ಒಂದೇ ವೇದಿಕೆಯಲ್ಲಿ ವಿವಾಹ, ನಿಖಾ
ಕ.ಪ್ರ ವಾರ್ತೆ ಶಿವಮೊಗ್ಗ ಮಾ.24-
ಭಾನುವಾರ ನಡೆದ ಅಪರೂಪದ ಸಾಮೂಹಿಕ ವಿವಾಹ ಮಹೋತ್ಸವವೊಂದಕ್ಕೆ ಶಿವಮೊಗ್ಗ ಸಾಕ್ಷಿಯಾಯಿತು.
ಸಾಮೂಹಿಕ ವಿವಾಹ ಸಾಮಾನ್ಯ. ಆದರೆ ಅಲ್ಲಿ ಹಿಂದು- ಮುಸ್ಲಿಂ ಜೋಡಿಗಳ ಭಾವೈಕ್ಯತಾ ಸಾಮೂಹಿಕ ವಿವಾಹ ನಡೆಯಿತು.
ಒಂದು ಕಡೆ ಪುರೋಹಿತರಿಂದ ಮಂತ್ರಘೋಷ ಮೊಳಗಿದರೆ ಮತ್ತೊಂದು ಕಡೆ ನಿಖಾ ಪ್ರಕ್ರಿಯೆ. ಎರಡೂ ನಡೆದಿದ್ದು ಒಂದೇ ವೇದಿಕೆಯಲ್ಲಿ ಎಂಬುದು ವಿಶೇಷ.
ಮಿಳಘಟ್ಟದ ಕೆಎಸ್ಆರ್ಟಿಸಿ ಡಿಪೋ ಪಕ್ಕದಲ್ಲಿರುವ ನಗರಸಭೆ ಮೈದಾನದಲ್ಲಿ ತುಂಗಾ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಸಮಾಜಸೇವಕ ಹಬೀಬ್ಖಾನ್ ಹಾಗೂ ಚಲನಚಿತ್ರ ನಿರ್ಮಾಪಕ ಫೈರೋಜ್ ಖಾನ್ ನೇತೃತ್ವದಲ್ಲಿ ಈ ಅಪರೂಪದ ಕಾರ್ಯಕ್ರಮ ನಡೆಯಿತು.
21 ಜೋಡಿ ಮದುವೆ: ಎರಡೂ ಧರ್ಮಗಳ ಧಾರ್ಮಿಕ ಸಂಪ್ರದಾಯದಂತೆಯೇ ಒಂದೇ ವೇದಿಕೆಯಲ್ಲಿ 21 ಜೋಡಿ ಮದುವೆ ನೆರವೇರಿತು. ಈ ಜೋಡಿಗಳಲ್ಲಿ 8 ಜೋಡಿ ಹಿಂದು ಸಮುದಾಯಕ್ಕೆ ಸೇರಿದ್ದಾದರೆ, 13 ಜೋಡಿ ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದರು.
ಬೆಳಿಗ್ಗೆ ವೇದಿಕೆ ಬಲ ಭಾಗದಲ್ಲಿ ಮದುವೆ ಮಂಟಪ ಅಲಂಕೃತಗೊಂಡಿದ್ದರೆ, ನಾದಸ್ವರ. ಇನ್ನೊಂದೆಡೆ ವಧು- ವರರ ಬಂಧುಗಳು ಸಂಭ್ರಮದಿಂದ ಅತ್ತಿಂದಿತ್ತ ಓಡಾಡುತ್ತಿದ್ದರು. ಅತ್ತ ಬಲ ಭಾಗದಲ್ಲಿ ಮುಸ್ಲಿಂ ಸಮುದಾಯದಂತೆ ನಿಖಾಗೆ ಸಿದ್ಧತೆ ನಡೆದಿದ್ದು ವರನನ್ನು ಸಿಂಗರಿಸುವ ಕೆಲಸ ಭರದಿಂದ ಸಾಗಿತ್ತು.
