ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದ್ದಕ್ಕೆ ಆಕ್ರೋಶ
ಕ.ಪ್ರ.ವಾರ್ತದಾವಣಗೆರ ಮೇ 13
ರಾಜ್ಯದ ದಲಿತ ನಾಯಕ, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನದಿಂದ ಅವಕಾಶ ವಂಚಿತಗೊಳಿಸಿದ್ದನ್ನು ಖಂಡಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕೃತಿ ದಹಿಸುವ ಮೂಲಕ ನಗರದಲ್ಲಿ ಸೋಮವಾರ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಗರದ ಬೀರಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಛಲವಾದಿ ದೀನ ಸೇವಾ ವಿದ್ಯಾರ್ಥಿ ನಿಲಯ ಸಂಸ್ಥೆ ಹಾಗೂ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಮುಖಂಡರು, ಕಾರ್ಯಕರ್ತರು ಗಾಂಧಿ ವೃತ್ತಕ್ಕೆ ತೆರಳಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಶಿಸ್ತಿನ ಸಿಪಾಯಿ: ಇದೇ ವೇಳೆ ಮಾತನಾಡಿದ ಯುವ ಮುಖಂಡ ಎಚ್. ಗಿರೀಶ, ರಾಜ್ಯದಲ್ಲಿ ನಾಲ್ಕು ದಶಕಗಳಿಂದಲೂ ಕಾಂಗ್ರೆಸ್ ಶಿಸ್ತಿನ ಸಿಪಾಯಿಯಾಗಿ, ಜನ ನಾಯಕನಾಗಿ ಬೆಳೆದು ಬಂದಿರುವ ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಸ್ಥಾನ ನೀಡದೆ, ಕಾಂಗ್ರೆಸ್ ಹೈಕಮಾಂಡ್ ವಂಚಿಸಿದೆ. ಖರ್ಗೆಯಂತಹ ಪ್ರಶ್ನಾತೀತ ನಾಯಕರಿಗೆ ಸಿಎಂ ಸ್ಥಾನದಿಂದ ವಂಚಿಸುವ ಮೂಲಕ ಹೈಕಮಾಂಡ್ ಇಡೀ ದಲಿತ ಸಮುದಾಯಕ್ಕೆ ಅವಮಾನಿಸಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಏಳಿಗೆಗಾಗಿ ದುಡಿಯುತ್ತಾ ಬಂದ ಖರ್ಗೆ ಇಂದು ಪಕ್ಷ ಅಧಿಕಾರಕ್ಕೆ ಬರುವಲ್ಲೂ ಸಾಕಷ್ಟು ಶ್ರಮಿಸಿದ್ದಾರೆ. ಸೋಲಿಲ್ಲದ ಸರದಾರ ಎಂಬ ಖ್ಯಾತಿಯನ್ನೂ ಹೊಂದಿರುವ ಖರ್ಗೆ ಕೇವಲ ದಲಿತರಿಗಷ್ಟೇ ಅಲ್ಲ. ಅಲ್ಪಸಂಖ್ಯಾತರು, ಹಿಂದುಳಿದವರು, ಸಾಮಾನ್ಯ ವರ್ಗ ಹೀಗೆ ಎಲ್ಲಾ ಜಾತಿ, ವರ್ಗ, ಧರ್ಮೀಯರ ವಿಶ್ವಾಸಕ್ಕೂ ಪಾತ್ರರಾಗಿರುವ ನಾಯಕ. ಇಂತಹ ಜಾತ್ಯತೀತ ಮನೋಭಾವದ ಹಿರಿಯ ನಾಯಕರಿಗೆ ಹೈಕಮಾಂಡ್ ಕಡೆಗಣಿಸಿದ್ದು ಖಂಡನೀಯ ಎಂದು ಅವರು ಆಕ್ಷೇಪಿಸಿದರು.
ರಾಜ್ಯದ ಕಾಂಗ್ರೆಸ್ಸಿಗರಲ್ಲೇ ಅತ್ಯಂತ ಅನುಭವಿ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದಕ್ಷತೆ, ಪ್ರಾಮಾಣಿಕತೆಯ ಆಡಳಿತದಿಂದ ಹೆಸರು ಮಾಡಿರುವ ನಾಯಕ. ಸರಳ, ಸಜ್ಜನಿಕೆಗೆ ಹೆಸರಾದ ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯರನ್ನು 120 ಶಾಸಕ ಬಲದೊಂದಿಗೆ ಕಾಂಗ್ರೆಸ್ ಯಾರ ಹಂಗೂ ಇಲ್ಲದಂತೆ ಅಧಿಕಾರ ಬಂದ ಸಂದರ್ಭದಲ್ಲೂ ಸಿಎಂ ಸ್ಥಾನ ವಂಚಿತರಾಗಿಸಿರುವುದಂತೂ ಅತ್ಯಂತ ಖಂಡನೀಯ ಸಂಗತಿ ಎಂದು ಅವರು ಹೇಳಿದರು.
ವಾಕ್ಚಾತುರ್ಯ: ಸಂಘಟನೆ, ಸೇವೆ, ಜನಪರ ಕಳಕಳಿ, ಅಭಿವೃದ್ಧಿ, ದೂರದೃಷ್ಟಿ, ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸುವ ವಾಕ್ಚಾತುರ್ಯ ಹೀಗೆ ಎಲ್ಲಾ ಅರ್ಹತೆ ಹೊಂದಿದ್ದರೂ ಸಹ ಕಾಂಗ್ರೆಸ್ ಹೈಕಮಾಂಡ್ ಖರ್ಗೆಯವರನ್ನು ಕಡೆಗಣಿಸಿದ್ದು ಇಡೀ ದಲಿತ ಸಮುದಾಯದ ಮನಸ್ಸಿಗೆ ತೀವ್ರ ಬೇಸರವನ್ನುಂಟು ಮಾಡಿದೆ ಎಂದರು.
ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ವರ್ತನೆ ಖಂಡಿಸಿ, ಇಂದು ಮಾನವ ಸರಪಳಿ ರಚಿಸಿ, ಕಾಂಗ್ರೆಸ್ ಹೈಕಮಾಂಡ್ ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟಿಸುತ್ತಿದ್ದೇವೆ ಎಂದು ಗಿರೀಶ್ ತಿಳಿಸಿದರು.
ಸಂಘಟನೆ ಮುಖಂಡ ಬಿ.ಎಸ್. ಮಾರುತಿ, ವಿ. ಮಂಜುನಾಥ, ನವೀನ, ಗಿರೀಶ, ಅರುಣ, ಓಂಕಾರಪ್ಪ, ರಾಮಯ್ಯ, ಮಂಜು, ಮಾರುತಿ, ಪ್ರಸನ್ನ, ಅಜಯ್, ಹುಸೇನ್, ಸಂಪತ್, ಮಣಿ, ತಿಪ್ಪೇಶ, ಉಚ್ಚಂಗಿ ಪ್ರಸಾದ, ಸುಧಾಕರ, ಶಿವಲಿಂಗಪ್ಪ, ತಿಪ್ಪೇಶ ಇತರರು ಪ್ರತಿಭಟನೆಯಲ್ಲಿದ್ದರು. ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿದ ದಲಿತ ಮುಖಂಡರು, ಕಾರ್ಯಕರ್ತರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ಗಾಂಧಿ ಪ್ರತಿಕೃತಿ ದಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

