ಶಿವಮೊಗ್ಗ

ಗೊಂದಲ ನಡುವೆಯೇ ಮತದಾನ ಅಂತ್ಯ

Published On :

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಾ.7
ಮತದಾರ ಪಟ್ಟಿಯಲ್ಲಿ ಗೊಂದಲ, ರಸ್ತೆ ತಡೆ, ಏರಿಬಂದ ಮತದಾರನಿಗೆ ಲಾಠಿ ರುಚಿ ತೋರಿಸಿದ ಪೊಲೀಸರು, ಮತಕೇಂದ್ರದ ಮುಂದೆ ಆಣೆ ಪ್ರಮಾಣ, ಮತದಾರನನ್ನು ಹುಡುಕಲು ಟ್ಯಾಬ್ಲೆಟ್ ಬಳಕೆ... ಇವೆಲ್ಲಾ ಗುರುವಾರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಹೈಲೈಟ್ಸ್...
ಶಿವಮೊಗ್ಗ ನಗರಸಭೆಯ 35 ವಾರ್ಡ್‌ಗಳಿಗೆ ಗುರುವಾರ ನಡೆದ ಮತದಾನದ ವೇಳೆ ಮತದಾರರ ಪಟ್ಟಿಯಲ್ಲಿ ನೂರಾರು ಸಂಖ್ಯೆಯಲ್ಲಿ ಹೆಸರು ನಾಪತ್ತೆಯಾಗಿದ್ದು ಸಾಕಷ್ಟು ಗೊಂದಲಕ್ಕೆ ಕಾರಣವಾಯಿತು. ಕೆಲವು ಬೂತ್ ಮುಂಭಾಗ ಮತದಾರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ತ್ವೇಷಮಯ ವಾತಾವರಣಕ್ಕೆ ಎಡೆಮಾಡಿಕೊಟ್ಟಿತು.
ಗೊಂದಲದ ಗೂಡು: ಮತದಾನ ಶಾಂತಿಯುತವಾಗಿ ನಡೆಯಿತು. ಆದರೆ, ಮತದಾನ ನಡೆದ ಇಡೀ ಅವಧಿಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳು, ಹಲವು ಮತದಾರರು ಗೊಂದಲದಲ್ಲೇ ಮುಳುಗುವಂತಾಯಿತು. ನಗರದ ವಿದ್ಯಾನಗರ, ಸೀಗೆಹಟ್ಟಿ, ಎನ್‌ಟಿ ರಸ್ತೆ, ಟ್ಯಾಂಕ್ ಮೊಹಲ್ಲಾ ಸೇರಿದಂತೆ ಎಲ್ಲಾ ಬೂತ್‌ನಲ್ಲೂ ಒಂದೇ ಸಮಸ್ಯೆ, ಅದು ಮತದಾರ ಪಟ್ಟಿಯ ಗೊಂದಲ.
1. ವಾರ್ಡ್ 5ರ ಕಾಶೀಪುರ ಬೂತ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಮತದಾರರ ಹೆಸರು ಕೈಬಿಡಲಾಗಿದೆ ಎಂದು ಆರೋಪಿಸಿ ಮತದಾರರು ಮತಗಟ್ಟೆ ಸಮೀಪ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬೆಳಿಗ್ಗೆ ನಡೆಯಿತು. ವಿಷಯ ತಿಳಿಯುತ್ತಿದ್ದಂತೆ ಚುನಾವಣಾ ಅಧಿಕಾರಿಗಳು, ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿ ಸಮಾಧಾನ ಪಡಿಸಿದರು.
2. ಗಾಂಧಿನಗರ ವಾರ್ಡ್ ಮತಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿದ್ದು ಒಂದೆಡೆಯಾದರೆ, ನೂರಾರು ಮತದಾರರ ಹೆಸರನ್ನು ಪಕ್ಕದ ವಾರ್ಡ್‌ನ ಬೂತ್‌ಗೆ ಸೇರ್ಪಡೆ ಮಾಡಲಾಗಿತ್ತು. ಮತದಾನ ಮಾಡಲು ಆಗಮಿಸಿದ ವೇಳೆ ಮತದಾರರಿಗೆ ಈ ವಿಷಯ ಗೊತ್ತಾಗಿ, ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಿಡಿಮಿಡಿಗೊಂಡರು. ಇದೇ ಕತೆ ಇನ್ನೂ ಅನೇಕ ವಾರ್ಡ್‌ಗಳಲ್ಲಿ ಕಂಡುಬಂತು.
3. ಮತದಾರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ, ಇದಕ್ಕೆ ರಾಜಕೀಯ ಮುಖಂಡರೇ ಕಾರಣವೆಂದು ಪ್ರತಿಭಟಿಸಿ ಪದೇ ಪದೇ ನಾಗರಿಕರು ಮತದಾನ ಕೇಂದ್ರಕ್ಕೆ ನುಗ್ಗಲು ಪ್ರಯತ್ನಿಸಿದ ಪರಿಣಾಮ ಇಲ್ಲಿನ ಪರಿಸ್ಥಿತಿ ಅನೇಕ ಬಾರಿ ಕೈ ಮೀರುವ ಹಂತಕ್ಕೆ ತಲುಪಿತು. 2 ಬಾರಿ ರಸ್ತೆ ತಡೆ ನಡೆಸಿದ ಸಾರ್ವಜನಿಕರು ವಾಹನ ಸಂಚಾರಕ್ಕೆ ತೀರಾ ತೊಂದರೆ ಪಡಿಸಿದರು. ಇವರ ವರ್ತನೆ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿತು. ಕೆಲವು ವ್ಯಕ್ತಿಗಳು ವಿನಾಕಾರಣ ರಗಳೆ ಮಾಡುತ್ತಿದ್ದುದನ್ನು ಗಮನಿಸಿದ ಪೊಲೀಸರು ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ಲಾಠಿ ಬೀಸಿದರು.
4. ಇದೇ ವಾರ್ಡ್‌ನಲ್ಲಿ ಮತದಾರ ಪಟ್ಟಿಯ ಗೊಂದಲ ತಾರಕಕ್ಕೆ ಹೋದ ಪರಿಣಾಮ ಸಾರ್ವಜನಿಕರನ್ನು ಸಮಾಧಾನ ಪಡಿಸಲು ಚುನಾವಣಾ ಅಧಿಕಾರಿಯವರನ್ನೇ ಸ್ಥಳಕ್ಕೆ ಕರೆಸಿದ ಪ್ರಸಂಗ ನಡೆಯಿತು. ಅಧಿಕಾರಿಯನ್ನು ಕಂಡ ಜನರು ವಾಗ್ವಾದಕ್ಕಿಳಿದರು, ವಾಚಾಮಗೋಚರ ಬೈಗುಳಕ್ಕೆ ಮುಂದಾದರು. ಸಾವಧಾನದಿಂದ ವರ್ತಿಸಿದ ಅಧಿಕಾರಿ, ಮತದಾರ ಪಟ್ಟಿಯಂತೆ ನಾವು ಚುನಾವಣೆ ನಡೆಸುತ್ತಿದ್ದೇವೆ, ನಮ್ಮಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.