ಸೈನ್ಯ ಸೇರಲು ಯುವಕರ ಹಿಂದೇಟು: ಆತಂಕ
ಕನ್ನಡಪ್ರಭ ವಾರ್ತೆ ಸಾಗರ ಮಾ.1: ರಾಷ್ಟ್ರಾಭಿಮಾನ ಇರುವ ಪ್ರತಿಯೊಬ್ಬರೂ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುವ ಯೋಧರ ಬಗ್ಗೆ ಗೌರವ ಹೊಂದಿರಬೇಕು ಎಂದು ರಾಷ್ಟ್ರಪತಿಗಳ ಅತಿ ವಿಶಿಷ್ಟ ಸೇವಾ ಪದಕ ಪುರಸ್ಕೃತ ಏರ್ ಮಾರ್ಷಲ್ ಹರಿಕುದ್ರ ಬಾಬು ರಾಜಾರಾಮ್ ಹೇಳಿದರು.
ತಾಲೂಕು ಸರ್ಕಾರಿ ನೌಕರರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಸೈನ್ಯಕ್ಕೆ ಸೇರಲು ಯುವಜನರು ಹಿಂದೇಟು ಹಾಕುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಅಭಿಪ್ರಾಯಪಟ್ಟರು.
ದೇಶಸೇವೆ ಪುಣ್ಯದ ಕೆಲಸ: ಯುವಜನರು ಸ್ವಂತಬುದ್ದಿ, ಸ್ವತಂತ್ರ ನಿರ್ಣಯ, ಧೈರ್ಯ, ಎಲ್ಲರ ಜೊತೆ ಬೆರೆಯುವ ಮನೋಭಾವ ಬೆಳೆಸಿಕೊಂಡಾಗ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಸೈನ್ಯದಲ್ಲಿದ್ದುಕೊಂಡು ದೇಶಸೇವೆ ಮಾಡುವುದು ಪುಣ್ಯದ ಕೆಲಸ ಎಂದ ಅವರು, ರಾಷ್ಟ್ರಪತಿಗಳಿಂದ ಅತಿ ವಿಶಿಷ್ಟಸೇವಾ ಪದಕ ಪಡೆದಿದ್ದಕ್ಕಿಂತ ತವರು ನೆಲದಲ್ಲಿ ಸಿಕ್ಕಿರುವ ಸನ್ಮಾನ ನನ್ನ ಸೇವೆಯ ಸಾರ್ತಕತೆ ತಂದುಕೊಟ್ಟಿದೆ ಎಂದು ಹೇಳಿದರು.
ಸನ್ಮಾನಿತರ ಕುರಿತು ಮಾತನಾಡಿದ ಸಾಹಿತಿ ಡಾ.ನಾ. ಡಿಸೋಜ, ಒಂದು ಊರು ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ, ನಾವು ಹುಟ್ಟಿದ ಊರಿಗೆ ಏನು ಕೊಟ್ಟಿದ್ದೇವೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕು. ಸಮಾಜವಾದಿ ಹೋರಾಟಗಾರರಾದ ಬಾಬಣ್ಣ ಕಡುಬಡತನದಲ್ಲಿಯೆ ಜೀವನ ನಡೆಸುತ್ತಿದ್ದರೂ, ತಮ್ಮ ಮಗನನ್ನು ಭಾರತೀಯ ವಾಯುಸೇನೆಗೆ ಕೊಡುಗೆಯಾಗಿ ನೀಡುವ ಮೂಲಕ ವಿಶೇಷತೆ ಮರೆದಿದ್ದಾರೆ. ಹರಿಕುದ್ರ ಬಾಬು ರಾಜರಾಮ್ ಅವರನ್ನು ಯುವಜನಾಂಗ ಆದರ್ಶವಾಗಿ ಇರಿಸಿಕೊಳ್ಳಬೇಕು.
ಸಾಗರದಂತಹ ಪ್ರದೇಶದಲ್ಲಿ ಹುಟ್ಟಿ ಬೆಳೆದವರು ಮನಸ್ಸು ಮಾಡಿದರೆ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಿದೆ ಎನ್ನುವುದು ರಾಜರಾಮ್ ಅವರ ಜೀವನಶೈಲಿ ನಮಗೆ ತಿಳಿಸಿಕೊಡುತ್ತದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಮ.ಸ. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಪರಿಷತ್ ಸದಸ್ಯ ವಿ. ಚಂದ್ರಶೇಖರ್, ರಾಜ್ಯ ಪರಿಷತ್ ಸದಸ್ಯ ಜಿ. ಪರಮೇಶ್ವರಪ್ಪ, ಮೇಜರ್ ನಾಗರಾಜ್, ದತ್ತಾತ್ರೆಯ ಬೊಂಗಾಳೆ, ಡಿ. ಗಣಪತಪ್ಪ, ಅಣ್ಣಪ್ಪ ಶೆಟ್ಟಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

