ದೇಶದ ಎಲ್ಲಾ ರಾಜ್ಯಗಳಿಗೂ ದ್ವಿ ಪೌರತ್ವ ಕಲ್ಪಿಸಲಿ
ಕ.ಪ್ರ.ವಾರ್ತೆ,ಶಿವಮೊಗ್ಗ,ಮಾ.31
ರಾಜ್ಯದ ಸ್ಥಿತಿ ಏನಾದರೂ ಸರಿ ನಮಗೆ ನೀರು ಕೊಡಿ ಎಂದು ಕೇಳುವ ತಮಿಳುನಾಡು ಸರ್ಕಾರದ ಮಾತನ್ನು ಕೇಂದ್ರ ಸರ್ಕಾರ ಮಾತ್ರವಲ್ಲ ನ್ಯಾಯಾಂಗ ವ್ಯವಸ್ಥೆಯೂ ಒಪ್ಪುತ್ತದೆ ಎಂದರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎಂದು ಸಾಹಿತಿ ಡಾ. ಪಿ.ವಿ. ನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕರ್ನಾಟಕ ಸಾಹಿತ್ಯ ಪರಿಷತ್ ಭಾನುವಾರ ಕಮಲಾ ನೆಹರು ಮಹಿಳಾ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಎಚ್.ಎಂ. ಮಲ್ಲಿಕಾರ್ಜುನಪ್ಪ ಸೇವಾ ಪ್ರತಿಷ್ಠಾನ ದತ್ತಿ ಅಂಗವಾಗಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಮರುಚಿಂತನೆ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು
ಕೇಂದ್ರ ಸರ್ಕಾರ ನಿಂತಿರುವುದು ಕೇವಲ ಮೂರು ರಾಜ್ಯಗಳ ರಾಜಕೀಯ ಪಕ್ಷಗಳ ಆಧಾರದ ಮೇಲೆ. ಸರ್ಕಾರ ಈ ಮೂರು ರಾಜ್ಯಗಳನ್ನೇ ಇಡೀ ಭಾರತ ಎಂದು ಭಾವಿಸಿದಂತಿದೆ. ಇದೇ ಕಾರಣದಿಂದಾಗಿಯೇ ಹಲವು ರಾಜ್ಯಗಳಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಿಗರಿಗೆ ಅನ್ಯಾಯ: ಕಾಶ್ಮೀರದಂತೆ ದ್ವಿಪೌರತ್ವವನ್ನು ಎಲ್ಲಾ ರಾಜ್ಯದ ಪ್ರಜೆಗಳಿಗೂ ಕಲ್ಪಿಸಬೇಕು. ಆಗ ಮಾತ್ರ ಜಾಗತೀಕರಣದ ದಿನಗಳಲ್ಲಿ ಪ್ರತಿಯೊಬ್ಬರೂ ಜೀವನ ನಡೆಸಲು ಸಾಧ್ಯವಾಗುತ್ತದೆ. ಇಂದು ರಾಜ್ಯದ ರಾಜಧಾನಿಯಲ್ಲಿ ಕನ್ನಡಿಗರಿಗಿಂತ ಅನ್ಯ ಭಾಷಿಗರು ಹೆಚ್ಚಾಗಿದ್ದಾರೆ. ಇದ್ದರಿಂದ ಕನ್ನಡಿಗರೇ ಕನ್ನಡಿಗರನ್ನು ಕೆಲಸದಿಂದ ತೆಗೆದು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕೇಂದ್ರ ಸರ್ಕಾರ ನಮ್ಮಿಂದ ತೆರಿಗೆ ವಸೂಲಿ ಮಾಡಿ ಈ ಹಣವನ್ನೇ ಅನುದಾನದ ರೂಪದಲ್ಲಿ ರಾಜ್ಯಕ್ಕೆ ನೀಡುವಾಗ ಭಿಕ್ಷೆ ನೀಡುವಂತೆ ಕೊಡುತ್ತದೆ. ಈ ಸಂದರ್ಭದಲ್ಲಿ ಯಾವ ರಾಜ್ಯದಿಂದ ತೆರಿಗೆ ರೂಪದಲ್ಲಿ ಎಷ್ಟು ಆದಾಯ ಬಂದಿದೆ ಎಂಬುದನ್ನು ಪರಿಗಣಿಸುವುದೇ ಇಲ್ಲ. ಇದರಿಂದಾಗಿ ಹೆಚ್ಚು ತೆರಿಗೆ ಕಟ್ಟಿದ ರಾಜ್ಯಗಳು ಕಡಿಮೆ ಅನುದಾನ ಪಡೆಯುವಂತಾಗಿದೆ. ಆದ್ದರಿಂದ ವಿಕೇಂದ್ರಿಕರಣ ವ್ಯವಸ್ಥೆ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.
ಭಾರತದ ಒಕ್ಕೂಟದಿಂದ ಬಿಟ್ಟುಬಿಡಿ: ಕೇಂದ್ರ ಸರ್ಕಾರ ಹಣಕಾಸು, ಸೈನ್ಯ, ವಿದೇಶಾಂಗ ಈ ಮೂರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಇಲಾಖೆಗಳನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಬೇಕು.
ಆಗ ಮಾತ್ರ ಒಕ್ಕೂಟ ವ್ಯವಸ್ಥೆಯಲ್ಲಿನ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಲು ಸಾಧ್ಯ ಎಂದ ಅವರು, ಹಿಂದಿ ಭಾಷೆ ಬರುವುದಿಲ್ಲ ಎಂದರೆ ಆತ ಭಾರತೀಯ ಅಲ್ಲ ಎನ್ನುವುದಾದರೆ, ಆರು ಕೋಟಿ ಕನ್ನಡಿಗರನ್ನು ಭಾರತದ ಒಕ್ಕೂಟದಿಂದ ಬಿಟ್ಟುಬಿಡಿ.
ಎರಡು ಕೋಟಿ ಜನಸಂಖ್ಯೆ ಹೊಂದಿರುವ ಜಪಾನ್ ದೇಶವೇ ಪ್ರಪಂಚದಲ್ಲಿ ಪ್ರಬಲ ರಾಷ್ಟ್ರವಾಗಿ ಬೆಳೆದಿರುವಾಗ ಆರು ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕ ಪ್ರಬಲವಾಗಿ ಬೆಳೆಯಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ವೈಯಕ್ತಿಕ ಹಿತಾಸಕ್ತಿಗಾಗಿ ಪ್ರಾದೇಶಿಕ ಪಕ್ಷ: ಭಾಷೆ, ನೆಲ, ಜಲ ಈ ಭಾವನೆಯನ್ನಿಟ್ಟುಕೊಂಡು ಯಾವುದೇ ಪ್ರಾದೇಶಿಕ ಪಕ್ಷಗಳು ರಾಜ್ಯದಲ್ಲಿ ಹುಟ್ಟಿಕೊಂಡಿಲ್ಲ. ಯಾವುದೋ ಪಕ್ಷದಿಂದ ಭಿನ್ನಮತಿಯರಾಗಿ ಹೊರಬಂದವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಪ್ರಾದೇಶಿಕ ಪಕ್ಷ ಕಟ್ಟಿಕೊಂಡಿದ್ದಾರೆ.
ಈ ರೀತಿಯ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ವೀರಣ್ಣ, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಎಚ್.ಎಂ. ಮಲ್ಲಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

