ಮನಪರಿವರ್ತಿತ ಗಜರೌಡಿ ಸದ್ದಡಗಿತು
ಕ.ಪ್ರ. ವಾರ್ತೆ,ಶಿವಮೊಗ್ಗ,ಮಾ.20
ಇದು ಅಂತಿಂಥ ಆನೆ ಅಲ್ಲ. ಪುದುಚೆರಿಯಲ್ಲಿದ್ದಾಗ 10 ಜನರ ಜೀವ ಬಲಿ ಪಡೆದಿತ್ತು. ಇದರ ಉಪಟಳ ತಾಳದೆ ಸಕ್ರೆಬೈಲಿನಲ್ಲಿರುವ ಆನೆ ಬಿಡಾರಕ್ಕೆ ಪಾಠ ಕಲಿಯಲು ಕಳಿಸಲಾಯಿತು. ಒಂದಿಷ್ಟು ಪಾಠವನ್ನೇನೋ ಕಲಿಯಿತು. ಆದರೆ 30ನೇ ವಯಸ್ಸಿನಲ್ಲಿಯೇ ಅಕಾಲ ಮರಣ ಕಂಡಿತು.
ರೌಡಿಶೀಟರ್ ಸದ್ದಾಂ ಸಕ್ರೆಬೈಲು ಬಿಡಾರದಲ್ಲಿ ಹೆಚ್ಚು ಸಮಸ್ಯೆ ಉಂಟುಮಾಡಿರಲಿಲ್ಲ. ಹೆಚ್ಚುಕಡಿಮೆ ಒಂದಿಷ್ಟು ಪಾಠ ಕಲಿತಿತ್ತು. ಆಗಾಗ ಸಿಟ್ಟುಗೊಳ್ಳುತ್ತಿದ್ದು ಬಿಟ್ಟರೆ ಜೀವಹಾನಿ ಮಾಡಿಲ್ಲ. ಪ್ರತಿದಿನದಂತೆ ಮಂಗಳವಾರ ಸಂಜೆಯ ನಂತರ ಆನೆಯನ್ನು ಕಾಡಿಗೆ ಬಿಡಲಾಗಿತ್ತು. ನದಿ ದಡದಲ್ಲಿಯೇ ಒಂದು ಕಡೆ ದೊಡ್ಡ ಸರಪಳಿಯೊಂದಿಗೆ ಬಂಧಿಸಲಾಗಿತ್ತು. ರಾತ್ರಿ 12 ಗಂಟೆ ವೇಳೆಗೆ ಮಾವುತ ಮುನಾವರ್ ಹುಲ್ಲು ಮೇಯುತ್ತಿದ್ದುದನ್ನು ನೋಡಿಕೊಂಡು ಬಂದಿದ್ದಾರೆ. ಆದರೆ ಬುಧವಾರ ಬೆಳಗ್ಗೆ ಹೊತ್ತಿಗೆ ಸಾವು ಕಂಡಿತ್ತು.
ಹೃದಯಾಘಾತ ಶಂಕೆ: ಪಶುವೈದ್ಯ ಡಾ. ಚಂದ್ರಶೇಖರ ಸುಂಕದ್ ಅವರು ಈ ಸಾವು ಹೃದಯಾಘಾತದಿಂದ ಸಂಭವಿಸಿದೆ ಎನ್ನುತ್ತಾರೆ. ಬೇಟೆ, ಹಾಲು ಕಡಿತ, ವಿದ್ಯುತ್ ಸ್ಪರ್ಶ, ಇತರೆ ಪ್ರಾಣಿಗಳಿಂದ ದಾಳಿಯಾದ ಬಗ್ಗೆ ಯಾವುದೇ ಕುರುಹು ಇಲ್ಲ. ಹಾಗಾಗಿ ಸಹಜ ಸಾವು ಸಂಭವಿಸಿದೆ ಎಂದೇ ನಂಬುತ್ತೇವೆ. ಆದರೆ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಅಂತಿಮ ತೀರ್ಮಾನ ಸಾಧ್ಯ ಎನ್ನುತ್ತಾರೆ.
