ಶಿವಮೊಗ್ಗ

ಗಣಪತಿ ದೇವಸ್ಥಾನ ಗೋಪುರ ದುರಸ್ತಿಗೆ ಆಗ್ರಹ

Published On :

ಕ.ಪ್ರ. ವಾರ್ತೆ, ಸಾಗರ, ಮಾ.15
ಪೂರ್ಣ ಶಿಥಿಲಗೊಂಡಿರುವ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದ ಮುಖಮಂಟಪದ ಗೋಪುರವನ್ನು ತುರ್ತು ದುರಸ್ತಿ ಮಾಡುವಂತೆ ಒತ್ತಾಯಿಸಿ ಶುಕ್ರವಾರ ಶ್ರೀ ಗಣಾಧೀಶ್ವರ ಸೇವಾ ಟ್ರಸ್ಟ್ ಹಾಗೂ ಸ್ನೇಹಬಳಗದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾಗರದ ಅಧಿದೇವತೆಯಾಗಿರುವ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ 600 ವರ್ಷಗಳ ಇತಿಹಾಸವಿದ್ದು, ಮುಜರಾಯಿ ಇಲಾಖೆಯ ಸಾಮ್ಯಕ್ಕೆ ಒಳಪಟ್ಟಿದೆ. ಈ ದೇವಸ್ಥಾನಕ್ಕೆ ರಾಜ್ಯದ ಬೇರೆಬೇರೆ ಭಾಗಗಳಿಂದ ಭಕ್ತಾದಿಗಳು ಬರುತ್ತಿದ್ದು ಪ್ರತಿವರ್ಷ ಲಕ್ಷಾಂತರ ರೂಪಾಯಿ ಆದಾಯವಿದೆ. ಆದರೆ, ಶಿಥಿಲಗೊಂಡಿರುವ ದೇವಸ್ಥಾನವನ್ನು ಅಭಿವೃದ್ಧಿಪಡಿಸುವ ಕುರಿತು ಈತನಕ ಗಂಭೀರ ಚಿಂತನೆ ನಡೆದಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ದೇವಸ್ಥಾನ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳುತ್ತಿದ್ದರೂ ಅದು ಕಡತಕ್ಕೆ ಮಾತ್ರ ಸೀಮಿತವಾಗಿದೆ. ದೇವಸ್ಥಾನದ ಪ್ರಮುಖ ಆಕರ್ಷಣೆಯಾಗಿರುವ ಮುಖಮಂಟಪದ ಕಟ್ಟಡ ಹಳೆಯದಾಗಿದ್ದು, ಕುಸಿದು ಬೀಳುವ ಸಂಭವವಿದೆ. ಈಗಾಗಲೇ ಗೋಪುರದ ಒಂದು ಭಾಗ ಕುಸಿದಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಶ್ರೀ ಮಹಾಗಣಪತಿ ದೇವಸ್ಥಾನದ ಮಹಾರಥೋತ್ಸವವು ಏಪ್ರಿಲ್ ಎರಡನೇಯ ವಾರದಲ್ಲಿ ನಡೆಯಲಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ರಥೋತ್ಸವ ಸಂದರ್ಭದಲ್ಲಿ ಯಾವುದೆ ಅನಾಹುತವಾಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಶ್ರೀ ಗಣಾಧೀಶ್ವರ ಸೇವಾ ಟ್ರಸ್ಟಿನ ಅಧ್ಯಕ್ಷ ಶಿವಮೂರ್ತಿ, ನಗರಸಭೆ ಸದಸ್ಯ ಎ.ಸಿ.ಅರವಿಂದ್, ಪ್ರಮುಖರಾದ ಅರುಣ ಘಾಟೆ, ದಿನಕರ್, ಎಸ್.ಎಸ್. ರಮೇಶ್, ಐ.ವಿ. ಹೆಗಡೆ, ಸತೀಶ್, ಪ್ರಶಾಂತ ರಾಯ್ಕರ್, ಪ್ರಸಾದ್ ಶೆಟ್ಟಿ, ಶಿವಾನಂದ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.