ವಸತಿ ನಿಲಯ ವಿದ್ಯಾರ್ಥಿನಿಯರ ಸಮಸ್ಯೆ ಕೇಳುವರಿಲ್ಲ
ಕ.ಪ್ರ.ವಾರ್ತೆ ಭರಮಸಾಗರ ಮಾ.14
ಸರಕಾರಿ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರ ರಕ್ಷಣೆ, ನಾನಾ ಸೌಲಭ್ಯಗಳನ್ನು ಒದಗಿಸುವಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಬುಧವಾರ ತಡರಾತ್ರಿಯಲ್ಲಿ ಕಿಡಿಗೇಡಿಯೊಬ್ಬ ವಸತಿ ನಿಲಯದ ಮಹಡಿಯಲ್ಲಿ ಕಿತ್ತುಹೋಗಿರುವ ಹಿಂಬಾಗಿಲ ಮೂಲಕ ನುಗ್ಗಿ ಬಾಲಕಿಯರಿಗೆ ಭಯಹುಟ್ಟಿಸಿದ್ದಾನೆ. ಇದರಿಂದ ಹೆದರಿಕೊಂಡ ವಿದ್ಯಾರ್ಥಿನಿಯರು ಕಿರುಚುತ್ತಾ ಧಿಕ್ಕಾಪಾಲಾಗಿ ಹೊರ ಬಂದಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಕರವೇ ಕಾರ್ಯಕರ್ತರು ಹಾಸ್ಟೆಲ್ ಪ್ರವೇಶಿಸುತ್ತಿದ್ದಂತೆ ಕಿಡಿಗೇಡಿ ಹಾಸ್ಟೆಲ್ ಕಟ್ಟಡದ ಮಹಡಿ ಬಾಗಿಲ ಮೂಲಕ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಘಟನೆ ಸಂಬಂಧ ವಿದ್ಯಾರ್ಥಿನಿಯರಲ್ಲಿ ಆತಂಕ ಮನೆ ಮಾಡಿದೆ. ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಕಾರ್ಯಕರ್ತರು ದೂರಿದ್ದಾರೆ.
ಅನೈರ್ಮಲ್ಯ: ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರಿಗೆ ದಿನಚರಿ ಪ್ರಕಾರ ಊಟ ನೀಡುತ್ತಿಲ್ಲ. ಬಿಸಿ ನೀರಿನ ಸಂಪರ್ಕವನ್ನು ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಕಲ್ಪಿಸಿಲ್ಲ. ಹೊದೆಯಲು ಉತ್ತಮ ಹಾಸಿಗೆ ಮತ್ತು ರಗ್ಗುಗಳನ್ನು ಒದಗಿಸಿಲ್ಲ, ಸ್ವಚ್ಛತೆಯಿಲ್ಲದೆ ವಸತಿ ನಿಲಯ ಅನೈರ್ಮಲ್ಯದ ತಾಣವಾಗಿದೆಯ. ಸೊಳ್ಳೆಗಳ ಅವಾಸ ಸ್ಥಳವಾಗಿರುವ ಹಾಸ್ಟೆಲ್ ವಿದ್ಯಾರ್ಥಿಗಳ ಪಾಲಿಗೆ ನರಕವಾಗಿದೆ ಎಂದು ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
4 ತಿಂಗಳ ಹಿಂದೆ ಇದೇ ರೀತಿ ಯುವಕರು ಹಾಸ್ಟೆಲ್ಗೆ ನುಗ್ಗಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದಾಗಲೂ ಕೂಡ ಜನಪರ ಸಂಘಟನೆ ಪ್ರತಿಭಟನೆ ನಡೆಸಿತ್ತು. ಆಗ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಬಂದು ಒಂದು ವಾರದೊಳಗೆ ಇಲ್ಲಿಯ ಕಿಟಕಿ, ಬಾಗಿಲುಗಳನ್ನು ಭದ್ರಪಡಿಸಿ ಸೂಕ್ತ ರಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ವಸತಿ ನಿಲಯದ ವೆಚ್ಚಕ್ಕಾಗಿ, ಒಂದು ವಿದ್ಯಾರ್ಥಿಗೆ ಇಷ್ಟೆಂದು ಸರ್ಕಾರ ವ್ಯಯಿಸುತ್ತಿದ್ದರೂ ಆ ಹಣವೆಲ್ಲಾ ಸದುಪಯೋಗವಾಗದೆ ಇಲಾಖೆಯಲ್ಲಿಯೇ ಸೋರಿ ಹೋಗುತ್ತಿದೆ.
