ಯಡಿಯೂರಪ್ಪ ಭ್ರಷ್ಟಾಚಾರಿ, ಮನೆ ಮುರುಕ
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.24
ಬಿ.ಎಸ್. ಯಡಿಯೂರಪ್ಪ ಸ್ವಾರ್ಥಿ, ಭ್ರಷ್ಟಾಚಾರಿ, ಮನೆಮುರುಕ, ಜಾತಿ ವಿಷ ಬೀಜ ಬಿತ್ತುವ ವ್ಯಕ್ತಿ ಎಂಬಿತ್ಯಾದಿಯಾಗಿ ಕೆ.ಎಸ್. ಈಶ್ವರಪ್ಪ ಆರೋಪಗಳ ಸುರಿಮಳೆಗೈದಿದ್ದಾರೆ.
ಭಾನುವಾರ ಎನ್,ಇಎಸ್ ಮೈದಾನದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ತಾವು ಲಿಂಗಾಯಿತ ಎಂದು ಹೇಳಿಕೊಂಡು ರಾಜ್ಯದಲ್ಲಿ ಜಾತಿಯ ವಿಷಯ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಜಾತಿಯ ಮೂಲಕ ಸಮಾಜ ಒಡೆಯುವ ಕೆಲಸ ಮಾಡುವ ಯಡಿಯೂರಪ್ಪರಂತಹ ವ್ಯಕ್ತಿಗಳನ್ನು ಜನತೆ ಒಪ್ಪುವುದಿಲ್ಲ ಎಂದರು.
ಎಲ್ಲಾ ಲಿಂಗಾಯಿತ ಮಠಾಧೀಶರ ಬೆಂಬಲ ತಮಗಿದೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಆದರೆ ಕೆಲವು ಲಿಂಗಾಯಿತ ಮಠಾಧೀಶರು ಯಾವುದೇ ಕಾರಣಕ್ಕೂ ಯಡಿಯೂರಪ್ಪರನ್ನು ಬೆಂಬಲಿಸುವುದಿಲ್ಲ ಎಂದು ತಮ್ಮ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಶಿವಮೊಗ್ಗ ಲೋಕಸಭಾ ಚುನಾವಣೆ ವೇಳೆ ಜಿಲ್ಲಾ ಬಿಜೆಪಿ ಸಮಿತಿ ಹೋರಾಟಗಾರನಿಗೆ ಟಿಕೆಟ್ ನೀಡುವ ತೀರ್ಮಾನ ಕೈಗೊಂಡಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಸ್ಪರ್ಧೆಗೆ ಅವಕಾಶ ನೀಡುವುದಿಲ್ಲ ಎಂದಿದ್ದರು. ಜೊತೆಗೆ ಆದಿಚುಂಚನಗಿರಿ ಮಠದ ಮುಂದೆ ಕೂಡ ಈ ಕುರಿತಂತೆ ದೇವರ ಮೇಲೆ ಆಣೆ ಮಾಡಿ ಹೇಳಿದ್ದರು.
ಮಗನಿಗೆ ಟಿಕೆಟ್: ಶಿವಮೊಗ್ಗದ ಅವರ ಕಾಲೇಜಿನಲ್ಲಿ ತಾವು ಸೇರಿದಂತೆ ಡಿ.ಎಚ್. ಶಂಕರಮೂರ್ತಿ ಸೇರಿ ಇತರೆ ಮುಖಂಡರ ಸಮ್ಮುಖದಲ್ಲಿ ರುದ್ರೇಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡುವುದಾಗಿ ಹೇಳಿ ಬಿ.ವೈ. ರಾಘವೇಂದ್ರರಿಂದ ಸಿಹಿ ತರಿಸಿ ತಿನ್ನಿಸಿದ್ದರು. ಆದರೆ ನಂತರ ಉಲ್ಟಾ ಹೊಡೆದ ಅವರು ದೆಹಲಿಯಲ್ಲಿ ಪ್ರಭಾವ ಬೀರಿ ತಮ್ಮ ಮಗನಿಗೆ ಟಿಕೆಟ್ ಕೊಡಿಸಿ ತಂದಿದ್ದರು. ಇಂತಹ ಸ್ವಾರ್ಥ ರಾಜಕಾರಣಿಯನ್ನು ಶಿವಮೊಗ್ಗದ ಜನತೆ ಒಪ್ಪುವುದಿಲ್ಲ ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ತಾವು ಜೈಲಿಗೆ ಹೋಗಲು ನಾನು, ಅನಂತಕುಮಾರ್, ಪದ್ದಣ, ಎಂದು ಅನೇಕ ಕಡೆ ಹೇಳಿದ್ದಾರೆ. ಆದರೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇವೆ, ಅವರು ಜೈಲಿಗೆ ಹೋಗಲು ನಾವ್ಯಾರು ಕಾರಣರಲ್ಲ. ಕಾನೂನುಬಾಹಿರ ಡಿನೋಟಿಫಿಕೇಷನ್, ಪ್ರೇರಣಾ ದೇಣಿಗೆ ಪ್ರಕರಣ ಸೇರಿದಂತೆ ಅವರು ನಡೆಸಿದ ಭ್ರಷ್ಟಾಚಾರವೇ ಜೈಲಿಗೆ ಹೋಗಲು ಕಾರಣವಾಯಿತು ಎಂದು ಹೇಳಿದರು.
