ಕುಲಪತಿ ನೇಮಕದಲ್ಲಿ ಅನರ್ಹತೆ 'ಪ್ರಕಾಶ'
ಕನ್ನಡಪ್ರಭ ವಾರ್ತೆ, ಬೆಂಗಳೂರು
ವಿಶ್ವ ವಿದ್ಯಾಲಯವೊಂದರ ಕುಲಪತಿ ನೇಮಕದಲ್ಲಿ ಮತ್ತೊಮ್ಮೆ ಕಾಣದ ಕೈಗಳು ಆಟವಾಡಿವೆ...
ಕುಲಪತಿ ನೇಮಕದಲ್ಲಿ ಹಣ ಹಸ್ತಾಂತರವಾಗುವ ಆರೋಪ, ರಾಜಕೀಯದಾಟ ಬಯಲುಗೊಳಿಸುವ ಚಟುವಟಿಕೆ ನಡೆಯುತ್ತಿರುವ ಸಂದರ್ಭದಲ್ಲೇ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ನೇಮಕದಲ್ಲಿ ಸರ್ಕಾರ ನಿಯಮ ಮುರಿದಿರುವುದು ಬೆಳಕಿಗೆ ಬಂದಿದೆ.
ಶಿವಮೊಗ್ಗ ಕೃಷಿ-ತೋಟಗಾರಿಕೆ ವಿವಿ ಕುಲಪತಿಯಾಗಿ ಅರ್ಹತೆ ಇಲ್ಲದ ಡಾ. ಪ್ರಕಾಶ್ ಅವರನ್ನು ನೇಮಿಸಲು ಸರ್ಕಾರ ಮಾಡಿರುವ ಶಿಫಾರಸು ರಾಜ್ಯಪಾಲರ ಮುಂದಿದೆ. ವಿವಿ ಸ್ಥಾಪನೆಯ ಅಧಿಸೂಚನೆ ಪ್ರಕಟಗೊಂಡು ಆರು ತಿಂಗಳವರೆಗೂ ಕುಲಪತಿ ನೇಮಕದ ವಿಚಾರ ನೆನೆಗುದಿಗೆ ಬಿದ್ದಿತ್ತು. ಆದರೆ, ಇದೀಗ ಸರ್ಕಾರದ ಅಂತಿಮ ದಿನಗಳಲ್ಲಿ ಆತುರಾತುರವಾಗಿ “OÛy¥Ú OæçVÚ×Ú’ ಪ್ರಭಾವಕ್ಕೆ ಮಣಿದು, ನಿಯಮಗಳನ್ನು ಉಲ್ಲಂಘಿಸಿ ಡಾ.ಪ್ರಕಾಶ್ ಅವರನ್ನು ಕುಲಪತಿ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.
ವಿವಿ ಸ್ಥಾಪನೆಗೆ ಮುಂದಾದ ಸಂದರ್ಭದಲ್ಲಿ ವಿಶೇಷ ಅಧಿಕಾರಿಯಾಗಿ ನೇಮಕವಾಗಿದ್ದ ಡಾ.ಪಿ.ಎಂ. ಸಾಲಿಮಠ ಅವರೇ ನಿಯಮದ ಪ್ರಕಾರ ಅಧಿಕೃತವಾಗಿ ಕುಲಪತಿಯಾಗಿ ನೇಮಕವಾಗಬೇಕಿತ್ತು. ಇದು ಎಲ್ಲ ವಿವಿ ಸ್ಥಾಪನೆ ಸಂದರ್ಭದಲ್ಲಿ ಪಾಲಿಸಿಕೊಂಡು ಬಂದಂತಹ ನಿಮಯ. ಇದನ್ನು ಸರ್ಕಾರ ಗಾಳಿಗೆ ತೂರಿದ್ದು, ನಿರ್ದಿಷ್ಟ ಅನುಭವವನ್ನೇ ಹೊಂದಿರದ ಡಾ. ಪ್ರಕಾಶ್ ನೇಮಕಕ್ಕೆ ಮುಂದಾಗಿದೆ.
ಏನಾಗಿತ್ತು?: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿವಿ ಆರಂಭಿಸಲು ನಿರ್ಧರಿಸಲಾಯಿತು. ಇದರ ಪ್ರಕ್ರಿಯೆ ಆರಂಭಿಸಿ, ಡಾ. ಪಿ.ಎಂ. ಸಾಲಿಮಠ ಅವರನ್ನು 2011ರ ನವೆಂಬರ್ 30ರಂದು ವಿಶೇಷ ಅಧಿಕಾರಿಯನ್ನಾಗಿ ಸರ್ಕಾರ ನೇಮಕ ಮಾಡಿತು. ಈ ವಿವಿ ವಿಧೇಯಕಕ್ಕೆ ವಿಧಾನಮಂಡಲದ ಉಭಯ ಸದನದಲ್ಲಿ ಅನುಮೋದನೆ ದೊರೆತು, ರಾಜ್ಯಪಾಲರ ಅಂಕಿತವೂ ಬಿದ್ದು 2012ರ ಸೆಪ್ಟೆಂಬರ್ 21ರಂದು ವಿಶೇಷ ರಾಜ್ಯಪತ್ರದ ಮೂಲಕ ಅಧಿಸೂಚನೆಯೂ ಪ್ರಕಟವಾಯಿತು.
