ಶಿವಮೊಗ್ಗ

ಖಾತ್ರಿ ಅವ್ಯವಹಾರ: ಕ್ರಮಕ್ಕೆ ಆಗ್ರಹ

Published On :

ಕನ್ನಡಪ್ರಭ ವಾರ್ತೆ,  ಸೊರಬ, ಮಾ.14
ದುಡಿಯುವ ಕೈಗಳಿಗೆ ವರ್ಷಾವಧಿ ಆರ್ಥಿಕ ಸದೃಢತೆಯ ಖಾತ್ರಿ ಎಂದೆ ನಂಬಲಾದ ಎನ್‌ಆರ್‌ಇಜಿಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣ ಸುಳ್ಳಾಗಿಸಿದ್ದಾರೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ.ಮಂಜುನಾಥಗೌಡ ಆಕ್ರೋಷ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಗ್ರಾಮ ಶಾಖೆ ಹೆಗ್ಗೋಡು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸಾರ್ವಜನಿಕ ಹಿತರಕ್ಷಣಾ ಹೋರಾಟ ವೇದಿಕೆಯವರು ತಾಲ್ಲೂಕಿನ ಹೆಗ್ಗೋಡು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗೆ ಮಂಜೂರಾದ ಹಣದ ದುರ್ಬಳಕೆ ಆಗಿದೆ ಎಂದು ಖಂಡಿಸಿ ನಡೆಸಿದ ಪ್ರತಿಭಟನೆ ಸಭೆ ಉದ್ಧೇಶಿಸಿ ಮಾತನಾಡಿದರು.
ಜೆಸಿಬಿ ಬಳಕೆ: ತಾಲ್ಲೂಕಿನ ಹೆಗ್ಗೋಡು ಗ್ರಾಪಂ ವ್ಯಾಪ್ತಿಯ ಭೈರೆಕೊಪ್ಪ ಗ್ರಾಮದಲ್ಲಿ ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆರೆ ಹೂಳು ತೆಗೆಯಲು 3 ಲಕ್ಷ ಮಂಜೂರಾಗಿದ್ದು, ಸ್ಥಳೀಯ ಮಾನವ ಶಕ್ತಿಯನ್ನು ಬಳಸಿಕೊಳ್ಳದೆ ಜೆಸಿಬಿ ಮೂಲಕ ಹೂಳು ತೆಗೆಯಲಾಗಿದೆ. ಗ್ರಾಮದಲ್ಲಿ ನೂರಾರು ಬಡ ಕುಟುಂಬಗಳಿದ್ದರೂ ಅವರಿಗೆ ಕೆಲಸ ಕೊಡದೆ,  ನೆಪಕ್ಕೆ ಅವರನ್ನು ಕೆಲಸ ನಡೆಸುವ ಸ್ಥಳದಲ್ಲಿ ನಿಲ್ಲಿಸಿ ಫೋಟೋ ತೆಗೆದು ಕಾಮಗಾರಿಗೆ ಪೂರ್ಣ ಯಂತ್ರ ಬಳಸಲಾಗಿದೆ ಎಂದು ಆರೋಪಿಸಿದರು.
ಮೇಲ್ನೋಟಕ್ಕೆ ಯೋಜನೆಯಲ್ಲಿ ವಂಚನೆ ನಡೆದಿದೆ ಎಂದು ಕಂಡು ಬರುತ್ತಿದ್ದು, ಕೂಡಲೆ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ವೇದಿಕೆಯ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ ಮಾತನಾಡಿ, ಇಂತಹ ಮೋಸ, ವಂಚನೆಯ ಕೆಲಸಗಳಿಗೆ ಕಡಿವಾಣ ಹಾಕಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಕೂಡಲೆ ಈ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಗ್ರಾಪಂ ಮುಂದಾಗಬೇಕು ಎಂದು ಆಗ್ರಹಿಸಿದರು.
ತನಿಖೆಗೆ ಸೂಚನೆ: ಪ್ರತಿಭಟನಾಕಾರರು ತಾಪಂ ಕಚೇರಿಗೆ ಮುತ್ತಿಗೆ ಹಾಕಿದ್ದ ವೇಳೆ ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದ ಇಒ, ಉದ್ಯೋಗ ಖಾತ್ರಿ ಯೋಜನೆಯ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಕುರಿತು ತನಿಖೆ ನಡೆಸಲಾಗುವುದು. ಕಾಮಗಾರಿಗೆ ಹಣ ಮಂಜೂರು ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಡಿಎಸ್‌ಎಸ್ಟಿ ಜಿಲ್ಲಾ ಸಂಘಟನಾ ಸಂಚಾಲಕ ಗುರುರಾಜ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೀರಭದ್ರಗೌಡ, ಹರೀಶ್, ಹುಣಸವಳ್ಳಿ ಶಿವಣ್ಣ, ರೈತ ಸಂಘದ  ಉಮೇಶ್ ಪಾಟೀಲ್, ಹುಚ್ಚಪ್ಪ, ಈಶ್ವರಪ್ಪ, ಬಸವರಾಜಗೌಡ, ಬಲೀಂದ್ರಪ್ಪ ಕುರೇರ್, ಕಲಾವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.