ನಿಜ ವ್ಯಕ್ತಿತ್ವ: ಪ್ರೇರಣಾ ದೇಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಹಿರಿಯ ಮುಖಂಡ ಅರುಣ್ ಜೇಟ್ಲಿಯವರು ದೆಹಲಿಗೆ ಕರೆಸಿಕೊಂಡು ದೇಣಿಗೆ ರೂಪದಲ್ಲಿ ಬಂದಿದ್ದ ಚೆಕ್ ವಾಪಸ್ ನೀಡುವಂತೆ ಯಡಿಯೂರಪ್ಪಗೆ ಸಲಹೆ ನೀಡಿದ್ದರು. ಅವರೆದುರು ಒಪ್ಪಿಕೊಂಡ ಅವರು ಹೊರಗೆ ಬಂದು ಯಾವುದೇ ಕಾರಣಕ್ಕೂ ಚೆಕ್ ನೀಡುವುದಿಲ್ಲ ಎಂದರು. ಇದು ಅವರ ನಿಜ ವ್ಯಕ್ತಿತ್ವ ಎಂದು ಜರಿದರು.
ಕಾಂಗ್ರೆಸ್,ನವರು ಸಿಬಿಐ ಭಯ ಹುಟ್ಟಿಸುವ ಮೂಲಕ ನೀವು(ಬಿಎಸ್,ವೈ) ಬಿಜೆಪಿಯಿಂದ ಹೊರ ಬರುವಂತೆ ಮಾಡಿದರು. ಬಿಜೆಪಿಯನ್ನು ತುಂಡು ಮಾಡಿದರು.
ಮನೆ ಮುರುಕರು ನೀವು, ಬಿಜೆಪಿಯವರಲ್ಲ ಎಂದು ಯಡಿಯೂರಪ್ಪಗೆ ತಿರುಗೇಟು ನೀಡಿದರು.
ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡ ಈಶ್ವರಪ್ಪ, ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಒಮ್ಮೆ ಡಿ.ಎಚ್. ಶಂಕರಮೂರ್ತಿಯವರನ್ನು ಶಿವಮೊಗ್ಗದ ಪೆಟ್ರೋಲ್ ಬಂಕ್,ನಲ್ಲಿ ಭೇಟಿಯಾಗಿ ತಮ್ಮ ಕಷ್ಟವಿದೆ ಎಂದು ಹೇಳಿ ಐದು ಸಾವಿರ ರುಪಾಯಿ ಸಾಲ ಪಡೆದುಕೊಂಡಿದ್ದರು. ಇದನ್ನು ಸಹಿತ ಯಡಿಯೂರಪ್ಪ ಮರೆತು ಬಿಟ್ಟರು ಎಂದು ಕಟಕಿದರು.
ಹಿಂದೆ ಯಾರೂ ಇಲ್ಲ: ಬಿಎಸ್,ವೈ ಗುಡುಗಿದರೆ ವಿಧಾನಸೌಧ ನಡುಗುವುದು ಎಂದು ಕೂಗುತ್ತಿದ್ದಾಗ ಹಿಂದೆ ಯಾರೆಲ್ಲಾ ಇದ್ದರು, ಇಂದು ಜೈಲಿಗೆ ಹೊರಟಾಗ ಯಾರ್ಯಾರು ಇದ್ದಾರೆ ಎಂದು ನೋಡಿಕೊಳ್ಳಿ ಎಂದು ಲೇವಡಿ ಮಾಡಿದರು.
ಬಿಎಸ್,ವೈ ಒಬ್ಬ ಹೋರಾಟಗಾರ. ದೇವೇಗೌಡರೂ ಒಬ್ಬ ಹೋರಾಟಗಾರ. ಆದರೆ, ಅವರು ಬೇರೆ ಬೇರೆ ಕಾರಣಕ್ಕೆ ದಾರಿ ತಪ್ಪುತ್ತಿದ್ದಾರೆ. 50 ಸ್ಥಾನ ಗೆಲ್ಲಿಸಿ ಎಂಬ ಸವಾಲು ಸ್ವೀಕರಿಸುತ್ತೇವೆ. ನಾವು ಅಧಿಕಾರಕ್ಕೇರುವುದು ಖಚಿತ.
ನೀವು ಶಿಕಾರಿಪುರದಿಂದ ಗೆದ್ದಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸಬೇಡಿ. ಪ್ರತಿಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳಿ ಎಂದು ಕೈಮುಗಿದು ಕೇಳೊಳ್ಳುತ್ತೇನೆ ಎಂದು ಮರು ಸವಾಲೆಸೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

