'ಎಚ್ಡಿಕೆಗೆ ಧನಾತ್ಮಕ ಸ್ಪಂದನೆ'
ಭದ್ರಾವತಿ: ಚುನಾವಣೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ತಾವು ಸುಮಾರು ಹತ್ತು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಎಚ್.ಡಿ. ಕುಮಾರಸ್ವಾಮಿಯವರಿಗೆ ಯುವಜನರು ಮತ್ತು ಹಿರಿಯ ನಾಗರಿಕರು ಧನಾತ್ಮಕವಾಗಿ ಸ್ಪಂದಿಸುತ್ತಿರುವುದು ಕಂಡುಬಂದಿದೆ ಎಂದು ರಾಜ್ಯ ಕ್ರೈಸ್ತ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಡೇವಿಡ್ ಸಿಮಿಯೋನ್ ತಿಳಿಸಿದರು.
ಗುರುವಾರ ಜೆಡಿಎಸ್ ರಾಜ್ಯ ಕ್ರೈಸ್ತ ಅಲ್ಪಸಂಖ್ಯಾತರ ವಿಭಾಗದ ಭದ್ರಾವತಿ ಘಟಕ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಹುಮತ ಖಚಿತ: ಜೆಡಿಎಸ್ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 100 ಕ್ಕೂ ಹೆಚ್ಚು ಸ್ಥಾನ ಪಡೆದು ಬಹುಮತ ಪ್ರದರ್ಶಿಸುವತ್ತ ದಾಪುಗಾಲಿಡುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಷ್ಟ್ರ ರಾಜಕೀಯದಲ್ಲಿ ಕರ್ನಾಟಕ ಒಂದು ಪ್ರಯೋಗಶಾಲೆಯಂತಿದ್ದು, ಹಲವು ರಾಜಕೀಯ ತಿರುವುಗಳಿಗೆ ಸಾಕ್ಷಿಯಾಗಿದೆ ಎಂದರು.
ಭದ್ರಾವತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಯವರ ಪರವಾದ ಅಲೆಯಿದೆ. ಹಾಗಾಗಿ ಅವರ ಗೆಲವು ಖಚಿತ. ಸಿ.ಎಂ. ಇಬ್ರಾಹಿಂ ಅವರನ್ನು ದೇವೇಗೌಡರು ಕೈಹಿಡಿದು ಮೇಲೆತ್ತಿದರೂ ಮಾಡಬಾರದ ಕೆಲಸ ಮಾಡಿದ್ದರಿಂದ ಅವರನ್ನು ಅನಿವಾರ್ಯವಾಗಿ ಹೊರಗಿಡಬೇಕಾಯಿತು ಎಂದರು. ದೌರ್ಬಲ್ಯ ದುರ್ಬಳಕೆ: ಕ್ರೈಸ್ತರು ಹಿಂದೆ ಕಣ್ಣು ಮುಚ್ಚೊಕಂಡು ಸ್ವಾಭಾವಿಕವಾಗಿ ಕಾಂಗ್ರೆಸ್ಗೆ ಮತ ನೀಡುತ್ತಿದ್ದರು. ಕ್ರೈಸ್ತರು ಎಂದೂ ರಾಜಕೀಯ ಲಾಭ ಪಡೆಯುವ ಕೆಲಸ ಮಾಡಿಲ್ಲ. ಕಾಂಗ್ರೆಸ್ ಅವರ ಈ ದೌರ್ಬಲ್ಯ ದುರ್ಬಳಕೆ ಮಾಡಿಕೊಂಡಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಭದ್ರಾವತಿ ತಾಲೂಕಿನಲ್ಲಿ ಒಂದು ಕ್ರೈಸ್ತ ಸಮುದಾಯ ಭವನ ಕಟ್ಟಿಸಿಕೊಡಲಾಗುವುದು ಎಂದು ಆಶ್ವಾಸನೆ ನೀಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಕರುಣಾಮೂರ್ತಿ, ರಾಜ್ಯ ಯುವ ಜೆಡಿಎಸ್ ಉಪಾಧ್ಯಕ್ಷ ಅಂತೋಣಿ ವಿಲ್ಸನ್, ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತ ವಿಭಾಗದ ಭದ್ರಾವತಿ ಘಟಕದ ಅಧ್ಯಕ್ಷ ಜೆ. ಭಾಸ್ಕರ್, ಸಾಮ್ಯುಯಲ್, ಸಾವಿತ್ರಮ್ಮ ಮೊದಲಾದವರು ಇದ್ದರು.