ಸ್ಥಳಕ್ಕೆ ವನ್ಯಜೀವಿ ವಿಭಾಗದ ಪಿಸಿಸಿಎಫ್ ದೀಪಕ್ ಶರ್ಮ, ಡಿಎಫ್‌ಓ ರವಿಕುಮಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಸಂಜೆ 5 ಗಂಟೆಗೆ ಆನೆಗೆ ಅಗ್ನಿಸ್ಪರ್ಶ ಮಾಡಲಾಯಿತು.
ಅಸ್ಸಾಂ ಮೂಲ: ಈ ಗಜರಾಜನ ಮೊದಲ ಹೆಸರು ಸದ್ದಾಂ. ಅಸ್ಸಾಂನಲ್ಲಿದ್ದಾಗ ಈ ಹೆಸರಿನಿಂದ ಕರೆಯಲಾಗುತ್ತಿತ್ತು. ನಂತರ ಪುದುಚೆರಿಯಲ್ಲಿರುವ ದರ್ಬರೆಣ್ಯಂ ಶನೈಶ್ಚರ ದೇವಾಲಯಕ್ಕೆ ತರಲಾಯಿತು. ಅಲ್ಲಿ ಹೆಸರು ಬದಲಿಸಿ ಗಣೇಶ ಎಂದು ನಾಮಕರಣ ಮಾಡಲಾಯಿತು. ಇದು ಉದ್ದ ದಂತ ಬೆಳೆಯದ ತಳಿ. ಆದರೆ ಈ ದೇವಸ್ಥಾನದಲ್ಲಿ ಗಣೇಶನ ಉಪಟಳ ವಿಪರೀತವಾಗಿತ್ತು.
ಶಾಲಾ ಮಕ್ಕಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದ ಈ ಆನೆಯು 10 ಜನರ ಜೀವ ಬಲಿ ಪಡೆದಿತ್ತು. ದೇವಾಲಯ ಸಮಿತಿಗೂ ನಿಯಂತ್ರಿಸುವುದು ಅಸಾಧ್ಯವಾಗಿತ್ತು.
ಕೊನೆಗೆ ಶಿವಮೊಗ್ಗದ ಬಳಿಯ ಸಕ್ರೆಬೈಲು ಆನೆಬಿಡಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು. 2001ರ ಫೆಬ್ರವರಿ 9ರಂದು ಸದ್ದಾಂ ಅಲಿಯಾಸ್ ಗಣೇಶ ಸಕ್ರೆಬೈಲು ಬಿಡಾರ ಪಾಠಶಾಲೆಗೆ ಬಂದ. ಇದಕ್ಕೆ ಪ್ರತಿಯಾಗಿ ಈ ಬಿಡಾರದಿಂದ ಪ್ರಕೃತಿ ಎಂಬ ಹೆಣ್ಣಾನೆಯನ್ನು ಈ ದೇವಸ್ಥಾನಕ್ಕೆ ಕಳುಹಿಸಿಕೊಡಲಾಯಿತು.
ಎಚ್ಚರಿಕೆಯ ಚಿಕಿತ್ಸೆ: ಬಿಡಾರಕ್ಕೆ ಬಂದ ನಂತರ ಸಣ್ಣ ದಂತವನ್ನು ಹೊಂದಿದ್ದ ಈ ಆನೆಗೆ ಮಕ್ನ ಎಂದೇ ಕರೆಯಲು ಆರಂಭಿಸಲಾಯಿತು. ಕೆಲವೊಮ್ಮೆ ಮೂಲ ಹೆಸರಾದ ಸದ್ದಾಂ ಎಂದೇ ಕರೆಯಲಾಗುತ್ತಿತ್ತು. ಮಾವುತ ಮುನಾವರ್ ಪಾಷಾ ಹಾಗೂ ಕವಾಡಿ ಇಮ್ತಿಯಾಜ್ ಅವರಿಗೆ ಆನೆ ನಿರ್ವಹಣೆ ಜವಾಬ್ದಾರಿ ನೀಡಲಾಯಿತು.
