ಶಿವಮೊಗ್ಗ

ಕಾಡುಪ್ರಾಣಿಗಳ ಹತ್ಯೆ: ತನಿಖೆಗೆ ಆಗ್ರಹ

Published On :

ಕಪ್ರವಾರ್ತೆ,ಚಿಕ್ಕಮಗಳೂರು,ಮಾ.29
ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಡುಪ್ರಾಣಿಗಳ ಹತ್ಯೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪರಿಸರ ಸಂಘಟನೆಗಳು ಅರಣ್ಯ ಇಲಾಖೆಯನ್ನು ಆಗ್ರಹಿಸಿವೆ.
 ಕೇರಳದ ಕೆಲವು ಕಡೆ ಇರುವ ಅಕ್ರಮ ಬೇಟೆಗಾರರ ಗುಂಪು ನರಸಿಂಹರಾಜಪುರ ವ್ಯಾಪ್ತಿಯಲ್ಲಿ ಹುಲಿಯನ್ನು ಕೊಂದಿರುವುದು ಬೆಳಕಿಗೆ ಬಂದರೂ ಅರಣ್ಯ ಇಲಾಖೆ ಸುದೀರ್ಘ ತನಿಖೆಗೆ ಮುಂದಾಗದೆ ನಿದ್ರಾಸ್ಥಿತಿಯಲ್ಲಿದೆ ಎಂದು ಭದ್ರಾ ವೈಲ್ಡ್ ಲೈಫ್ ಕನ್ವೆಷನ್ ಟ್ರಸ್ಟ್ನ ಡಿ.ವಿ. ಗಿರೀಶ್, ವೈಲ್ಡ್ ಕ್ಯಾಟ್- ಸಿಯ ಶ್ರೀದೇವ್  ಹುಲಿಕೆರೆ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸ. ಗಿರಿಜಾಶಂಕರ್ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
 ಕೇರಳದ ನಿಲಂಬೂರಿನ ಅರಣ್ಯ ಸಂಚಾರಿ ದಳ ಫೆಬ್ರವರಿ ತಿಂಗಳಲ್ಲಿ ಪತ್ತೆ ಹಚ್ಚಿ ತಿರುವನಂತಪುರದ ಅರಣ್ಯ  ಇಲಾಖೆಗೆ ನೀಡಿದ ಮಾಹಿತಿಯಂತೆ ಹುಲಿಯೊಂದನ್ನು ನರಸಿಂಹರಾಜಪುರದ ಬಳಿ ಬೇಟೆಯಾಡಿ ಸಾಯಿಸಿ,  ನಂತರ ಹುಲಿ ಚರ್ಮವನ್ನು ಕೇರಳದ ವ್ಯಕ್ತಿಗೆ ಮಾರಾಟ ಮಾಡಿರುವ ಪ್ರಕರಣದಲ್ಲಿ ಇಲಾಖೆ ವಹಿಸಿರುವ ಮೌನ ಜಿಲ್ಲೆಯ ಅರಣ್ಯ ಇಲಾಖೆ ಉಪೇಕ್ಷೆಗೆ ಹಿಡಿದ ಕನ್ನಡಿ ಎಂದಿದ್ದಾರೆ.