ಇಂದು ಬಿಎಸ್ವೈ ಸುದೀರ್ಘ ರ್ಯಾಲಿ
ಶಿವಮೊಗ್ಗ: ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆ ಚುನಾವಣೆ ಪ್ರಚಾರದ ಅಂತಿಮ ದಿನವಾದ ಶುಕ್ರವಾರ ಬೆಳಿಗ್ಗೆ ಕೆಜೆಪಿ ಅಭ್ಯರ್ಥಿ ಎಸ್. ರುದ್ರೇಗೌಡ ಪರ ನಗರಾದ್ಯಂತ ಸುದೀರ್ಘ ರ್ಯಾಲಿ ನಡೆಸಲಿದ್ದಾರೆ. ಬೆಳಿಗ್ಗೆ 7.30ಕ್ಕೆ ಸಹ್ಯಾದ್ರಿ ಕಾಲೇಜಿನಿಂದ ಆರಂಭವಾಗಲಿರುವ ಈ ರ್ಯಾಲಿ ನಗರದ ಬಹುತೇಕ ಎಲ್ಲಾ ವಾರ್ಡ್ಗಳನ್ನು ತಲುಪಿ ಕೊನೆಗೆ ವಿನೋಬ ನಗರ ಡಿವಿಎಸ್ ಶಾಲೆ ಮೈದಾನದಲ್ಲಿ ಕೊನೆಯಾಗಲಿದೆ. ಸರಿಸುಮಾರು 16 ಕಿಲೋ ಮೀಟರ್ ದೂರ ಈ ರ್ಯಾಲಿ ಸಾಗಲಿದೆ.
ಇಂದು ಜಾಗೃತಿಗೆ ರೋಡ್ ಶೋ
ಸೊರಬ: ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಕ್ಷೇತ್ರದ ಮತದಾರರು ತಪ್ಪದೆ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲು ರೋಡ್ ಶೋ ಆಯೋಜಿಸಲು ಚುನಾವಣಾ ಆಯೋಗ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ತಾಲೂಕು ಕಚೇರಿ ಸಿಬ್ಬಂದಿ, ಸಂಘ ಸಂಸ್ಥೆಯವರು, ಸಾರ್ವಜನಿಕರು ತಾಲೂಕು ಕಚೇರಿ ಆವರಣದಲ್ಲಿ ಹಾಜರಾಗಿ ಶೋನಲ್ಲಿ ಭಾಗವಹಿಸಲು ಸಹಾಯಕ ಚುನಾವಣಾಧಿಕಾರಿ ಕೋರಿದ್ದಾರೆ.
ಚುನಾವಣೆ ಹಿನ್ನೆಲೆ ಶುಷ್ಕದಿನ ಘೋಷಣೆ
ಶಿವಮೊಗ್ಗ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ 5ರಂದು ಮತದಾನ ನಡೆಯಲಿದೆ ಹಾಗೂ ಮೇ 8ರಂದು ಮತಗಳ ಎಣಿಕೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮೇ 3ರಿಂದ 5ರವರೆಗೆ ಹಾಗೂ 8ರಂದು ಎಲ್ಲಾ ರೀತಿಯ ಮದ್ಯ ವ್ಯಾಪಾರ, ಸಾಗಾಣಿಕೆ, ಸಂಗ್ರಹಣೆಯನ್ನು ನಿಷೇಧಿಸುವಂತೆ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ. ಮತದಾನ ಪ್ರಕ್ರಿಯೆ ಹಾಗೂ ಮತ ಎಣಿಕೆ ಸಮಯದಲ್ಲಿ ಚುನಾವಣಾ ಪೂರ್ವದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಚುನಾವಣಾ ಪ್ರಕ್ರಿಯೆಗಳು ಮುಕ್ತ ಹಾಗೂ ನಿಷ್ಪಕ್ಷಪಾತ ರೀತಿಯಲ್ಲಿ ಶಾಂತಿಯುತವಾಗಿ ನಡೆಯಬೇಕೆಂಬ ದೃಷ್ಟಿಯಿಂದ ಹಾಗೂ ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದ್ದರಿಂದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಮೇ 3ರಂದು ಸಂಜೆ 5ಗಂಟೆಯಿಂದ ಮತದಾನದ ದಿವಸ ಮೇ 5ರ ಮಧ್ಯರಾತ್ರಿ 12ಗಂಟೆ ಅವಧಿವರೆಗೆ ಮತ್ತು ಮೇ 8ರಂದು ಮತ ಎಣಿಕೆ ನಡೆಯುವುದರಿಂದ ಮೇ7ರ ಮಧ್ಯರಾತ್ರಿ 12ರಿಂದ ದಿನಾಂಕ ಮೇ 8ರ ಮಧ್ಯರಾತ್ರಿ 12ರವರೆಗೆ ಶುಷ್ಕ ದಿನ ಗಳೆಂದು ಘೋಷಿಸಿದೆ.