2011ರ ನವೆಂಬರ್ನಿಂದಲೇ ಡಾ. ಪಿ.ಎಂ. ಸಾಲಿಮಠ ಪ್ರಾರಂಭಿಕ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಈ ವಿವಿಗೆ ಪ್ರಧಾನ ಕಚೇರಿ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನೂ ನಿರ್ವಹಿಸಿದರು. 12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಐಸಿಎಆರ್ನಿಂದ ಹಲವು ಯೋಜನೆಗಳನ್ನೂ ವಿವಿಗೆ ಪಡೆದುಕೊಳ್ಳುವಲ್ಲಿ ಯಶಕಂಡರು. ಅಲ್ಲದೆ, ಸರ್ಕಾರದ ನೆರವಿನೊಂದಿಗೆ ರಾಜ್ಯದ ರೈತರ ಸಮಸ್ಯೆಗಳನ್ನು ನಿವಾರಿಸಲು ಹಲವು ಸಂಶೋಧನಾ ಕಾರ್ಯಕ್ರಮಗಳನ್ನೂ ನಡೆಸಿದರು.
ಏನಾಗುತ್ತಿದೆ?: ವಿವಿ ಸ್ಥಾಪನೆಯ ಅಧಿಸೂಚನೆ ಪ್ರಕಟವಾದ ಮೇಲೂ ಡಾ.ಪಿ.ಎಂ. ಸಾಲಿಮಠ ವಿವಿ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಹಿಂದಿನ ಪ್ರಕ್ರಿಯೆಯಂತೆ ಅವರನ್ನೇ ಕುಲಪತಿಯನ್ನಾಗಿ ಸರ್ಕಾರ ನೇಮಿಸುತ್ತದೆ ಎಂಬ ಆಶಯವೂ ಅವರಿಗಿತ್ತು. ಆದರೆ, ಸರ್ಕಾರ ಡಾ. ಪ್ರಕಾಶ್ ಎಂಬುವವರನ್ನು ನೇಮಿಸಲು ರಾಜ್ಯಪಾಲರಿಗೆ ಇತ್ತೀಚೆಗೆ ಶಿಫಾರಸು ಮಾಡಿದೆ. ಕೃಷಿ ಸಚಿವ ಉಮೇಶ್ ಕತ್ತಿ ಡಾ. ಪಿ.ಎಂ. ಸಾಲಿಮಠ ಅವರನ್ನೇ ಕುಲಪತಿಯನ್ನಾಗಿ ನೇಮಿಸಬೇಕು ಎಂದು ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಶಿಫಾರಸು ಮಾಡಿದ್ದರೂ ನಿರ್ಲಕ್ಷಿಸಲಾಗಿದೆ.
ರಾಜ್ಯ ಸರ್ಕಾರದ ಸುತ್ತೋಲೆ ಪ್ರಕಾರ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಯಾಗಬೇಕಾದರೆ ಅಂತಹ ಪ್ರಾಧ್ಯಾಪಕರು ಕನಿಷ್ಠ 10 ವರ್ಷ ಪ್ರಾಧ್ಯಾಪಕ ವೃಂದದಲ್ಲಿ ಸೇವೆ ಸಲ್ಲಿಸಿರಬೇಕು. ಇಷ್ಟು ಅರ್ಹತೆ ಇಲ್ಲದವರಿಗೆ ಕುಲಪತಿ ಸ್ಥಾನ ನೀಡುವಂತಿಲ್ಲ. ಆದರೆ, ಡಾ. ಪ್ರಕಾಶ್ ವಿಷಯದಲ್ಲಿ ಇದನ್ನು ಮರೆಮಾಚಲಾಗಿದೆ.
ಡಾ.ಪ್ರಕಾಶ್ ಅವರು ಪ್ರಾಧ್ಯಾಪಕ ವೃಂದಕ್ಕೆ ಪ್ರವೇಶ ಪಡೆದಿರುವುದೇ 2006ರ ಏಪ್ರಿಲ್ 20ರಂದು. ಅಂದರೆ, ಮುಂಬರುವ ಏಪ್ರಿಲ್ 20 ಕಳೆದರೂ ಏಳು ವರ್ಷದ ಸೇವೆ ಮಾತ್ರ ಪೂರ್ಣಗೊಳ್ಳುತ್ತದೆ. ಇಂತಹವರನ್ನು ಸರ್ಕಾರ ಹೇಗೆ ಶಿಫಾರಸು ಮಾಡಿದೆ ಎಂಬುದೇ ಈಗಿನ ಪ್ರಶ್ನೆ.
