ಭದ್ರಾವತಿಯಲ್ಲಿ ಬದಲಾವಣೆ ಗಾಳಿ: ಅಪ್ಪಾಜಿ
ಕ.ಪ್ರ ವಾರ್ತೆ, ಭದ್ರಾವತಿ, ಮಾ.12
ಕಳೆದ ಹತ್ತು ವರ್ಷಗಳಿಂದ ನಗರದಲ್ಲಿ ಅಭಿವೃದ್ಧಿಯನ್ನು ಕಾಣದ ಜನತೆ ಬದಲಾವಣೆಯನ್ನು ಬಯಸಿ ಈ ಬಾರಿ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಚ್ಚಳ ಬಹುಮತ ಬರುವಂತೆ ಆಯ್ಕೆ ಮಾಡಿದ್ದಾರೆಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ನುಡಿದರು.
ಅವರು ಪಟ್ಟಣದ ಸುನಂದಾ ಹಾಲ್ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಜ್ಞಾವಂತ ಮತದಾರರು ಹಣ ಮತ್ತು ಅಧಿಕಾರದಿಂದ ಮತಗಳನ್ನು ಕೊಳ್ಳಲಾಗದು ಎಂದು ನಿರೂಪಿಸಿದ್ದಾರೆಂದು ತಿಳಿಸಿದರು.
ನಿರೀಕ್ಷೆಗೂ ಮೀರಿ ಜನತೆ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ಅಚ್ಚರಿಯ ಸಂಗತಿಯಾದರೂ ಅಧಿಕಾರವಿದ್ದರೂ ಏನೂ ಮಾಡದವರನ್ನು ಹಾಗೂ ಸರ್ಕಾರದ ಸೌಲಭ್ಯಗಳನ್ನು ಹಾಗೂ ಕಾರ್ಯಕ್ರಮಗಳನ್ನೂ ಜನತೆಗೆ ತಲುಪದಂತೆ ಮಾಡಿರುವ ಆಳ್ವಿಕೆಯನ್ನು ಮತದಾರರು ತಿರಸ್ಕರಿಸಿದ್ದಾರೆಂದರು.
ತಮ್ಮ ಪಕ್ಷದ ಪ್ರಣಾಳಿಕೆ ಸ್ಪಷ್ಟವಾಗಿದೆ. ಕಳೆದ ಹತ್ತು ವರ್ಷಗಳಿಂದ ನಗರದಲ್ಲಿ ರಸ್ತೆಗಳು ಅಭಿವೃದ್ಧಿಯಾಗಿಲ್ಲದಿರುವುದನ್ನು ಸರಿಪಡಿಸುತ್ತೇವೆ. ಮುಂದಿನ ಐದು ವರ್ಷಗಳಲ್ಲಿ ನಗರ ನೈರ್ಮಲ್ಯವನ್ನು ಕಾಪಾಡುವ ಬಗ್ಗೆ ಮತ್ತು ಭದ್ರಾವತಿಯನ್ನು ಒಂದು ಸುಂದರ ನಗರವನ್ನಾಗಿಸುವ ಕೆಲಸಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುವುದು. ಪಟ್ಟಣದ ಎಲ್ಲಾ ವಾರ್ಡ್ಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು. ಅಭಿವೃದ್ಧಿ ದೃಷ್ಟಿಯಲ್ಲಿ ಎಲ್ಲಾ 35 ವಾರ್ಡುಗಳನ್ನೂ ಸರಿಸಮಾನವಾಗಿ ಕಾಣಲಾಗುವುದು. ಕಳೆದ ಹತ್ತು ವರ್ಷಗಳಿಂದ ಶಾಪಗ್ರಸ್ತವಾಗಿದ್ದ ಭದ್ರಾವತಿಯನ್ನು ಈ ಚುನಾವಣೆಯ ಮೂಲಕ ಶಾಪಮುಕ್ತವಾಗಿಸಿದ್ದಾರೆ. ಈ ಚುನಾವಣೆಯ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ತಮ್ಮನ್ನು ಮತ್ತೊಮ್ಮೆ ಆಶೀರ್ವದಿಸಿದ ಜನತೆಗೆ ತಾವು ಕೃತಜ್ಞರಾಗಿರುವುದಾಗಿ ಅಪ್ಪಾಜಿ ತಿಳಿಸಿದರು.
