ಶಿವರಾತ್ರಿ: ಕೊಡಚಾದ್ರಿಗೆ ಮುಗಿಬಿದ್ದ ಭಕ್ತರು
ಕ.ಪ್ರ ವಾರ್ತೆ, ಹೊಸನಗರ, ಮಾ.9
ಸಮೃದ್ಧ ವನ್ಯಜೀವಿ ರಾಶಿ, ಸುಂದರ ಪರಿಸರ, ಮುಗಿಲತ್ತ ಹರಿದ ಗಿರಿಶಿಖರ ಜೊತೆಗೊಂದಿಷ್ಟು ಧಾರ್ಮಿಕ ಐತಿಹ್ಯ ಹೊಂದಿರುವ ಕೊಡಚಾದ್ರಿ ಗಿರಿ ಪ್ರಸಿದ್ಧಿ ಪಡೆದ ಪ್ರವಾಸಿ ಕ್ಷೇತ್ರಗಳಲ್ಲೊಂದು. ಶಿವರಾತ್ರಿ ಅಂಗವಾಗಿ ಗಿರಿಯತ್ತ ಹೆಚ್ಚಿನ ಜನ ಧಾವಿಸುತ್ತಿದ್ದಾರೆ.
ಇಂದು ಮಹಾಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಕೊಡಚಾದ್ರಿಯತ್ತ ಭಕ್ತರು ಕಂ ಪ್ರವಾಸಿಗರ ದೃಷ್ಟಿ ನೆಟ್ಟಿದೆ. ರಜಾದಿನಗಳಲ್ಲಿ ಗಿರಿ, ಗಿರಿಯಲ್ಲಿನ ಹುಲಿಸಿದ್ದೇಶ್ವರ, ಪರ್ವತೇಶ್ವರ ಮತ್ತು ಸರ್ವಜ್ಞ ಪೀಠದ ಪರಿಸರ ಜನಜಂಗುಳಿಯಿಂದ ತುಂಬಿರುತ್ತದೆ. ಅದರಲ್ಲು ಶಿವರಾತ್ರಿ, ಮುನ್ನಾದಿನ ಎರಡನೆ ಶನಿವಾರ ರಜೆಯ ಕಾರಣ ಗಿರಿಹತ್ತುವವರ ಸಂಖ್ಯೆ ದುಪ್ಪಟ್ಟಾಗಿದೆ.
ಕೇರಳ, ತಮಿಳುನಾಡು ಮತ್ತು ರಾಜ್ಯದ ಮೂಲೆಮೂಲೆಯಿಂದ ಭಕ್ತರು ಹರಿದು ಬರುತ್ತಿದ್ದಾರೆ. ಗಿರಿ ಮೇಲಿನ ಸರ್ಕಾರಿ ಪ್ರವಾಸಿ ಮಂದಿರ ಹೊರತು ಪಡಿಸಿ ಉಳಿಯುಲು ಬೇರೆ ನೆಲೆಯಿಲ್ಲ. ಹಾಗಾಗಿ ಗಿರಿತಪ್ಪಲಿನ ಹತ್ತಾರು ಹೋಂಸ್ಟ್ರೇ, ರೆಸಾರ್ಟ್ಗಳು ತುಂಬಿತುಳುಕುತ್ತಿವೆ.
ಧಾರ್ಮಿಕ ಆಚರಣೆ: ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ಪುನಸ್ಕಾರ, ಭಜನೆ ವಿವಿಧ ಧಾರ್ಮಿಕ ಆಚರಣೆಗಳು ನಡೆಯುತ್ತಿದೆ. ಹುಲಿಸಿದ್ದೇಶ್ವರ ದೇಗುಲದಿಂದ ಪರ್ವತೇಶ್ವರ ಗುಡಿಯಲ್ಲಿ ಮಂಗಳಾರತಿ ಸಲ್ಲಿಸಿ ಗಿರಿಯ ತುದಿ ಸರ್ವಜ್ಞ ಪೀಠದವರೆಗೆ ಪಲ್ಲಕ್ಕಿ ಉತ್ಸವ ಸಂಪನ್ನಗೊಳ್ಳುತ್ತದೆ ಅಲ್ಲದೆ ಜಾಗರಣೆ ಕೂಡ ಸಂಪನ್ನಗೊಳ್ಳಲಿದೆ.
