ಶಿವಮೊಗ್ಗ

ದಲಿತ ಸಮಾಜದ ಜಾಗೃತಿ ಅಗತ್ಯ

Published On :

ಕ.ಪ್ರ.ವಾರ್ತೆ, ಶಿಕಾರಿಪುರ, ಮಾ.16  ಜಾತಿ ವ್ಯವಸ್ಥೆಯಲ್ಲಿ ದಲಿತ ಸಮುದಾಯ ಮಾತ್ರ ಜಾಗೃತಿ ಸಮಾವೇಶ  ಹಮ್ಮಿಕೊಳ್ಳಬೇಕಾದ ಅನಿವಾರ್ಯತೆಯಿದ್ದು, ಇದುವರೆಗೂ ದಲಿತ ಸಮಾಜ ಜಾಗೃತಿ ಹೊಂದದ ಬಗ್ಗೆ ವಿಷಾದವಿದೆ ಎಂದು ಮಾದಿಗ ಹಾಗೂ ಆದಿ ಜಾಂಬವ ಸಮಾಜದ ಗುರುಪೀಠ ಹಿರಿಯೂರು ಶಾಖಾ ಮಠದ  ಷಡಾಕ್ಷರಿ ಶ್ರೀ ಆತಂಕ ವ್ಯಕ್ತಪಡಿಸಿದರು.
    ಶನಿವಾರ ಪಟ್ಟಣದ ದಿ. ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ತಾಲೂಕು ಆದಿ ಜಾಂಬವ ಮತ್ತು ಮಾದಿಗ ದಂಡೋರ ಸಂಘದಿಂದ ನಡೆದ ಜನ ಜಾಗೃತಿ ಸಮಾವೇಶದ ಸಾನ್ನಿದ್ಯ ವಹಿಸಿದ್ದ ಅವರು ಆಶೀರ್ವಚನ ನೀಡಿದರು.
ಕೀಳರಿಮೆ ಬೇಡ: ದಲಿತರಿಗೆ ಹಕ್ಕು ಮಂಡಿಸುವುದು ಮಾತ್ರ ಅಭ್ಯಾಸವಾಗಿದ್ದು, ಕರ್ತವ್ಯ ಮರೆಯುತ್ತಿದ್ದಾರೆ ಎಂದ ಅವರು ಅಸ್ಪೃಶ್ಯ ಎನ್ನುವ ಕೀಳರಿಮೆಯಿಂದ ಹೊರಬಂದು ಎಲ್ಲಾ ಸಮಾಜವನ್ನೂ ಪ್ರೀತಿಸುವ ವೈಶಾಲ್ಯತೆ ತೋರಬೇಕಾಗಿದೆ ಎಂದರು.
  ಮಠಕ್ಕೆ ಬೇಟಿ ನೀಡಿ, ಸಮಾಜದ ಅಭಿವೃದ್ಧಿ ಬಗ್ಗೆ ತನ್ನ ನೈಜ ಕಾಳಜಿಯನ್ನು ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಉನ್ನತ ಮಟ್ಟದ ಜನಪರ ನಾಯಕ ಎಂದು ಬಣ್ಣಿಸಿದ ಅವರು, ಕ್ಷಣಿಕ ಸುಖದ ಆಸೆಗೆ ಮರುಳಾದಲ್ಲಿ ಸತತ 5 ವರ್ಷ ನೋವನುಭವಿಸಬೇಕಾದೀತು. ಮಮತೆ, ಮಮಕಾರ ತೋರುವ ರಾಜಕಾರಣಿಗಳ ಜತೆ ಕೈಜೋಡಿಸಿ ಎಂದರು.
