ಜಿಲ್ಲಾಧಿಕಾರಿಯಿಂದ ನಗರಸಭೆ ಕೊರತೆ ಬಜೆಟ್ ಮಂಡನೆ
ಕ.ಪ್ರ.ವಾರ್ತೆ,ಶಿವಮೊಗ್ಗ, ಮಾ.21
ಪುರಪಿತೃಗಳಿಲ್ಲದ ಶಿವಮೊಗ್ಗ ನಗರಸಭೆಗೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು 2013-14ನೇ ಸಾಲಿಗೆ ಕೊರತೆ ಬಜೆಟ್ ಮಂಡಿಸಿದ್ದಾರೆ. ಇದೊಂದು ಗಿಮಿಕ್ ಇಲ್ಲದ ಸೀದಾಸಾದಾ ಬಜೆಟ್. ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂಬರುವ ಸಾಲಿನ ಹಲವು ಯೋಜನೆಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಿದ್ದಾರೆ.
ಯಾವುದೇ ಹೆಚ್ಚುವರಿ ತೆರಿಗೆ ವಿಧಿಸಿಲ್ಲದಿರುವುದು ಸಮಾಧಾನಕರ. ಆದರೆ, ನೀರಿನ ಕರ ಹೆಚ್ಚಾಗಿದೆ. ಒಟ್ಟಾರೆ ರಾಜಸ್ವ ತೆರಿಗೆಯಲ್ಲಿ ಶೇ.28.6ರಷ್ಟು ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.
ನೀರಿನ ಶುಲ್ಕ ಪರಿಷ್ಕರಣೆ: 2011, ಜುಲೈ 20ರ ಸರ್ಕಾರದ ಆದೇಶದಂತೆ 2012-13ನೇ ಸಾಲಿನಿಂದಲೇ ನಗರ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ನೀರಿನ ಕರ ಹೆಚ್ಚಿಸಬೇಕಾಗಿದ್ದು, 2013-14ನೇ ಸಾಲಿಗೆ ನೀರಿನ ಗೃಹ ಬಳಕೆಗೆ ರು. 60 ರಿಂದ ರು. 120ಕ್ಕೂ ಮತ್ತು ವಾಣಿಜ್ಯ ಬಳಕೆಯನ್ನು ರು. 120 ರಿಂದ ರು. 240ಕ್ಕೂ ಹೆಚ್ಚಿಸಲಾಗಿದೆ. ಈ ಮೂಲಕ ಹಿಂದಿನ ವರ್ಷದ ನೀರಿನ ಕರದ ಬೇಡಿಕೆ ರು. 250 ಲಕ್ಷದಿಂದ ರು. 640 ಲಕ್ಷಗಳಿಗೆ ಹೆಚ್ಚುವರಿಯಾಗುವ ನಿರೀಕ್ಷೆ ಇದೆ. ಪ್ರಸ್ತಾವಿತ ದರಗಳು ಏಪ್ರಿಲ್ 1ರಿಂದ ಜಾರಿಯಾಗಲಿವೆ.
ಆಸ್ತಿ ತೆರಿಗೆ: 2012-13ನೇ ಸಾಲಿನಲ್ಲಿ ಆಸ್ತಿ ತೆರಿಗೆ ಬೇಡಿಕೆ ರು. 928 ಲಕ್ಷಗಳಿದ್ದು, 2013-14ನೇ ಸಾಲಿಗೆ ಹೆಚ್ಚುವರಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದಿರುವ ಕಾರಣ ರು. 1100 ಲಕ್ಷಗಳ ಬೇಡಿಕೆ ನಿರೀಕ್ಷಿಸಲಾಗಿದ್ದು, 2013-14ನೇ ಸಾಲಿಗೆ ಯಾವುದೇ ಹೆಚ್ಚುವರಿ ತೆರಿಗೆ ವಿಧಿಸಿರುವುದಿಲ್ಲ. ಸರ್ಕಾರದ ಆದೇಶದಂತೆ ಆಸ್ತಿ ತೆರಿಗೆ ದರವನ್ನು 2014-15ನೇ ಸಾಲಿಗೆ ಪರಿಷ್ಕರಿಸಬೇಕಾಗಿರುತ್ತದೆ.
ಶಿವಮೊಗ್ಗ ಒನ್ ಮೂಲಕ ಆಸ್ತಿ ತೆರಿಗೆ: ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಸಾರ್ವಜನಿಕರು ಪಾವತಿಸುವ ಸಲುವಾಗಿ ತೆರಿಗೆ ಸಲಹೆಗಾರರಿಗೆ ರು. 25 ಪಾವತಿಸಿ ಲೆಕ್ಕಾಚಾರ ಮಾಡಿಕೊಂಡು ಆಸ್ತಿ ತೆರಿಗೆ ಪಾವತಿಸುವ ವ್ಯವಸ್ಥೆ ಇದ್ದು, ಇದನ್ನು ಇನ್ನೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಆಸ್ತಿ ವಿವರಗಳನ್ನು ಗಣಕೀಕರಣಗೊಳಿಸಲಾಗಿದ್ದು, ಇದರನ್ವಯ ಏ.1ರಿಂದ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ಕೇವಲ ರು. 10 ಪಾವತಿಸಿ ಲೆಕ್ಕಾಚಾರ ಪಟ್ಟಿ ಪಡೆದು ಆಸ್ತಿ ತೆರಿಗೆ ಪಾವತಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