ಹೊಸ ಸಮಿತಿ: ಶಿವರಾಮಶೆಟ್ಟಿ ಅಧ್ಯಕ್ಷತೆಯಲ್ಲಿ ನೂತನ ವ್ಯವಸ್ಥಾಪನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಶಿವರಾತ್ರಿ ಆಚರಣೆಗೆ ವಿಶೇಷ ಸಿದ್ಧತೆ ನಡೆಸಿದೆ. ಆಗಮಿಸುವ ಭಕ್ತರಿಗೆ ಉಚಿತ ಉಪಾಹಾರ ಮತ್ತು ಮಜ್ಜಿಗೆ ಸೇವೆ ನೀಡಲು ತೀರ್ಮಾನಿಸಿದೆ. ಮಾತ್ರವಲ್ಲ ಗಿರಿಗೆ ಬರುವ ಭಕ್ತಾದಿಗಳು ಮತ್ತು ಪ್ರವಾಸಿಗರಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ಮಾರ್ಗ ತೊಂದರೆ: ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೊಲ್ಲೂರು ಘಾಟ್ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಹಾಲ್ಕಲ್-ಅಂಪಾರು-ಸಿದ್ದಾಪುರ-ಹುಲಿಕಲ್ ಘಾಟ್ ಮಾರ್ಗದಲ್ಲಿ ಸುತ್ತು ಹಾಕಿ ಬರಬೇಕಾದ ಅನಿವಾರ್ಯತೆ ಇದೆ. ಇದು ದೂರದ ಪ್ರಯಾಣಿಕರಿಗೆ ಮತ್ತು ಕೊಲ್ಲೂರಿಗೆ ಬಂದು ಮೂಲ ಮೂಕಾಂಬಿಕೆಯ ನೆಲೆವೀಡು ಕೊಡಚಾದ್ರಿಗೆ ಬಂದು ಹೋಗಬೇಕೆಂಬ ಪ್ರತೀತಿ ಇರುವ ಹಿನ್ನೆಲೆಯಲ್ಲಿ ಆ ಭಕ್ತರು ಪರದಾಡುವಂತಾಗಿದೆ. ಸಂಪರ್ಕ ತೊಂದರೆ ಮಧ್ಯೆಯೂ ಕೊಡಚಾದ್ರಿಗೆ ಬರುವ ಪ್ರವಾಸಿ, ಭಕ್ತರಿಗೆ ಕೊರತೆ ಕಂಡುಬರುತ್ತಿಲ್ಲ.
ಮೋಜು ಮಸ್ತಿ: ನಿಸರ್ಗ ಶ್ರೀಮಂತಿಗೆ ಸವಿಯುವ ಹೆಸರಿನಲ್ಲಿ ಬರುವ ಪ್ರವಾಸಿಗರ ಮೋಜು ಮಸ್ತಿಯ ಕೇಂದ್ರವಾಗುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿದೆ. ಗಿರಿಯ ಪಾವಿತ್ರ ಹಾಳಾಗದಂತೆ, ಪರಿಸರವನ್ನು ಪ್ಲಾಸ್ಕಿಕ್ ಇನ್ನಿತರ ತ್ಯಾಜ್ಯದಿಂದ ಮುಕ್ತ ಮಾಡುವ ನಿಟ್ಟಿನಲ್ಲಿ ಅನೇಕ ಕ್ರಮ ಕೈಗೊಂಡಿದ್ದರೂ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂಬುದು ಗಿರಿಪ್ರೇಮಿಗಳ ನೋವು.
-ರವಿ ಬಿದನೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

