ನಾಳೆಯಿಂದ ಅಪರೂಪದ ಛಾಯಾಚಿತ್ರ ಪ್ರದರ್ಶನ
ಶಿವಮೊಗ್ಗ: ವಾರ್ತಾ ಇಲಾಖೆಯು ವಿಧಾನಸಭೆ-60 ಎಂಬ ಛಾಯಾಚಿತ್ರ ಪ್ರದರ್ಶನವನ್ನು ಮಾರ್ಚ್ 22 ಹಾಗೂ 23 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದೆ.
2012ರ ಜೂನ್ 18ರಂದು ರಾಜ್ಯ ವಿಧಾನಸಭೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಈ ಛಾಯಾಚಿತ್ರ ಪ್ರದರ್ಶನದಲ್ಲಿ ರಾಜ್ಯ ಸರ್ಕಾರದ ಪ್ರಮುಖ ಮಜಲುಗಳು ಹಾಗೂ ಪ್ರಮುಖ ಘಟನೆಗಳನ್ನು ಬಿಂಬಿಸುವ 250ಕ್ಕೂ ಅಧಿಕ ಛಾಯಾಚಿತ್ರಗಳನ್ನು ಕಾಣಬಹುದು.
ಈ ಪ್ರದರ್ಶನವನ್ನು ಮಾರ್ಚ್ 22ರಂದು ಬೆಳಿಗ್ಗೆ 10ಗಂಟೆಗೆ ಹಾಗೂ ಡಿಸಿಎಂ ಕೆ.ಎಸ್. ಈಶ್ವರಪ್ಪ ಉದ್ಘಾಟಿಸುವರು. ಅಂದು ಸಂಜೆ 6 ಗಂಟೆವರೆಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪ್ರದರ್ಶನ ಮರುದಿನ ಬೆಳಿಗ್ಗೆ 9ರಿಂದ ಸಂಜೆ 6ರವರೆಗೂ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.
1942ರಲ್ಲಿ ಪ್ರಜಾಪ್ರತಿನಿಧಿ ಸಭೆಯ ಅಧಿವೇಶನದಿಂದ 2012ರಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರದವರೆಗಿನ ಹಲವಾರು ಅಪರೂಪದ ಕ್ಷಣಗಳು ವಾರ್ತಾ ಇಲಾಖೆಯ ಈ ಛಾಯಾಚಿತ್ರ ಸಂಗ್ರಹದಲ್ಲಿ ದಾಖಲಾಗಿದೆ.
ವಿಧಾನಸಭೆಯ ವಜ್ರಮಹೋತ್ಸವ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಮೊದಲ ಬಾರಿಗೆ ಈ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಯಿತು. ಇದಕ್ಕೆ ನಾಗರಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಎರಡನೇ ಪ್ರದರ್ಶನವನ್ನು ನಡೆಸಲಾಯಿತು.
ಇತ್ತೀಚೆಗೆ ಬೆಳಗಾವಿಯಲ್ಲಿ ಸುವರ್ಣಸೌಧದ ಉದ್ಘಾಟನೆ ಹಾಗೂ ಮೈಸೂರು ದಸರಾ ವೇಳೆಯೂ ಈ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.
ಇದೇ ಸರಣಿಯ ಅಂಗವಾಗಿ ಈ ಛಾಯಾಚಿತ್ರ ಪ್ರದರ್ಶನವವನ್ನು ಇದೀಗ ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ. ರಾಜ್ಯದ ಶಕ್ತಿ ಕೇಂದ್ರ ಎನಿಸಿರುವ ವಿಧಾನಸೌಧ, ವಾಸ್ತುಶಿಲ್ಪದ ದೃಷ್ಟಿಯಿಂದಲೂ ಐತಿಹಾಸಿಕ ಕಟ್ಟಡವಾಗಿದೆ. ವಿಧಾನಸೌಧ ನಿರ್ಮಾಣಕ್ಕೆ ಅಂದಿನ ಪ್ರಧಾನಿ ನೆಹರು ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು. 1973ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ಕರ್ನಾಟಕ ಎಂದು ನಮ್ಮ ರಾಜ್ಯಕ್ಕೆ ಮರುನಾಮಕರಣ ಮಾಡಿದ ಸಂದರ್ಭದಲ್ಲಿ ರಾಜ್ಯದ ನಕ್ಷೆಯನ್ನು ವಿಧಾನಸೌಧದ ಮೆಟ್ಟಿಲಿನಲ್ಲಿ ಅನಾವರಣ ಮಾಡಿದ ಸಂದರ್ಭ, ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ವಿಧಾನಸಭೆ ಅಧಿವೇಶನವೂ ಸೇರಿದಂತೆ ಹಲವಾರು ಅಪರೂಪದ ಘಟನೆಗಳಿಗೆ ಈ ಛಾಯಾಚಿತ್ರಗಳು ಸಾಕ್ಷಿಯಾಗಿವೆ.
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಬೆಂಗಳೂರು ಭೇಟಿ, ಬೆಂಗಳೂರಿನಲ್ಲಿ ನಡೆದ ಸಾರ್ಕ್ ಸಮ್ಮೇಳನ, ಅಖಿಲ ಭಾರತ ಸ್ಪೀಕರ್ಗಳ ಸಮ್ಮೇಳನ, ಚೀನಾ ಪ್ರಧಾನಿ ಚೌ ಎನ್ ಲೈ, ವಿಯೆಟ್ನಾಂ ಅಧ್ಯಕ್ಷರು, ಸಾಫ್ಟ್ವೇರ್ ಕ್ಷೇತ್ರದ ದಿಗ್ಗಜ ಬಿಲ್ಗೇಟ್ಸ್ ಭೇಟಿ ಮುಂತಾದ ಅಪರೂಪದ ಚಿತ್ರಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ.
ವಿಧಾನಸೌಧದ ರೂವಾರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ರಾಜ್ಯದ ಎಲ್ಲ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸ್ಪೀಕರ್ಗಳ ಭಾವಚಿತ್ರಗಳು ಇಲ್ಲಿ ಪ್ರದರ್ಶನಕ್ಕಿವೆ.
ಜೊತೆಗೆ ಸುವರ್ಣಸೌಧದ ನಿರ್ಮಾಣದ ವಿವಿಧ ಹಂತಗಳಿಂದ ಹಿಡಿದು ಉದ್ಘಾಟನಾ ಕಾರ್ಯಕ್ರಮಗಳನ್ನೊಳಗೊಂಡ ಚಿತ್ರಗಳನ್ನು ಪ್ರದರ್ಶನದಲ್ಲಿ ವೀಕ್ಷಿಸಬಹುದು. ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ಅಪರೂಪದ ಛಾಯಾಚಿತ್ರವನ್ನು ವೀಕ್ಷಿಸಬೇಕೆಂದು ಜಿಲ್ಲಾ ವಾರ್ತಾಧಿಕಾರಿ ಜಿ. ಹಿಮಂತರಾಜು ವಿನಂತಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