ಮುಂದಿನಿಂದ ಪಾಠ ಅಸಾಧ್ಯ: ಯಾವಾಗಲೂ ಆಕ್ರೋಶದಿಂದಿರುತ್ತಿದ್ದ ಈ ಆನೆಗೆ ಬಿಡಾರದ ಪಾಠ ಕಲಿಸಿಕೊಡುವುದು ಕಷ್ಟದ ಕೆಲಸ. ಮಾವುತ ಮುನಾವರ್ ಹೇಳುವಂತೆ, ಆನೆಯ ಮುಂದೆ ನಿಂತು ಪಾಠ ಹೇಳುಕೊಡಲು ಸಾಧ್ಯವೇ ಇರುತ್ತಿರಲಿಲ್ಲ. ಆನೆಯ ಮುಂಭಾಗ, ಸೊಂಡಿಲುಗಳನ್ನು ನಾವು ಮುಟ್ಟುತ್ತಲೇ ಇರಲಿಲ್ಲ. ಹಿಂಭಾಗದಲ್ಲಿಯೇ ನಿಂತು ತರಬೇತಿ ನೀಡಲಾಗುತ್ತಿತ್ತು.
ನನ್ನ ಮೇಲೆಯೂ 3-4 ಬಾರಿ ಆಕ್ರಮಣ ನಡೆಸಲು ಬಂದಿತ್ತು- ಎಂದು ನೆನಪಿಸಿಕೊಳ್ಳುವ ಮುನಾವರ್, ಬಿಡಾರಕ್ಕೆ ಬಂದಾಗ ಸಣಕಲಾಗಿದ್ದ, ಮೈಮೇಲೆ ಗಾಯಗಳಿಂದ ಕೂಡಿದ್ದ ಆನೆ ಎರಡು ವರ್ಷದಲ್ಲಿ ಗಟ್ಟಿಮುಟ್ಟಾಗಿ ಬೆಳೆದಿತ್ತು. ಇಂತಹ ಸ್ಥಿತಿಯಲ್ಲಿ ದಿಢೀರೆಂದು ಮೃತಪಟ್ಟಿದ್ದರಿಂದ ಬೇಜಾರಾಗಿದೆ ಎಂದರು.
ವಿವಾದಿತ ಆನೆ ಇದು
ಶಿವಮೊಗ್ಗ: ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಸದ್ದಾಂ ವಿವಾದಕ್ಕೆ ಸಿಲುಕಲು ಕಾರಣನಾಗಿದ್ದ.
ಪಾಂಡಿಚೆರಿಯ ದರ್ಬನಾರೇಶ್ವರ ದೇವಾಲಯಕ್ಕೆ ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಭೇಟಿ ನೀಡಿದ್ದಾಗ ಆನೆ ಕೊಡುಗೆಯಾಗಿ ನೀಡುವ ಭರವಸೆ ನೀಡಿದರು. ಅದಕ್ಕೆ ಕೇಂದ್ರ ಒಪ್ಪಿಗೆ ನೀಡಲಿಲ್ಲ. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ರಾಜ್ಯ ಸರ್ಕಾರ ವಿನಿಮಯ ಕಾರ್ಯಕ್ರಮದಲ್ಲಿ ದೇವಸ್ಥಾನಕ್ಕೆ ಆನೆ ನೀಡಲು ಒಪ್ಪಿಗೆ ಸೂಚಿಸಿತ್ತು. ಸದ್ದಾಂನನ್ನು ಸಕ್ರೆಬೈಲಿಗೆ ಅಲ್ಲಿಂದ ಹೆಣ್ಣಾನೆ ಪ್ರಕೃತಿಯನ್ನು ದೇವಸ್ಥಾನಕ್ಕೆ ಕೊಡಲಾಗಿತ್ತು.
- ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

