ವಿದ್ಯುತ್ ಅಭಾವ ವಿರೋಧಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ, ಶಿಕಾರಿಪುರ, ಮಾ.18
ವಿದ್ಯುತ್ ಅಭಾವದಿಂದಾಗಿ ರೈತರು, ವಿದ್ಯಾರ್ಥಿಗಳ ಸ್ಥಿತಿ ಶೋಚನೀಯವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕೇವಲ ಅಧಿಕಾರ ಶಾಹಿಗಳ ಏಜೆಂಟರಂತೆ ವರ್ತಿಸುತ್ತಾ ಅವರ ತೋಟ, ಮನೆಗಳಿಗೆ ವಿದ್ಯುತ್ ನಿಲುಗಡೆಯಾಗದಂತೆ ಮಾಡುತ್ತಿರುವ ಮೆಸ್ಕಾಂ ಅಧಿಕಾರಿಗಳ ವರ್ತನೆ ಅಕ್ಷಮ್ಯವಾಗಿದ್ದು, ಪರಿಸ್ಥಿತಿ ಸುಧಾರಿಸದಿದ್ದಲ್ಲಿ ರೈತಾಪಿ ವರ್ಗ ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ, ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್ ಎಚ್ಚರಿಸಿದರು.
ಸೋಮವಾರ ವಿದ್ಯುತ್ ವೈಫಲ್ಯ ವಿರೋಧಿಸಿ ಯುವ ಕಾಂಗ್ರೆಸ್‌ನಿಂದ ಮೆಸ್ಕಾಂ ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ 175 ಹಳ್ಳಿಗಳಿಗೆ ವಿದ್ಯುತ್ ಅಭಾವದಿಂದ ರೈತರು ಕಂಗೆಟ್ಟಿದ್ದು, ಇದರೊಂದಿಗೆ ಇದೀಗ ಪರೀಕ್ಷಾ ಸಂದರ್ಭದಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳ ಪರಿಸ್ಥಿತಿ ಹೀನಾಯವಾಗಿದೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರರ ಖಾಸಗಿ ತೋಟಗಳಿಗೆ ನಿರಂತರವಾಗಿ ವಿದ್ಯುತ್ ನೀಡಿ ತಾರತಮ್ಯ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಸಂಸದರಿಗೆ ಸವಾಲು: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ ಮಾತನಾಡಿ, ಮಾಜಿ ಮುಖ್ಯಮಂತ್ರಿಯವರ ಮಗ ಸಂಸದ ರಾಘವೇಂದ್ರ ಪ್ರಾಮಾಣಿಕವಾಗಿ ರೈತರ ಸಮಸ್ಯೆ ಬಗ್ಗೆ ಸ್ಪಂದಿಸುವ ಕಳಕಳಿ ಇದ್ದಲ್ಲಿ ಈ ಕೂಡಲೇ ದಿನದ 24 ಗಂಟೆ ವಿದ್ಯುತ್ ದೊರಕಿಸುವಂತೆ ಸವಾಲು ಹಾಕಿದರು.
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಬಿ.ಸಿ ವೇಣುಗೋಪಾಲ ಮಾತನಾಡಿ, ಹಸಿರು ಶಾಲು ಹೊದ್ದು ಮುಖ್ಯಮಂತ್ರಿಯಾದ ಯಡಿಯೂರಪ್ಪ ನಂತರ ವಿದ್ಯುತ್ ಅಭಾವಕ್ಕೆ ನೆರೆಯ ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸುವುದಾಗಿ ನಾಟಕವಾಡಿದ್ದು, ಮೊಸಳೆ ಕಣ್ಣೀರು ಸುರಿಸುವ ಅವರು ಕೇವಲ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಲು ಹೊಸ ಪಕ್ಷ ರಚಿಸಿದ್ದಾರೆ ಎಂದರು.
ಮನವಿ ಸಲ್ಲಿಕೆ: ಸಮರ್ಪಕ ವಿದ್ಯುತ್‌ಗೆ ಆಗ್ರಹಿಸಿ ಮೆಸ್ಕಾಂ ಇಇ ಇಂದುಶೇಖರಯ್ಯ ನವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅವರು ನಿತ್ಯ ಬೆಳಗ್ಗೆ 3 ಹಾಗೂ ಸಂಜೆ 3 ಗಂಟೆ ತ್ರೀ ಫೇಸ್ ರಾತ್ರಿ ಸಿಂಗಲ್ ಫೇಸ್ ಸೇರಿದಂತೆ ಕನಿಷ್ಠ 10 ಗಂಟೆ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದರು.
ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಕಾರರು ಮೆಸ್ಕಾಂ ಕಚೇರಿಯ ಮುಖ್ಯ ದ್ವಾರದಲ್ಲಿನ ಪೊಲೀಸ್ ಬಂದೋಬಸ್ತ್ ದಾಟಿ ಕಚೇರಿಗೆ ಮುತ್ತಿಗೆ ಹಾಕಿದರು.
ಪುರಸಭಾ ಸದಸ್ಯ ಪಾರಿವಾಳದ ಶಿವರಾಂ, ಮಧುಸೂದನ, ವಿಜಯಕುಮಾರ್, ಸ.ನ ಮಂಜಪ್ಪ, ಫಯಾಜ್, ಮೌನೇಶಾಚಾರ್, ಬಷೀರ್, ನಗರದ ರವಿಕಿರಣ, ತನ್ವೀರ್, ಸುರೇಶ್ ಧಾರವಾಡದ, ಮಧು ಹುಲ್ಮಾರ್, ಗಿರೀಶ್, ಗಣೇಶ್, ನಿಂಗೋಜಿರಾವ್, ಬಸವರಾಜಪ್ಪ, ಚೇತನ್ ಸೇರಿದಂತೆ ಸಾಲೂರು, ಅಂಬ್ಲಿಗೊಳ್ಳ, ಕಾಳೇನಹಳ್ಳಿ ಮೊದಲಾದ ಗ್ರಾಮದ ಹಲವು ರೈತರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