ಮಧ್ಯಾಹ್ನ 11.30ರ ಸುಮಾರಿಗೆ ಪುರೋಹಿತರು ಮಂತ್ರಘೋಷ ಹಾಗೂ ಅದರ ಅರ್ಥವನ್ನು ವಿವರವಾಗಿ ತಿಳಿಸುತ್ತಾರೆ. ಹಿಂದೂ ಸಂಪ್ರದಾಯದಂತೆ 13 ಜೋಡಿ ವಿವಾಹ ನೆರವೇರಿಸಿದರು. ನಂತರ ನಿಖಾ ಕಾರ್ಯಕ್ರಮ ನಡೆಯಿತು.
ಇಲ್ಲಿ ಸತಿಪತಿಗಳಾದವರು ತೀರಾ ಬಡತನದ ಹಿನ್ನಲೆಯುಳ್ಳವರಾಗಿದ್ದು, ಪ್ರತಿಯೊಬ್ಬ ವಧು-ವರರನ್ನು ತಮ್ಮದೇ ಕುಟುಂಬದ ಸದಸ್ಯರಂತೆ ಭಾವಿಸಿ ಈ ಅದ್ಧೂರಿ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದರು.
ಮದುವೆ ವಿಶೇಷತೆ ಇಷ್ಟಕ್ಕೆ ಸೀಮಿತವಾಗಿರಲಿಲ್ಲ. ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗಳಿಗೆ ಆಯೋಜಕ ಸಂಘಟನೆಯವರು ತಾಳಿ, ವಧು-ವರರಿಗೆ ಬಟ್ಟೆ (ಸೀರೆ ಪಂಚೆ), ಪಾತ್ರೆಗಳು, ಬೀರು, ಹಾಸಿಗೆ, ವರನಿಗೆ ಶೂ, ವಾಚ್ಗಳನ್ನು ಬಳುವಳಿಯಾಗಿ ನೀಡಿದರು.
ಊಟವೂ ವಿಶೇಷತೆ: ಒಂದೆಡೆ ವಿವಾಹ ಮಹೋತ್ಸವ ನಡೆದರೆ ಮತ್ತೊಂದು ಕಡೆ ಊಟಕ್ಕೆ ಭರ್ಜರಿ ತಯಾರಿ ನಡೆದಿತ್ತು.
ಈ ಭಾವೈಕ್ಯತಾ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಕನಿಷ್ಠ 5 ಸಾವಿರ ಜನರು ಪಾಲ್ಗೊಳ್ಳಲಿದ್ದು, ಒಂದು ಕಡೆ ಮುಸ್ಲಿಂ ವಿವಾಹಕ್ಕೆ ಬೇಕಾಗುವ ಬಿರಿಯಾನಿ ಹಾಗೂ ಮತ್ತೊಂದು ಕಡೆ ಹಿಂದು ವಿವಾಹ ಮಹೋತ್ಸವದಲ್ಲಿ ನಡೆಯುವ ಬಾಳೆಎಲೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹಬೀಬ್ಖಾನ್ ತಿಳಿಸಿದರು.
ಬಡತನದಿಂದ ಅನೇಕರಿಗೆ ಮದುವೆ ಮಾಡಿಕೊಳ್ಳುವುದೇ ತ್ರಾಸ. ಅಂತಹವರನ್ನು ಹುಡುಕಿ ಅವರಿಗೆ ಈ ವೇದಿಕೆಯಲ್ಲಿ ಅವಕಾಶ ಮಾಡಿಕೊಡಲಾಯಿತು. ಎಲ್ಲೂ ಕೊರತೆ ಬಾರದಂತೆ ವ್ಯವಸ್ಥೆ ಮಾಡಲಾಗಿತ್ತು, ಎಲ್ಲರೂ ಸಂಭ್ರಮಿಸುತ್ತಿದ್ದಾರೆ ಎಂದು ಆಯೋಜನಾ ವ್ಯವಸ್ಥೆಯಲ್ಲಿದ್ದ ತಂಡದವರು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಪಕ್ಷದ ರಾಜಕೀಯ ನಾಯಕರು ಪಾಲ್ಗೊಂಡು ಶುಭ ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

