ಗೊಬ್ಬರ, ಬೀಜಕ್ಕೆ ತೊಂದರೆಯಾಗದಂತೆ ಕ್ರಮ
ಕ.ಪ್ರ.ವಾರ್ತ್ಣೆ ಶಿವಮೊಗ್ಗ್ಣ ಮೇ 17
ಪ್ರತಿ ಬಾರಿ ಮುಂಗಾರು ಹಂಗಾಮಿನ ಪೂರ್ವದಲ್ಲಿ ಬಿತ್ತನೆ ಬೀಜ, ರಸಗೊಬ್ಬರಕ್ಕೆ ರೈತರು ಪರದಾಡುವುದು ಸಾಮಾನ್ಯ. ಆದರೆ, ಈ ಬಾರಿ ಇಂತಹ ಸಮಸ್ಯೆಯಾಗುವುದಿಲ್ಲ ಎಂದು ಕೃಷಿ ಇಲಾಖೆ ಭರವಸೆ ನೀಡಿದೆ.
ಬಿತ್ತನೆ ಕಾರ್ಯದ ಚಟುವಟಿಕೆ ವೇಳೆ ರೈತರಿಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳಲು ಇಲಾಖೆ ಎಲ್ಲಾ ರೀತಿಯ ಅಗತ್ಯ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಮೂರ್ತಪ್ಪ ಮಾಹಿತಿ ನೀಡಿದ್ದಾರೆ.
ಗುರಿ ಎಷ್ಟು: ಮುಂಬರುವ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುಮಾರು 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಹೇಳಿದೆ.
ಸುಮಾರು 1,09,000 ಹೆಕ್ಟೇರ್ ಪ್ರದೇಶದಲ್ಲಿ ಬತ್ತ, 63 ಸಾವಿರ ಹೆಕ್ಟೇರ್ನಲ್ಲಿ ಮುಸುಕಿನ ಜೋಳ, 48 ಸಾವಿರ ಹೆಕ್ಟೇರ್ನಲ್ಲಿ ಕಬ್ಬು ಹಾಗೂ 800 ಹೆಕ್ಟೇರ್ ಪ್ರದೇಶದಲ್ಲಿ ಇತರೆ ಬೆಳೆಗಳ ಬಿತ್ತನೆ ನಡೆಯುವುದೆಂಬುದು ಕೃಷಿ ಇಲಾಖೆಯ ಅಂದಾಜು ಲೆಕ್ಕಾಚಾರ.
ಜೂನ್ ಮೊದಲ ವಾರದಿಂದ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಇದ್ದು, ಈ ಮಧ್ಯೆ ಈಗಾಗಲೇ ಜಿಲ್ಲೆಯ ವಿವಿಧ ಕಡೆಗಳಲ್ಲಿ ರೈತರು ಬಿತ್ತನೆ ಕಾರ್ಯಕ್ಕೆ ಭೂಮಿ ಹದ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಬಿತ್ತನ ಬೀಜ: ರೈತರಿಗೆ ನಿಗದಿತ ಅವಧಿಯಲ್ಲಿ ಬಿತ್ತನೆ ಬೀಜ ದೊರಕಿಸಿಕೊಡಲು ಇಲಾಖೆ ಕ್ರಮಕೈಗೊಂಡಿದೆ ಎಂಬುದು ಶಿವಮೂರ್ತಪ್ಪ ಅವರ ವಿವರಣೆ.
ಜಿಲ್ಲೆಯಲ್ಲಿ ಸುಮಾರು 40 ರೈತ ಸಂಪರ್ಕ ಕೇಂದ್ರಗಳಿದ್ದು ಈ ಕೇಂದ್ರಗಳ ಮೂಲಕ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು. ಮಲೆನಾಡು ಭಾಗದ ತಾಲೂಕುಗಳಿಗೆ ಇತರೆ ತಾಲೂಕುಗಳಿಗಿಂತ ಒಂದೆರೆಡು ದಿನ ಮೊದಲೇ ಬೀಜ ವಿತರಣೆ ಕಾರ್ಯ ಆರಂಭಿಸಲು ನಿರ್ಧರಿಸಲಾಗಿದೆ.
ಒಟ್ಟಾರೆ 35 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಬೇಡಿಕೆ ನಿರೀಕ್ಷಿಸಲಾಗಿದೆ. ಇದರಲ್ಲಿ 25 ಸಾವಿರ ಕ್ವಿಂಟಲ್ ಬತ್ತ, 9600 ಕ್ವಿಂಟಲ್ ಮುಸುಕಿನ ಜೋಳ, 65 ಸಾವಿರ ಕ್ವಿಂಟಲ್ ತೊಗರಿ ಸೇರಿದಂತೆ ಇತರೆ ಬಿತ್ತನೆ ಬೀಜ ಬಿತ್ತನೆಯಾಗುವ ನಿರೀಕ್ಷೆ ಇದೆ.
ಇಲಾಖೆಯ ಬಳಿ ಅಗತ್ಯವಾದ ಬಿತ್ತನೆ ಬೀಜ ಲಭ್ಯವಿದೆ. ಸರಿಸುಮಾರು 38 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದೆ ಎಂದು ಕೃಷಿ ಇಲಾಖೆ ಹೇಳಿಕೊಂಡಿದೆ.
ರಸಗೊಬ್ಬರ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಸುಮಾರು 98 ಸಾವಿರ ಟನ್ ರಸಗೊಬ್ಬರ ಬೇಕಾಗಬಹುದೆಂದು ಅಂದಾಜಿಸಲಾಗಿದೆ.
ಈಗಾಗಲೇ ಇಲಾಖೆಯಲ್ಲಿ 36 ಸಾವಿರ ಟನ್ ಗೊಬ್ಬರ ದಾಸ್ತಾನಿದೆ. 10 ಸಾವಿರ ಟನ್ ಡೀಲರ್, ಗೊಬ್ಬರ ವ್ಯಾಪಾರಿಗಳ ಬಳಿಯಿದೆ.
ಜಿಲ್ಲೆಗೆ ನಿಗದಿಪಡಿಸಲಾದ ಗೊಬ್ಬರ ಹಂತಹಂತವಾಗಿ ಬರಲಿದ್ದು ಗೊಬ್ಬರದ ಸಮಸ್ಯೆ ಉದ್ಭವವಾಗುವುದಿಲ್ಲ ಎಂಬುದು ಇಲಾಖೆಯ ಸ್ಪಷ್ಟನೆ.
ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ವಿತರಣೆಗೆ ಸಿದ್ಧವಾಗಿದೆ. ಗೊಬ್ಬರ ದಾಸ್ತಾನು ಸಾಕಷ್ಟಿದೆ.
ಹೀಗಾಗಿ ರೈತರಿಗೆ ಯಾವುದೇ ಸಂದರ್ಭದಲ್ಲಿ ತೊಂದರೆಯಾಗುವ ಪ್ರಶ್ನೆಯೇ ಇಲ್ಲ ಎಂಬುದು ಕೃಷಿ ಇಲಾಖೆಯ ಅಧಿಕಾರಿಗಳ ಅಂಬೋಣ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