ಮಾರಾಟ ಮಾಡಿರುವುದು ಬೆಳಕಿಗೆ: ಹುಲಿ ಚರ್ಮವೊಂದನ್ನು ಕೇರಳದ ನಿಲಂಬೂರಿನ ಉತ್ತರ ವಿಭಾಗದಲ್ಲಿ ಸಿ.ಪಿ. ಇಕ್ಬಾಲ್ ಎಂಬವರ ಮನೆಯಲ್ಲಿರುವುದರ ಸುಳಿವು ಪಡೆದ ತಿರುವನಂತಪುರಂ ಗುಪ್ತಚರ ವಿಭಾಗ ಆ ಮಾಹಿತಿಯನ್ನು ನಿಲಂಬೂರ್ ಉತ್ತರ ಭಾಗದ ಅರಣ್ಯ ಇಲಾಖೆಗೆ ನೀಡಿತು. ಆ ಮಾಹಿತಿ ಅನುಸರಿಸಿ ದಾಳಿ ಮಾಡಿದಾಗ ಹುಲಿಯೊಂದನ್ನು  ನರಸಿಂಹರಾಜಪುರದ ಷಾಜಿ ಎಂಬಾತ ಕೊಂದು ಅದರ ಚರ್ಮ ತೆಗೆದು ಅದನ್ನು ರು. 1.50 ಲಕ್ಷ ಮೌಲ್ಯಕ್ಕೆ  ಇಕ್ಬಾಲ್ಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂತು. ಇದನ್ನು ಇಕ್ಬಾಲ್ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ  ತಿಳಿಸಿದ್ದಾನೆ. ಈ ಹುಲಿ ಚರ್ಮವನ್ನು ಮೂರು ವರ್ಷದ ಹಿಂದೆ ನರಸಿಂಹರಾಜಪುರದ ಷಾಜಿಯಿಂದ  ಪಡೆದಿರುವುದನ್ನು ಖಚಿತಪಡಿಸಿದ್ದಾನೆ ಎಂದಿದ್ದಾರೆ.
ಒಟ್ಟು 171 ಸೆಂ.ಮೀ. ಉದ್ದ, 69 ಸೆಂ.ಮೀ. ಅಗಲದ ಈ ಹುಲಿ ಚರ್ಮವನ್ನು ಕೇರಳದ ಪರಪ್ಪನಂಗಡಿಯ  ಶಿಬು ಎಂಬ ಮಧ್ಯವರ್ತಿಯ ಸಹಕಾರದಿಂದ ಷಾಜಿ ಮೂಲಕ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದ ಹೆಚ್ಚಿನ ತನಿಖೆಗೆ ಕೇರಳದ ಗುಪ್ತಚರ ವಿಭಾಗ ನರಸಿಂಹರಾಜಪುರಕ್ಕೆ ಬಂದಾಗ ಷಾಜಿ ತಪ್ಪಿಸಿಕೊಂಡು ಫಲಾಯನ ಮಾಡಿದ್ದಾನೆ.
ಜಾಗೃತರಾಗಿಲ್ಲ: ಪ್ರಕರಣ ಬೆಳಕಿಗೆ ಬಂದಾಕ್ಷಣ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ, ಪೊಲೀಸರು, ಅರಣ್ಯ ಗುಪ್ತಚರ  ವಿಭಾಗದ ಅಧಿಕಾರಿ, ಸಿಬ್ಬಂದಿ ಹೆಚ್ಚು ಜಾಗೃತರಾಗಬೇಕಾಗಿತ್ತು. ಆದರೆ, ಈ ಮೂರೂ ಇಲಾಖೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಲಘುವಾಗಿ ತೆಗೆದುಕೊಂಡಿವೆ ಎಂದು ದೂಷಿಸಿದ್ದಾರೆ.
ಹುಲಿ ಚರ್ಮ ಹೊಂದಿದ್ದು, ಅದನ್ನು ಕೇರಳದ ಇಕ್ಬಾಲ್ಗೆ ಮಾರಿರುವ ಷಾಜಿ 2010ರಲ್ಲಿ ಚಿರತೆ ಬೇಟೆ ಮತ್ತು ಚರ್ಮ ಹೊಂದಿರುವ ಆರೋಪದಲ್ಲಿ ಭದ್ರಾವತಿ ಅರಣ್ಯ ವಿಭಾಗದ ಕೈಗೆ ಸಿಕ್ಕಿ ಬಿದ್ದಿದ್ದು, ಆ ಪ್ರಕರಣದಲ್ಲಿ ಷಾಜಿ ಜಾಮೀನಿನ ಮೇಲೆ ಹೊರಬಂದಿದ್ದಾನೆ.
ಈತನ ಚಲನವಲನಗಳ ಮೇಲೆ ಕಣ್ಣಿಡಬೇಕಾಗಿದ್ದ ಜಿಲ್ಲೆಯ ಕೊಪ್ಪ ಅರಣ್ಯ ವಿಭಾಗದ ಅಧಿಕಾರಿಗಳು ಉಪೇಕ್ಷಿಸಿದ್ದರ ಫಲ ಷಾಜಿ ಮತ್ತೊಂದು ಹುಲಿ ಸಾಯಿಸಲು ಅನುಕೂಲವಾಯಿತು.