ಈ ದಿನಗಳಂದು ಎಲ್ಲಾ ವಿಧದ ಮದ್ಯ ತಯಾರಿಕಾ ಘಟಕಗಳನ್ನು, ವ್ಯಾಪಾರ, ಸಾಗಾಣಿಕೆ, ಸಂಗ್ರಹಣೆಯನ್ನು ಮಾಡುವ ಮದ್ಯ ಮಾರಾಟದ ವ್ಯವಹಾರಗಳಲ್ಲಿ ತೊಡಗಿರುವ ಎಲ್ಲಾ ಬಗೆಯ ಅಂಗಡಿಗಳನ್ನು ಸಂಪೂರ್ಣವಾಗಿ ಈ ಅವಧಿಯಲ್ಲಿ ಮುಚ್ಚುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪ್ರಾಮಾಣಿಕ ಮತದಾನ ಮಾಡಿ: ಜೆಡಿಯು
ಸೊರಬ: ಮತದಾರರು ಹೆಂಡ, ಹಣದಂತಹ ಆಮಿಷಗಳಿಗೆ ಬಲಿಯಾಗದೆ ಸಮರ್ಥ ನಾಯಕತ್ವಕ್ಕೆ ಪ್ರಾಮಾಣಿಕ ಮತದಾನ ಮಾಡಬೇಕು ಎಂದು ಜೆಡಿಯು ಅಭ್ಯರ್ಥಿ ಸತ್ಯನಾರಾಯಣ ಸಲಹೆ ನೀಡಿದರು.
ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜೆಡಿಯು ರಾಜ್ಯದ ನಿಷ್ಠಾವಂತ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣಹೆಗಡೆ ತತ್ವ ಸಿದ್ಧಾಂತ, ಆದರ್ಶ, ಮಾನವಿಕ ಆವರಣಗಳನ್ನೊಳಗೊಂಡಂತಹ ಜಾತ್ಯಾತೀತ ಪಕ್ಷ, ನಾನು ಇಂತಹ ಮಹಾನ್ ನಾಯಕರ ಆದರ್ಶಗಳನ್ನೊಳಗೊಂಡ ನನಗೆ ಪ್ರಸಕ್ತ ಸಾಲಿನಲ್ಲಿ ಚುನಾವಣೆ ನೀತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಗೆಲುವಿಗೆ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸತತ 40-50 ವರ್ಷದಿಂದಲೂ ಇಲ್ಲಿಂದ ಚುನಾಯಿತರಾದ ಜನಪ್ರತಿನಿಧಿಗಳ ನಿರಾಸಕ್ತಿಯಿಂದಾಗಿ ತಾಲೂಕು ಹಿಂದುಳಿದಿದೆ. ಇಂತಹ ಪ್ರಕ್ಷುಬ್ಧ ಸನ್ನಿವೇಶದಲ್ಲಿ ಪರ್ಯಾಯ ಜನಪ್ರತಿನಿಧಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಜೆಡಿಯು ತತ್ವ ಸಿದ್ಧಾಂತವನ್ನುಳ್ಳ ನಾನು ತಾಲೂಕು ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಮತದಾರರು ಜೆಡಿಯು ಬೆಂಬಲಿಸುವ ಮೂಲಕ ತಾಲೂಕಿನಲ್ಲಿ ಬದಲಾವಣೆಯನ್ನು ತರಬೇಕು ಎಂದು ಕೋರಿದರು. ಮನೆಘಟ್ಟದ ಕೃಷ್ಣಮೂರ್ತಿ, ನಾಗರಾಜ್, ಶ್ರೀಧರ್ ಗೋಷ್ಠಿಯಲ್ಲಿದ್ದರು.
ಇಂದು ಖರ್ಚು, ವೆಚ್ಚ ಪರಿಶೀಲನೆ
ಸೊರಬ: ಸೊರಬ ವಿಧಾನಸಭಾ ಕ್ಷೇತ್ರದ ಚುನಾವಣಾ ಖರ್ಚು ವೆಚ್ಚ ವೀಕ್ಷಕ ವನಲಾಲ್ ಚುವಾಂಗ್ ಮೇ 3ರಂದು ತಾಲೂಕು ಕಚೇರಿಯಲ್ಲಿ ಎಲ್ಲ ಅಭ್ಯರ್ಥಿಗಳ ಚುನಾವಣಾ ಖರ್ಚು ವೆಚ್ಚದ 3ನೇ ಹಂತದ ಪರಿಶೀಲನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಎಲ್ಲ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಲೆಕ್ಕಪರಿಶೀಲನೆಗೆ ಬಂದು ಹಾಜರುಪಡಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಸಹಾಯಕ, ಖರ್ಚು ವೆಚ್ಚದ ವೀಕ್ಷಕ ಪ್ರಮೋದ್ಕುಮಾರ್ ಮೊ- 9620550856 ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