ಭದ್ರತೆ ಇಲ್ಲ: ವಿದ್ಯಾರ್ಥಿನಿಯರು ಇಲ್ಲಿ ಬಂದು ವ್ಯಾಸಂಗ ಮಾಡುತ್ತಿದ್ದು ಅವರಿಗೆ ಕನಿಷ್ಠಪಕ್ಷ ರಕ್ಷಣೆಗೆ ಬೇಕಾದ ಬಾಗಿಲು ಕಿಟಕಿಗಳ ಭದ್ರತೆಯೂ ಇಲ್ಲದೆ ಯಾರು ಬೇಕಾದರೂ ಹೇಗೆ ಬೇಕಾದರೂ ಇಲ್ಲಿ ಪ್ರವೇಶಿಸಬಹುದಾಗಬಹುದಾಗಿದೆ. ಇಲ್ಲಿಯ ವಾರ್ಡನ್ ರಾತ್ರಿ ವೇಳೆಯಲ್ಲಿ ಇರುವುದೇ ಇಲ್ಲ. ವಯಸ್ಸಾಗಿರುವ ಮಹಿಳಾ ರಾತ್ರಿ ಕಾವಲುಗಾರರಿಂದ ರಕ್ಷಣೆ ಸಾಧ್ಯವಿಲ್ಲ. ಕಾಂಪೌಂಡ್ ಪೂರ್ತಿ ಕಿತ್ತು ಹೋಗಿದೆ. ಸೋಲಾರ್ ವಾಟರ್ ಹೀಟರ್ ಕೂಡ ದುರಸ್ತಿ ಕಾಣದೆ ಮೂರುವರ್ಷವಾಗಿ ವಿದ್ಯಾರ್ಥಿನಿಯರಿಗೆ ತಣೀರೆ ಗತಿಯಾಗಿದೆ ಎಂದು ದೂರಿದರು.
ಹಾಸ್ಟೆಲ್ ಅವ್ಯವಸ್ಥೆಗಳ ವಿರುದ್ಧ ಈ ಹಿಂದೆ ಕರವೇ ಪ್ರತಿಭಟನೆ ನಡೆಸಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷಿಸಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರು.
ವಸತಿ ನಿಲಯಕ್ಕೆ ಮಹಿಳಾ ನಿಲಯ ಪಾಲಕರನ್ನು ನೇಮಕ ಮಾಡಬೇಕು, ಬಾಲಕಿಯರ ಸುರಕ್ಷತೆ ಸೇರಿದಂತೆ ಸರಕಾರದ ನಾನಾ ಸೌಲಭ್ಯಗಳನ್ನು ವಿದ್ಯಾರ್ಥಿನಿಯರಿಗೆ ತಲುಪುವ ವ್ಯವಸ್ಥೆ ಆಗಬೇಕು. ಇಲ್ಲದೆ ಹೋದರೆ ಇಲ್ಲಿನ ಎಲ್ಲಾ ಅನಾಹುತಗಳಿಗೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಕರವೇ ಹೋಬಳಿ ಘಟಕ ಅಧ್ಯಕ್ಷ ಬಿ.ಎಚ್. ಪ್ರವೀಣ್ಕುಮಾರ್, ಹರೀಶ್, ಇಂತಿಯಾಜ್, ಎಸ್.ಎಂ.ಎಲ್. ಸುಂದರ್, ಸುನಿಲ್ಕುಮಾರ್, ಕಿರಣ್, ನವೀನ್ಕುಮಾರ್, ದೇವೇಂದ್ರನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