ಅಳಲು ತೋಡಿಕೊಂಡ ಜನ: ಭದ್ರಾ ಕಾಲೋನಿಯಲ್ಲಿ ತಮ್ಮನ್ನು ಬೆಂಬಲಿಸಿದ ಮತದಾರರಿಗೆ ಕಾಂಗ್ರೆಸ್ ಕಾರ್ಯಕರ್ತರು ಕಿರುಕುಳ ನೀಡಿದ್ದನ್ನು ಖಂಡಿಸಿದ ಅವರು ಸಮಯಕ್ಕೆ ಸರಿಯಾಗಿ ಅಲ್ಲಿಗೆ ಹೋದ ತಮ್ಮಲ್ಲಿ ಜನತೆ ಓಡಿಬಂದು ತಮ್ಮ ಅಳಲನ್ನು ತೋಡಿಕೊಂಡರೆಂದರು.
ಜನತೆ ಬದಲಾವಣೆ ಬಯಸಿದ್ದಾರೆ. ನಿಷ್ಕ್ರಿಯ ರಾಜಕಾರಣಿಗಳನ್ನು ಹಾಗೂ ಹಣ ಮತ್ತು ಜಾತಿ ರಾಜಕೀಯ ಮಾಡುವವರನ್ನು ಧಿಕ್ಕರಿಸಿದ್ದಾರೆ. ಇದೇ ರೀತಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ ಆಶೀರ್ವದಿಸಬೇಕೆಂದು ಅವರು ವಿನಂತಿಸಿದರು.
ನಗರಸಭೆಯಲ್ಲಿ ವ್ಯಾಪಕವಾಗಿ ಹಬ್ಬಿರುವ ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗುವುದು. ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ಜನತೆಯ ಮನೆ ಬಾಗಿಲಿಗೆ ಕೊಂಡೊಯ್ಯಲಾಗುವುದು ಎಂಬ ಆಶ್ವಾಸನೆಯನ್ನು ನೀಡಿದ ಅವರು ನಗರಸಭೆ ಚುನಾವಣೆಗೆ ಕೆಲವು ಅಭ್ಯರ್ಥಿಗಳ ಆಯ್ಕೆ ಮಾಡುವಲ್ಲಿ ತಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡರಲ್ಲದೆ ಇದನ್ನು ಸರಿಪಡಿಸಲಾಗುವುದೆಂದರು.
ಸುದ್ದಿಗೋಷ್ಟಿಯಲ್ಲಿ ಹಾಜರಿದ್ದ ಜನತಾದಳ ಪಕ್ಷದ ಭದ್ರಾವತಿ ತಾಲೂಕು ಅಧ್ಯಕ್ಷ ಹಾಗೂ ಮೂರನೇ ಬಾರಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಆರ್. ಕರುಣಾಮೂರ್ತಿ ಈ ಚುನಾವಣೆ ಭದ್ರಾವತಿಯಲ್ಲಿ ಜೆಡಿಎಸ್ ಪಕ್ಷದ ಜನಪ್ರಿಯತೆಯನ್ನು ಖಾತ್ರಿ ಪಡಿಸಿದೆ ಎಂದರು.
ದುರಾಡಳಿತ ಕಾರಣ: ಮತದಾರರು ಪಟ್ಟಣದ ಒಳಿತಿನ ಬಗ್ಗೆ ಚಿಂತನೆ ಮಾಡಿ ಮತ ಚಲಾಯಿಸಿರುವುದು ಈ ಚುನಾವಣೆಯ ವೈಶಿಷ್ಟ್ಯ ಜನತೆ ಹಾಲಿ ಶಾಸಕರನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಲು ಅವರು ನೀಡಿದ ದುರಾಡಳಿತವೇ ಕಾರಣ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯ ಎಸ್. ಕುಮಾರ್, ಡಿ.ಟಿ. ಶ್ರೀಧರ್, ಲೋಕೇಶ್, ಮಹಬೂಬ್ಸಾಬ್, ರಾಜಣ್ಣ, ಟಿ. ಚಂದ್ರೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

