ಅಂಚೆ ಮತ ಪತ್ರವಿದ್ದ ಹೋಂ ಗಾರ್ಡ್ ಬಂಧನ
ಕ.ಪ್ರ. ವಾರ್ತೆ ಶಿವಮೊಗ್ಗ ಮೇ 7-
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಗೃಹ ರಕ್ಷಕ ಸಿಬ್ಬಂದಿಯೊಬ್ಬ ಅಕ್ರಮವಾಗಿ ಅಂಚೆ ಮತಪತ್ರಗಳನ್ನು ಕೊಂಡೊಯ್ಯತ್ತಿದ್ದಾಗ ಕೆಜೆಪಿ ಕಾರ್ಯಕರ್ತರು ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.
ಪಂಪಾವತಿ ಬಂಧಿತ ಹೋಮ್ಗಾರ್ಡ್. ಈತನ ಬಳಿ 9 ಖಾಲಿ ಮತಪತ್ರಗಳಿದ್ದವು. ಚುನಾವಣಾ ಕರ್ತವ್ಯಕ್ಕಾಗಿ ಶಿವಮೊಗ್ಗದಿಂದ 25 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಉಡುಪಿ ಜಿಲ್ಲೆಗೆ ಕಳುಹಿಸಲಾಗಿತ್ತು. ಚುನಾವಣಾ ಕರ್ತವ್ಯಕ್ಕೆ ತೆರಳಿದ್ದರಿಂದ ಇವರಿಗೆ ತಮ್ಮ ಮತ ಚಲಾಯಿಸಲು ಅಂಚೆ ಮತದಾನದ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಉಡುಪಿಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಈ ಸಿಬ್ಬಂದಿಗೆ ಅಂಚೆ ಮತಪತ್ರಗಳು ಸಿಕ್ಕಿರಲಿಲ್ಲ. ಆ ಮತಪತ್ರಗಳನ್ನೇ ಗೃಹ ರಕ್ಷಕ ದಳದ ಸಿಬ್ಬಂದಿ ಪಂಪಾವತಿ 9 ಜನರ ಸಹಿ ಇರುವ ಮತ ಪತ್ರಗಳನ್ನು ಅಕ್ರಮವಾಗಿ ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್ ಅವರಿಗೆ ಕೊಡಲು ಕೊಂಡೊಯ್ಯತ್ತಿದ್ದ ಎಂದು ಆರೋಪಿಸಲಾಗಿದೆ.
9 ಮತ ಪತ್ರಗಳು ವಶಕ್ಕೆ: ಈ ವಿಷಯ ಖಚಿತ ಪಡಿಸಿಕೊಂಡ ಕೆಜೆಪಿ ಕಾರ್ಯಕರ್ತರು ನಗರದ ಡಿವೈಎಸ್ಪಿ ಕಚೇರಿ ಮುಂಭಾಗ ಪಂಪಾವತಿಯನ್ನು ಅಡ್ಡಗಟ್ಟಿ ಈ ಬಗ್ಗೆ ವಿಚಾರಿಸಿದ್ದು, ಆತನ ಬಳಿ ಇದ್ದ 9 ಮತ ಪತ್ರಗಳನ್ನು ವಶಕ್ಕೆ ಪಡೆದುಕೊಂಡು, ತಕ್ಷಣ ಆತನನ್ನು ದೊಡ್ಡಪೇಟೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ತನಿಖೆ ಆಗಬೇಕು: ಈ ಸಂಬಂಧ ಕೆಜೆಪಿ ಕಾರ್ಯಕರ್ತರು ಪ್ರಕರಣ ದಾಖಲಿಸಿದ್ದು, ಆರೋಪಿ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಈ ವಿಷಯ ನಗರದೆಲ್ಲಡೆ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್, ಎಸ್ಡಿಪಿಐ ಅಭ್ಯರ್ಥಿಗಳು ಹಾಗೂ ಕಾರ್ಯರ್ತರು ಸ್ಥಳಕ್ಕಾಗಮಿಸಿದರು. ಕೆಜೆಪಿ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ನಗರಸಭೆ ಸದಸ್ಯ ಐಡಿಯಲ್ ಗೋಪಿ, ಬಳ್ಳೇಕೆರೆ ಸಂತೋಷ್, ಜೆಡಿಎಸ್ನ ನಗರಸಭೆ ಸದಸ್ಯ ನಾಗರಾಜ್ ಕಂಕಾರಿ, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್, ಕೆ. ದೇವೇಂದ್ರಪ್ಪ ಮತ್ತಿತರು ಸ್ಥಳಕ್ಕಾಗಮಿಸಿ ಅಂಚೆ ಮತಪತ್ರದ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದರು.
ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಆತ್ಮೀಯರಾಗಿರುವ ಎಂ.ಪಿ. ಸಂಪತ್ ಕುಮಾರ್ ಪುತ್ರ ಶಿವಕುಮಾರ್ ಎಂಬವರೇ ಗೃಹ ರಕ್ಷಕ ದಳದ ಕಮಾಂಡೆಂಟ್. ಈಶ್ವರಪ್ಪ ಶಿವಕುಮಾರ್ ಅವರನ್ನು ಬಳಸಿಕೊಂಡು ಗೃಹ ರಕ್ಷಕ ದಳದ ಸಿಬ್ಬಂದಿ ಮತ ಪಡೆಯಲು ಪ್ರಯತ್ನಿಸಿದ್ದಾರೆ.
- ಎಸ್.ಎಸ್.ಜ್ಯೋತಿಪ್ರಕಾಶ್,
ಕೆಜೆಪಿ ಜಿಲ್ಲಾಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

