ಶಿವಮೊಗ್ಗ

ಕಾಂಗ್ರೆಸ್ ನೀತಿಗೆ ಧಿಕ್ಕಾರ: ಈಶ್ವರಪ್ಪ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 1
ದಲಿತರಿಗೆ ಯಾವುದೇ ಸೌಲಭ್ಯ ನೀಡದೆ ಚುನಾವಣೆ ವೇಳೆ ಮತ ನೀಡಬೇಕು ಎಂದು ಪ್ರತಿಪಾದಿಸುವ ಕಾಂಗ್ರೆಸ್‌ನ ನೀತಿಗೆ ನಮ್ಮೆಲ್ಲರ ಧಿಕ್ಕಾರವಿರಲಿ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಎಸ್.ಸಿ. ಮೋರ್ಚಾದಿಂದ ನಗರದ ಕುರುಬರ ವಿದ್ಯಾರ್ಥಿನಿಲಯದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಎಸ್.ಸಿ. ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೀಸಲಾತಿ ದಲಿತರ ಹಕ್ಕು. ಅದನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್ ದಲಿತರ ಮೀಸಲಾತಿಯಲ್ಲಿ ತಾರತಮ್ಯ ಮಾಡಿ ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
700 ಕೋಟಿ ಮೀಸಲು: ದಲಿತರೆಂದರೆ ಸ್ವಾಭಾವಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾಗವರು ಎಂಬ ಕಾಲವಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲಾ ವರ್ಗದವರನ್ನು ಸಮಾನತೆಯಿಂದ ಕಾಣುತ್ತಿದೆ. ಸಮಾಜದಲ್ಲಿ ಯಾವುದೇ ವರ್ಗ, ಸಮುದಾಯವಾಗಲಿ ಸ್ವಾಭಿಮಾನಿ ಬದುಕು ನಡೆಸುವುದು ಬಹುಮುಖ್ಯ. ದಲಿತರ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಸುಮಾರು 700 ಕೋಟಿಗಳನ್ನು ವೀಸಲಿಟ್ಟಿತ್ತು ಎಂದರು.
ದಲಿತರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಭೋವಿ ಜನಾಂಗದ ಅಭಿವೃದ್ಧಿ ನಿಗಮದಡಿಯಲ್ಲಿ ತಲಾ 25 ಕೋಟಿ ಹಾಗೂ ಬಂಜಾರ ಜನಾಂಗದ ಅಭಿವೃದ್ಧಿಗಾಗಿ 50 ಕೋಟಿಯನ್ನು ಮೀಸಲಿಟ್ಟಿದೆ ಎಂದ ಅವರು, ಮುಂದಿನ ವರ್ಷಗಳಲ್ಲಿ ಹಿಂದುಳಿದ ವರ್ಗದವರನ್ನು ಸಮಾಜ ಮುಖ್ಯವಾಹಿನಿಗೆ ತರುವುದಕ್ಕಾಗಿ ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಸಮಾನ ಜೀವನ ಮಾಡಿ: ಸುಪ್ರೀಂಕೋರ್ಟ್‌ನ ಆದೇಶವಿದ್ದರೂ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಸಂವಿಧಾನ ತಿದ್ದುಪಡಿಮಾಡಿ ಮೀಸಲಾತಿ ನೀಡಿದ್ದರು ಎಂದ ಅವರು, ದಲಿತರಲ್ಲಿ ನಾವು ಕೀಳು ಜಾತಿಯಲ್ಲಿ ಹುಟ್ಟಿದ್ದೇವೆ ಎಂಬ ಮನೋಭಾವನೆ ಕಡಿಮೆಯಾಗಬೇಕು. ಎಲ್ಲರಂತೆ ಸಮಾನವಾಗಿ ಬಾಳುವುದನ್ನು ಕಲಿಯಬೇಕು ಎಂದರು.
ರಾಜ್ಯದಲ್ಲಿ 350 ಹಿಂದುಳಿದ ವರ್ಗದ ಹಾಸ್ಟೆಲ್ ನಿರ್ಮಾಣ ಮಾಡಲು ಈಗಾಗಲೇ 700 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದವರಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರ 1ರಿಂದ ಪದವಿವರೆಗೆ ಉಚಿತ ವಸತಿಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ದಲಿತರ, ಹಿಂದುಳಿದ ವರ್ಗಗಳ ಅಭಿವೃದ್ಧಿ ಮಾಡಲಿಲ್ಲ. ಬದಲಾಗಿ ಚುನಾವಣೆಯಲ್ಲಿ ಮತ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡಿತ್ತು. ಆದರೆ, ಬಿಜೆಪಿ ಹಾಗೆಲ್ಲಾ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಸಂಸದ ಆಯನೂರು ಮಂಜುನಾಥ, ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ಎ. ನಟರಾಜ್, ಶಿವರಾಜ್, ಎಸ್. ಜ್ಞಾನೇಶ್ವರ, ಮಂಡೇನಕೊಪ್ಪ ದೇವರಾಜ್, ಎಚ್.ಮೂರ್ತಿ, ಮಹಾಲಕ್ಷ್ಮೀ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.