ಸಿರಿಗೆರೆ ಶ್ರೀಗಳ ಆಶಯದಂತೆ ಚುನಾವಣೆ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.31
ಸಿರಿಗೆರೆಯ ಶಿವಮೂರ್ತಿ ಶಿವಚಾರ್ಯ ಸ್ವಾಮಿಯವರ ಆಶಯದಂತೆ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಬಿಜೆಪಿ ಭಾನುವಾರ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಚುನಾವಣಾ ಸಮಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ ಸಿರಿಗೆರೆ ಶ್ರೀಗಳು, ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಜಾತಿ, ಹಣದ ಆಮಿಷಗಳನ್ನು ನೀಡದೇ ಚುನಾವಣಾ ಪ್ರಚಾರ ಮಾಡಿ ಎಂದು ತಿಳಿಸಿದ್ದಾರೆ. ಅದರಂತೆ ಈ ಬಾರಿಯ ಚುನಾವಣೆಯಲ್ಲಿ ಮತದಾರನಿಗೆ ಯಾವುದೇ ಆಮಿಷ ನೀಡದೆ ಚುನಾವಣೆ ನಡೆಸುವುದಾಗಿ ಭರವಸೆ ನೀಡುತ್ತೇವೆ ಎಂದರು.
ಮುಚ್ಚಳಿಕೆ ಪತ್ರ: ರಾಜ್ಯದ 224 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯಲ್ಲಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳಿಂದ ಸಿರಿಗೆರೆ ಶ್ರೀಗಳ ವಿಳಾಸಕ್ಕೆ ಮತದಾರನನ್ನು ಯಾವುದೇ ಅಮಿಷಕ್ಕೆ ಒಡ್ಡದೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮುಚ್ಚಳಿಕೆ ಪತ್ರ ಬರೆಸಿ ಪೋಸ್ಟ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ಇದ್ದಂತಹ ವಾತಾವರಣ ಈ ಬಾರಿಯ ಚುನಾವಣೆಯಲ್ಲಿ ಇಲ್ಲ. ಸ್ಪಲ್ಪ ವಾತಾವರಣ ಬದಲಾಗಿದ್ದು, ಬಿಜೆಪಿಯಿಂದ ಕೆಜೆಪಿ, ಬಿಎಸ್ಆರ್ ಎಂದು ಎರಡು ಪಕ್ಷಗಳು ಹುಟ್ಟಿಕೊಂಡಿವೆ. ಆದರೂ ಬಿಜೆಪಿಯ ಶಕ್ತಿ ಕುಂದಿಲ್ಲ. ಕಾರ್ಯಕರ್ತರ ಕೊರತೆಯು ಪಕ್ಷಕ್ಕಿಲ್ಲ. ಬದಲಿಗೆ ಇದ್ದರಿಂದ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ, ಇಂದು ಅವರು ಪಕ್ಷದ ತಾತ್ವಿಕ ಭಿನ್ನಾಭಿಪ್ರಾಯಗಳಿಂದ ಪಕ್ಷ ತೊರೆದಿಲ್ಲ.
ವೈಯಕ್ತಿಕ ನಿಲುವು, ಹಠಮಾರಿ ಧೋರಣೆಯನ್ನು ಸಾಧಿಸಲು ಪಕ್ಷ ತೊರೆದಿದ್ದಾರೆ ಎಂದ ಅವರು, ಕಾಂಗ್ರೆಸ್ ಸಂಸದರ ಹಗರಣವನ್ನು ಬಿಜೆಪಿ ಸಂಸತ್ನಲ್ಲಿ ಪ್ರಶ್ನೆ ಮಾಡುವಾಗ ಕರ್ನಾಟಕ ಎಂದು ಕೈ ತೋರಿಸಬಾರದು ಎಂಬ ಕಾರಣಕ್ಕೆ ಅವರನ್ನು(ಬಿಎಸ್ವೈ ಅವರನ್ನು) ಸಿಎಂ ಸ್ಥಾನದಿಂದ ರಾಜಿನಾಮೆ ನೀಡಲು ತಿಳಿಸಿದ್ದು ಎಂದರು.
ಬಿಜೆಪಿಯಲ್ಲಿ ವಿಗಂಡನೆಯಾಗಬಾರದು ಎಂದು ಬಿ.ಎಸ್. ಯಡಿಯೂರಪ್ಪರ ಮಾತು ಕೇಳಿ ಡಿ.ವಿ. ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡಲಾಯಿತು.