ರಾಜ್ಯಪಾಲರಿಗೆ ಡಾ.ಸಾಲಿಮಠ ಪತ್ರ
ಅರ್ಹತೆ ಇಲ್ಲದವರಿಗೆ ಶಿವಮೊಗ್ಗ ಕೃಷಿ-ತೋಟಗಾರಿಕೆ ವಿವಿ ಕುಲಪತಿ ಸ್ಥಾನ ನೀಡುವ ಸರ್ಕಾರದ ಶಿಫಾರಸು ಬಗ್ಗೆ ಡಾ. ಪಿ.ಎಂ. ಸಾಲಿಮಠ ಮನನೊಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಗೆ ಪತ್ರ ಬರೆದಿದ್ದಾರೆ.
ಡಾ. ಪ್ರಕಾಶ್ ಅವರ ಹೆಸರನ್ನು ಸರ್ಕಾರ ಶಿಫಾರಸು ಮಾಡಿರುವುದು ದುರದೃಷ್ಟಕರ. ಅವರು ಕನಿಷ್ಠ ಅರ್ಹತಾ ಸೇವೆಯನ್ನೂ ಹೊಂದಿಲ್ಲ. ವಿವಿಯ ಅಧಿಕಾರಿ ಆಗಬೇಕೆಂದರೂ ಕನಿಷ್ಠ ಎಂಟು ವರ್ಷಗಳ ಪ್ರಾಧ್ಯಾಪಕ ಸೇವೆ ಅಗತ್ಯ. ಅದೂ ಅವರಿಗಿಲ್ಲ. ಅಲ್ಲದೆ ಅವರು, ನೇಮಕದ ಪ್ರಕಾರ ಇನ್ನೂ ಸಹಾಯಕ ಪ್ರಾಧ್ಯಾಪಕರು. ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ಪ್ರಾಧ್ಯಾಪಕ ಹುದ್ದೆಗೆ ಏರಿರುವುದು ಕೇವಲ ವೈಯಕ್ತಿಕ. ಇದು ಮಂಜೂರಾದ ಹುದ್ದೆಗೆ ಆದ ನೇಮಕವಾಗಿಲ್ಲ. ಡಾ. ಪ್ರಕಾಶ್ ಅವರ ನೇಮಕ ಸಂಪೂರ್ಣ ಕಾನೂನುಬಾಹಿರ. ನಾನು ನೇರವಾಗಿ ಪ್ರಾಧ್ಯಾಪಕ ಹುದ್ದೆಗೆ ನೇಮಕವಾಗಿದ್ದು, 18 ವರ್ಷಗಳ ಅನುಭವ ಹೊಂದಿದ್ದೇನೆ. ಧಾರವಾಡ ಕೃಷಿ ವಿವಿಯಲ್ಲೂ ಆರು ವರ್ಷ ಸೇವೆ ಸಲ್ಲಿಸಿದ ನಂತರ ಈ ಹೊಸ ವಿವಿಗೆ ವಿಶೇಷ ಅಧಿಕಾರಿಯಾಗಿನೇಮಕವಾಗಿದ್ದೇನೆ. ಆದರೆ, ಸರ್ಕಾರ ನನ್ನ ಸೇವೆಯನ್ನು ಪರಿಗಣಿಸದೆ ಅರ್ಹತೆ ಇಲ್ಲದವರಿಗೆ ಮಣೆ ಹಾಕುತ್ತಿದೆ. ಇದರಿಂದ ನನಗೆ ಆಘಾತವಾಗಿದೆ. ಹೊಸ ವಿವಿಗೆ ನಾನು ಸಲ್ಲಿಸಿರುವ ಸೇವೆಯನ್ನಾದರೂ ಸರ್ಕಾರ ಪರಿಗಣಿಸಿಬೇಕಿತ್ತು. ಆದರೆ, ಅದನ್ನು ಸರ್ಕಾರ ಸಾರಾಸಗಟಾಗಿ ನಿರ್ಲಕ್ಷಿಸಿದೆ. ಆದ್ದರಿಂದ, ರಾಜ್ಯಪಾಲರಾದ ನಿಮ್ಮ ಬಳಿ ನಾನು ನ್ಯಾಯ ಕೇಳುತ್ತಿದ್ದೇನೆ ಎಂದು ಪಿ.ಎಂ. ಸಾಲಿಮಠ ಅವರು ರಾಜ್ಯಪಾಲರಿಗೆ ಮಾರ್ಚ್ 12ರಂದು ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
-ಕೆರೆ ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

