೆಕ್ಕ ಸಂಸ್ಥೆಗೆ ನೀಡಿಲ್ಲ: ಕೃಷ್ಣಮೂರ್ತಿ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದು, ಈ ಅವಧಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಇದರ ಬಗ್ಗೆ ಶೀಘ್ರವಾಗಿ ತನಿಖೆಯಾಗಬೇಕಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ 1.85 ಕೋಟಿ ರುಪಾಯಿ ಹಣ ಸಂಗ್ರಹವಾಗಿದ್ದು, ಇದರ ಲೆಕ್ಕ ಸಂಸ್ಥೆಗೆ ನೀಡಿಲ್ಲ. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಕಿರುಕುಳ ನೀಡುತ್ತಿದ್ದು, 12 ತಿಂಗಳ ಸಂಬಳಕ್ಕೆ ಸಹಿ ಹಾಕಿ 10 ತಿಂಗಳ ಸಂಬಳ ಮಾತ್ರ ನೀಡಿದ್ದಾರೆ ಎಂದು ಆಪಾದಿಸಿದರು.
ಅಜೀವ ಸದಸ್ಯತ್ವ: ಸಂಸ್ಕೃತ ಉಪನ್ಯಾಸಕರಾಗಿದ್ದ ಇವರು ತಮ್ಮ ಕಾಲೇಜಿನಲ್ಲಿ ಅಲ್ಲದೆ ಬೇರೆ ಕಾಲೇಜುಗಳಲ್ಲಿಯೂ ಪಾಠ ಮಾಡುತ್ತಿದ್ದಾರೆ. ಸಂಸ್ಥೆಯ ಕೆಲವು ಹಿರಿಯ ಹಾಗೂ ಅಜೀವ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡುವ ಮೂಲಕ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಅಭಯ್ ಆರ್. ರಾಮಚಂದ್ರ ಎಂಬ ವಿದ್ಯಾರ್ಥಿಗೆ ದ್ವಿತೀಯ ಪಿಯುಸಿಗೆ ಪ್ರವೇಶ ನೀಡುವ ಸಂಬಂಧ ಇವರು ನನಗೆ ಮತ್ತು ವಿದ್ಯಾರ್ಥಿಯ ಪೋಷಕರಿಗೆ ಅವಮಾನ ಮಾಡಿದ್ದಾರೆ.
ರಾಜಕೀಯ ದ್ವೇಷ: ಅಭಯ್ ಕಳೆದ ವರ್ಷ ಮೂಡಬಿದರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿದ್ದರು. ಅನಾರೋಗ್ಯದ ಕಾರಣ ಶಿವಮೊಗ್ಗದ ಕಾಲೇಜಿನಲ್ಲಿ ದಾಖಲಾಗಲು ಬಯಸಿದ್ದರು. ಈ ಬಗ್ಗೆ ಅಭಯ್ಗೆ ಪ್ರವೇಶ ನೀಡುವಂತೆ ವಿಧಾನಸಭೆ ಸಭಾಪತಿ ಕಾಗೋಡು ತಿಮ್ಮಪ್ಪ ಕಾಲೇಜು ಪ್ರಾಂಶುಪಾಲರಿಗೆ ಶಿಫಾರಸ್ಸು ಮಾಡಿದ್ದು, ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರವೇಶ ತಿರಸ್ಕರಿಸಬಾರದು ಎಂದು ಪತ್ರ ನೀಡಿದ್ದರು.
ಆದರೆ, ಕೃಷ್ಣಮೂರ್ತಿ ಈ ಎಲ್ಲಾ ಆದೇಶಗಳನ್ನು ತಿರಸ್ಕರಿಸಿ ಪ್ರವೇಶ ನೀಡುವುದಿಲ್ಲ ಎಂದಿದ್ದರು. ಕೊನೆಗೆ ಮಾತುಕತೆಯ ಮೂಲಕ ಪ್ರವೇಶ ಕೊಟ್ಟರು. ಪ್ರಕರಣ ಸುಖಾಂತ್ಯ ಕಂಡಿದ್ದರೂ ರಾಜಕೀಯ ದ್ವೇಷದಿಂದ ಕೃಷ್ಣಮೂರ್ತಿ, ನನ್ನ ಮತ್ತು ವಿದ್ಯಾರ್ಥಿ ಪೋಷಕರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಆರೋಪಿಸಿದರು.
ಡಿವಿಎಸ್ ಸಂಸ್ಥೆ ಸರ್ಕಾರದ ಅನುದಾನ ಪಡೆಯುತ್ತಿದ್ದು, ಹೆಚ್ಚುವರಿ ತರಗತಿಗಳನ್ನು ದುಡ್ಡು ಪಡೆದು ಮಾಡುವಂತಿಲ್ಲ. ಆದರೆ, ವಿದ್ಯಾರ್ಥಿಗಳಿಂದ ಹೆಚ್ಚು ಹಣ ಪಡೆದು ಹೆಚ್ಚುವರಿ ತರಗತಿಗಳನ್ನು ನಡೆಸುತ್ತಿದ್ದಾರೆ.
ಇದು ನಿಯಮಕ್ಕೆ ವಿರುದ್ಧವಾಗಿದೆ ಎಂದರಲ್ಲದೇ, ಡಿವಿಎಸ್ ಸಂಸ್ಥೆಯಲ್ಲಿ ನಾನು ಅಜೀವ ಸದಸ್ಯನಾಗಿದ್ದು ಕೃಷ್ಣಮೂರ್ತಿ ಅವರನ್ನು ತಕ್ಷಣ ರಿಜಿಸ್ಟ್ರಾರ್ ಹುದ್ದೆಯಿಂದ ತೆಗೆದು ಹಾಕಬೇಕು ಮತ್ತು ಇವರ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ದಾದಾಪೀರ್, ವಸಂತ್ ಕುಮಾರ್, ಜಗನ್ನಾಥ್, ಪ್ರಕಾಶ್, ರಂಜಿತ್  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.