ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ
ಕ.ಪ್ರ.ವಾರ್ತೆ ಶಿವಮೊಗ್ಗ ಮೇ 2
ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಅಧಿಕಾರ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸ್.ಪಿ. ದಿನೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಿಂದ ಬೇರ್ಪಟ್ಟು ಬಿಎಸ್‌ಆರ್ ಮತ್ತು ಕೆಜೆಪಿ ಹುಟ್ಟಿಕೊಂಡಿವೆ. ಇದರಿಂದ ಬಿಜೆಪಿಯ ಮತಗಳು ಛಿದ್ರವಾಗಲಿದ್ದು, ಇದು ಕಾಂಗ್ರೆಸ್‌ಗೆ ಲಾಭವಾಗಿ ಪರಿಣಮಿಸಲಿದೆ ಎಂದರು.
ಕಾಂಗ್ರೆಸ್ ಜಯ: ಬಿಜೆಪಿ ಕಳೆದ 5 ವರ್ಷಗಳಲ್ಲಿ ನಡೆಸಿದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಇದರಿಂದ ಜಿಲ್ಲೆಯ ಎಲ್ಲಾ 7 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಬಾರಿ ಕಾಂಗ್ರೆಸ್ ಜಯಗಳಿಸಲಿದೆ. ಕಾಂಗ್ರೆಸ್‌ವೊಂದೆ ಸ್ವಚ್ಛ, ಸುಭದ್ರ ಹಾಗೂ ದಕ್ಷ ಆಡಳಿತ ನೀಡಲು ಸಾಧ್ಯ ಎಂಬುದನ್ನು ಜನ ತಿಳಿದಿದ್ದಾರೆ ಎಂದರು.
ನಾಯಕರು ಪ್ರವಾಸ: ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಪ್ರವಾಸ ನಡೆಸಿದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದ ಅವರು, ಚಿಕ್ಕಮಗಳೂರಿಗೆ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಪ್ರಚಾರ ಮಾಡಲು ಆಗಮಿಸಿದ್ದರಿಂದ ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಅವರ ಪ್ರವಾಸ ರದ್ದಾಯಿತು. ಇದನ್ನು ಜನ ಬೇರೆ ರೀತಿ ಅರ್ಥೈಸಿಕೊಳ್ಳುವುದು ಬೇಡ ಎಂದು ಮನವಿ ಮಾಡಿದರು.
ಅಪಪ್ರಚಾರ: ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್ ಪರ ಜಿಲ್ಲೆಯ ಕೆಲ ಕಾಂಗ್ರೆಸ್ ನಾಯಕರು ಕೆಲಸ ಮಾಡುತ್ತಿಲ್ಲ, ಪ್ರಚಾರದಲ್ಲಿಯೂ ಹಿಂದೆ ಬಿದಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇಂತಹ ಸುಳ್ಳು ವಂದಂತಿಗಳಿಗೆ ಮತದಾರರು ಕಿವಿಗೊಡಬಾರದು. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರು ಒಟ್ಟಾಗಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ದಾರಿ ತಪ್ಪಿಸುತ್ತಿದ್ದಾರೆ: ಬಿಜೆಪಿ ಮತ್ತು ಕೆಜೆಪಿ ಅಭ್ಯರ್ಥಿಗಳು ಸೋಲಿನ ಭೀತಿಯಿಂದ ಗುರುವಾರ ಮತ್ತು ಶುಕ್ರವಾರ ರಾತ್ರಿ ಮತದಾರರಿಗೆ ಹಣ, ಹೆಂಡ ಮತ್ತು ಸೀರೆ ಹಂಚಲು ಸಿದ್ದರಾಗಿದ್ದು, ಮತದಾರರಿಗೆ ಇಂತಹ ಆಮಿಷವೊಡ್ಡಿ ದಾರಿ ತಪ್ಪಿಸುತ್ತಿದ್ದಾರೆ ಎಂದರಲ್ಲದೇ, ಈ ಬಗ್ಗೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಈ ಸಂಬಂಧ ಕಾಂಗ್ರೆಸ್ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುತ್ತಿದೆ ಎಂದರು.
ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಸೈಯದ್ ವಾಹೀದ್ ಅಡ್ಡು ಮಾತನಾಡಿ, ಅಲ್ಪಸಂಖ್ಯಾತರು ಕಳೆದ ಬಾರಿ ಬಿಜೆಪಿಗೆ ಬೆಂಬಲಿಸಿದ್ದರು. ಆದರೆ, ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ. ಕೆಜೆಪಿ, ಬಿಜೆಪಿ ನೀಡುವ ಹಣ ಹೆಂಡ, ಸೀರೆಯಂತಹ ಆಮಿಷಕ್ಕೆ ಜನತೆ ಬಲಿಯಾಗುವುದಿಲ್ಲ. ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ಎಚ್.ಎಂ. ಸತ್ಯನಾರಾಯಣ, ಕೆ. ದೇವೇಂದ್ರಪ್ಪ, ಶಿವಾನಂದ್, ಕೆ. ರಂಗನಾಥ, ಉಸ್ಮಾನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