ಮೂರು ತಿಂಗಳ ನಂತರ ಬಿಎಸ್ವೈ ಅವರು ಸದಾನಂದಗೌಡರನ್ನು ಇಳಿಸಿ ಜಗದೀಶ್ ಶೆಟ್ಟರ್ರನ್ನು ಸಿಎಂ ಮಾಡುವಂತೆ ಹೇಳಿದ್ದರು. ನಂತರದ ಮೂರು ತಿಂಗಳಲ್ಲಿ ಶೆಟ್ಟರ್ ಅವರನ್ನು ಕೆಳಗಿಳಿಸುವಂತೆ ಪಕ್ಷದ ವರಿಷ್ಠರನ್ನು ದುಂಬಾಲು ಬಿದ್ದಿದ್ದರು. ಇದನ್ನು ಒಪ್ಪದ ವರಿಷ್ಠರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕೆಲಸ ಮಾಡಬಾರದು ಎಂದು ಸೂಚಿಸಿದರಲ್ಲದೇ, ಆರೋಪ ಮುಕ್ತವಾದ ನಂತರ ನಿಮ್ಮನೇ ಸಿಎಂ ಮಾಡುತ್ತೇವೆ ಎಂದಿದ್ದರು. ಆದರೆ, ಯಡಿಯೂರಪ್ಪ ಒಪ್ಪಲಿಲ್ಲ ಎಂದು ತಿಳಿಸಿದರು.
ಲೇವಡಿ: ಪ್ರಸುತ್ತ ಬಿಎಸ್ವೈ ಅವರ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆಯಾಗಿವೆ. ನನನ್ನು ಹೊರತುಪಡಿಸಿ ಯಾವುದೇ ಸರ್ಕಾರ ರಚನೆಯಾಗಲ್ಲ ಎಂಬ ಹೇಳಿಕೆ ಹಾಸ್ಯಾಸ್ಪದವಾಗಿದೆ. ಈ ಹೇಳಿಕೆಯಿಂದ ಅವರು ಸಿಎಂ ಆಗುವುದಿಲ್ಲ. ಬದಲಿಗೆ ನಮ್ಮ ಪಕ್ಷ ಒಂದಿಷ್ಟು ಸೀಟುಗಳನ್ನು ಗೆಲ್ಲುತ್ತದೆ. ನಮ್ಮೊಂದಿಗೆ ಯಾರಾದರೂ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿ ಎಂದು ತಿಳಿದುಬರುತ್ತದೆ. ಒಂದು ವೇಳೆ ಬೇರೆ ಪಕ್ಷಗಳಿಗೆ ಬಹುಮತ ಬಂದು ನಿಮ್ಮ ಹೊಂದಾಣಿಕೆ ಬೇಡ ಎಂದರೆ ಯಡಿಯೂರಪ್ಪ ಅವರ ಸ್ಥಿತಿ ಅತಂತ್ರವಾಗಲಿದೆ. ಇದು ಬಿಜೆಪಿಗೆ ನೋವಿನ ಸಂಗತಿ ಎಂದು ಲೇವಡಿ ಮಾಡಿದರು.
ಈ ದೇಶದಲ್ಲಿ ಬಿಜೆಪಿಗೆ ಬದ್ಧ ವೈರಿ ಎಂದರೆ ಕಾಂಗ್ರೆಸ್ ಮಾತ್ರ. ಆದರೆ, ಯಡಿಯೂರಪ್ಪ ಕಾಂಗ್ರೆಸ್ನ್ನು ಬಲಪಡಿಸಲು ಮುಂದಾಗಿರುವುದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ. ಯಡಿಯೂರಪ್ಪ ಇಲ್ಲದ ಬಿಜೆಪಿ ಸ್ಥಿತಿ ಹೇಗೆ ಎನ್ನುವ ಬಿಎಸ್ವೈ ಹೇಳಿಕೆ, ಅದೇ ರೀತಿ ಬಿಎಸ್ವೈ ಇಲ್ಲದ ಬಿಜೆಪಿ ಹೇಗೆ ಅಧಿಕಾರಕ್ಕೆ ಬರುತ್ತದೆ ಎಂದು ಕೆಜೆಪಿಗೆ ತೋರಿಸಬೇಕಿದೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಸಜ್ಜಾಗಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕು ಎಂದು ತಿಳಿಸಿದರು.
ಅಧಿಕಾರಕ್ಕೆ ತರಲು ಶ್ರಮಿಸಿ: ಜಿಲ್ಲೆಯ ಚುನಾವಣಾ ನಿರ್ವಾಹಣಾ ಸಮಿತಿಯಲ್ಲಿ 15 ವಿಭಾಗಗಳು ಮಾಡಲಾಗಿದ್ದು, ಪ್ರಾಮಾಣಿಕ ಕಾರ್ಯಕರ್ತರಿಂದ ತಂಡಗಳನ್ನು ರಚಿಸಿ ಫಲಿತಾಂಶ ಬರುವವರೆಗೆ ಶ್ರಮಿಸಲಿದ್ದಾರೆ. ಪ್ರಚಾರದಲ್ಲಿ ಸಣ್ಣ ವಿವಾದವು ಬಾರದಂತೆ ಜಾಗ್ರತೆ ವಹಿಸಿ ಪ್ರಚಾರ ಮಾಡುವುದರೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ಪದಣ್ಣ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