ಇನ್ನಷ್ಟು ಸಾಧನೆ ಅಗತ್ಯ: ದಲಿತರ ಸಾಧನೆ ಎಲ್ಲಾ ಕ್ಷೇತ್ರದಲ್ಲಿ ಕಡಿಮೆಯಿದ್ದು, ಕೇವಲ ಸಮಾಜ ಜಾಗೃತಿಗಾಗಿ ಇಂದಿಗೂ ಸಮಾವೇಶ ಆಯೋಜಿಸಬೇಕಾದ ಅನಿವಾರ್ಯತೆ ಇದೆ. ಜಟಿಲ ಪರಿಸ್ಥಿತಿಯ ಇಂದಿನ ದಿನದಲ್ಲಿ ಆಕರ್ಷಣೀಯವಾಗಿ ಶಿಷ್ಯರನ್ನು ಉದ್ಧರಿಸುವ ಗುರಪೀಠದ ಗುರುಗಳ ಜತೆ ಸಮಾಜ ಹೋಗಬೇಕಾಗಿದೆ ಎಂದರು.
  ಸಮಾವೇಶ ಉದ್ಘಾಟಿಸಿದ ಸಂಸದ ರಾಘವೇಂದ್ರ ಮಾತನಾಡಿ, ನಂಬಿಕೆ, ವಿಶ್ವಾಸಕ್ಕೆ ಅರ್ಹವಾಗಿ ಸ್ವಾಭಿಮಾನದ ಜೀವನ ಶೈಲಿಯಲ್ಲಿ ಜೀವಿಸುತ್ತಿರುವ ಆದಿಜಾಂಬವ, ಮಾದಿಗ ಸಮಾಜದ ಇತರೆ ಸಮುದಾಯಕ್ಕೆ ಗೌರವದಿಂದ ಬದುಕುವ ಮೂಲಕ ಮಾದರಿಯಾಗಿದ್ದಾರೆ ಎಂದ ಅವರು ಸ್ವಾತಂತ್ರ್ಯಾ ನಂತರದಲ್ಲಿ ದಲಿತರು ಆರ್ಥಿಕ, ಸಾಮಾಜಿಕವಾಗಿ ಸ್ವಾಭಿಮಾನದಿಂದ ಬದುಕಲು ಹಲವು ವರ್ಷದ ಹೋರಾಟ ಅಗತ್ಯ ಎಂದರು.
 ಮಾದಿಗ ದಂಡೋರ ಸಮಿತಿ ತಾಲೂಕು ಅಧ್ಯಕ್ಷ ಹೊಲೆಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸದ ರಾಘವೇಂದ್ರ ಹಾಗೂ ಷಡಾಕ್ಷರಿ ಸ್ವಾಮಿಗಳನ್ನು ಗೌರವಿಸಲಾಯಿತು. ಆದಿ ಜಾಂಬವ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ರೋಟೆ ಅಧ್ಯಕ್ಷತೆ ವಹಿಸಿದ್ದರು.
  ವೇದಿಕೆಯಲ್ಲಿ ರಾಜ್ಯಾಧ್ಯಕ್ಷ ಶಂಕ್ರಪ್ಪ, ತಾಪಂ ಅಧ್ಯಕ್ಷ ಹನುಮಂತಪ್ಪ, ಜೆಡಿಎಸ್ ಮುಖಂಡ ಎಚ್.ಟಿ ಬಳಿಗಾರ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಗುರುಮೂರ್ತಿ, ಪ್ರವೀಣ ಶೆಟ್ಟಿ, ಚಂದ್ರಪ್ಪ, ಬಸವಾಶ್ರಮದ ಮಾತೆ ಶರಣಾಂಬಿಕೆ, ರಾಜ್ಯ ಮಾದಿಗ ದಂಡೋರ ನೌಕರ ಸಂಘದ ಉಪಾಧ್ಯಕ್ಷ ಪಿ. ಶಿವಪ್ಪ, ಪುರಸಭಾ ಮಾಜಿ ಉಪಾಧ್ಯಕ್ಷ ರಮೇಶ್, ರವೀಶ್, ಚಂದ್ರಪ್ಪ, ಶೀಲಾವತಿ, ಮಂಜಪ್ಪ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.