ಹಿಂದಿನಿಂದಲೂ ಜಿಲ್ಲೆಯ ವಿವಿಧ ಅರಣ್ಯ ವಿಭಾಗಗಳಲ್ಲಿ ಆನೆ ಸಾವಿನ ಪ್ರಕರಣಗಳಲ್ಲೂ, ಗಾಂಜಾ ಬೆಳೆ ಪ್ರಕರಣಗಳನ್ನು ಪೂರ್ಣವಾಗಿ ತನಿಖೆ ನಡೆಸಿಲ್ಲ. 2004-05ರಲ್ಲಿ ಒಟ್ಟು 6 ಆನೆಗಳು ಸಾವಪ್ಪಿದ್ದವು. ಅದರಲ್ಲಿ  2 ಪ್ರಕರಣಗಳಲ್ಲಿ ಬೇಟೆಗಾರರ ಕೃತ್ಯದಿಂದ ಸಾವನ್ನಪ್ಪಿರುವುದು ಸ್ಪಷ್ಟವಾಯಿತು. ಇಲ್ಲೂ ಅರಣ್ಯ ಇಲಾಖೆ  ಸುದೀರ್ಘ ತನಿಖೆಗೆ ಮುಂದಾಗಲಿಲ್ಲ. ಹುಲಿ ಸಾವಿನ ಪ್ರಕರಣ ವರದಿಯಾದಾಗಲೂ ಇದೇ ರೀತಿ ಉಪೇಕ್ಷೆ ಮುಂದುವರೆದಿದೆ.
ಹೊಂದಾಣಿಕೆ ಅವಶ್ಯ: ಅರಣ್ಯ ಇಲಾಖೆಯ ಎಲ್ಲಾ ವಿಭಾಗಗಳು ಒಟ್ಟಾಗಿ ಕುಳಿತು ಯೋಚಿಸದ ಪರಿಣಾಮ ಇಂದು ವನ್ಯಪ್ರಾಣಿಗಳ ಬೇಟೆ, ಅವುಗಳ ಚರ್ಮ ಹಾಗೂ ಇತರೆ ದೇಹದ ಭಾಗಗಳ ಮಾರಾಟದ ಜಾಲ ಸೃಷ್ಟಿಯಾಗಲು ಅವಕಾಶವಾಗಿದೆ. ಈ ಹಿನ್ನೆಲೆಯಲ್ಲಿ ಭದ್ರಾ ವನ್ಯಜೀವಿ ವಿಭಾಗ ಸೇರಿದಂತೆ ವಿವಿಧ ಅರಣ್ಯ ವಿಭಾಗಗಳಲ್ಲಿ ತಕ್ಷಣ ಒಂದು ಹೊಂದಾಣಿಕೆಯ ಅವಶ್ಯಕತೆ ಇದೆ. ತನಿಖೆಯನ್ನು ಅತ್ಯಂತ ಚುರುಕುಗೊಳಿಸಿ, ಅದಕ್ಕೆ ತಾರ್ಕಿಕ ಅಂತ್ಯ ಒದಗಿಸಬೇಕಾಗಿದೆ. ಕಾಡು ಹಾಗೂ ವನ್ಯಜೀವಿಗಳನ್ನು ರಕ್ಷಿಸಬೇಕಾದ ಅರಣ್ಯ ಇಲಾಖೆಯೇ ಉಪೇಕ್ಷೆ ತಳೆದರೆ, ಜಿಲ್ಲೆಯ ಅಕ್ರಮ ಬೇಟೆಗಾರರ, ಪ್ರಾಣಿಗಳ ಚರ್ಮ ಹಾಗೂ ದೇಹದ ಭಾಗಗಳನ್ನು ಮಾರಾಟ ಮಾಡುವವರಿಗೆ ಈ ಜಿಲ್ಲೆ ಒಂದು ಸ್ವರ್ಗವಾಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.