ಬಾರದ ಮರು ಮೌಲ್ಯಮಾಪನ ಫಲಿತಾಂಶ: ಪ್ರತಿಭಟನೆ
ಕ.ಪ್ರ.ವಾರ್ತೆ , ಶಿವಮೊಗ್ಗ , ಮೇ 18
ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ಪ್ಯಾರಾ ಮೆಡಿಕಲ್ ಬೋರ್ಡ್ಗೆ ಸಮರ್ಪಕವಾಗಿ ತಲುಪಿಸಲು ಸಂಸ್ಥೆಯ ಆಡಳಿತಾಧಿಕಾರಿಗಳು ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ವಿನೋಬನಗರದ ರಾಘವೇಂದ್ರ ಪ್ಯಾರಾ ಮೆಡಿಕಲ್ ಹಾಗೂ ನಂದಿನಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಎನ್ಎಸ್ಯುಐ ಸಂಘಟನೆಯೊಂದಿಗೆ ಕಾಲೇಜು ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಕಾಲೇಜಿನ ಸುಮಾರು 15 ಜನ ವಿದ್ಯಾರ್ಥಿಗಳು ಈ ಬಾರಿಯ ಶೈಕ್ಷಣಿಕ ಸಾಲಿನಲ್ಲಿ ಅನುತ್ತೀರ್ಣರಾಗಿದ್ದು, ಈ ವಿದ್ಯಾರ್ಥಿಗಳು ತಮ್ಮ ಉತ್ತರ ಪರೀಕ್ಷಾ ಪತ್ರಿಕೆಯನ್ನು ಮರು ಮೌಲ್ಯಮಾಪನ ಮಾಡುಲು ಅರ್ಜಿ ಸಲ್ಲಿಸಿ, ಅದಕ್ಕೆ 1050 ರುಪಾಯಿ ಅರ್ಜಿ ಶುಲ್ಕವನ್ನು ಭರಿಸಿದ್ದಾರೆ. ಅದರೂ ಕಾಲೇಜು ಆಡಳಿತ ಮಂಡಳಿಯ ಅಧಿಕಾರಿಗಳು ವಿದ್ಯಾರ್ಥಿಗಳ ಮರು ಮೌಲ್ಯಮಾಪನದ ಫಲಿತಾಂಶವನ್ನು ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮತ್ತೊಮ್ಮೆ ಪರೀಕ್ಷೆ: ಈ ಪರಿಣಾಮ ನಗರದ ಇತರೆ ಕಾಲೇಜು ವಿದ್ಯಾರ್ಥಿಗಳ ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟಗೊಂಡರೂ ನರ್ಸಿಂಗ್ ಕಾಲೇಜಿನ ಪ್ರಥಮ, ದ್ವಿತೀಯ ಹಾಗೂ ಅಂತಿಮ ವರ್ಷದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶ ಮಾತ್ರ ಸಿಕ್ಕಿಲ್ಲ. ಹಾಗಾಗಿ ಮೊದಲೇ ಫೇಲಾದ ವಿದ್ಯಾರ್ಥಿಗಳಿಗೆ, ಮರು ಮೌಲ್ಯಮಾಪನದ ಅವಕಾಶ ತಪ್ಪಿದಂತಾಗಿದೆ. ಇನ್ನೊಂದೆಡೆ ತಪ್ಪಿದ ಅವಕಾಶದಿಂದಾಗಿ ಮತ್ತೊಮ್ಮೆ ಪರೀಕ್ಷೆ ಬರೆಯುವ ಅನಿವಾರ್ಯತೆ ಎದುರಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಎನ್ಎಸ್ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ಮದುಸೂಧನ್, ಜಿಲ್ಲಾಧ್ಯಕ್ಷ ಚೇತನ್ ಇದ್ದರು.
ಆಡಳಿತಾಧಿಕಾರಿ ಸ್ಪಷ್ಟನೆ: ಈ ಸಂಬಂಧ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದ ಸಂಸ್ಥೆಯ ಆಡಳಿತಾಧಿಕಾರಿ ಜಸಿಂತ, ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿರುವುದು ನಿಜ. ಈ ಘಟನೆಯಲ್ಲಿ ನಮ್ಮದೇನು ತಪ್ಪಿಲ್ಲ. ನಾವು ಪ್ರಮಾಣಿಕವಾಗಿ ಡಿ.ಡಿ ತೆಗೆದು ಅರ್ಜಿಯನ್ನು ಕಳುಹಿಸಿದ್ದೇವೆ.
ಆದರೆ, ಕಳುಹಿಸಿದ ಡಿ.ಡಿ ಪ್ಯಾರಾ ಮೆಡಿಕಲ್ ಬೋರ್ಡ್ಗೆ ತಲುಪದಿರುವುದೇ ಇಷ್ಟೆಲ್ಲ ಗೊಂದಲಗಳಿಗೆ ಕಾರಣವಾಗಿದೆ. ಕಳೆದ ಬಾರಿ ಇದೆ ರೀತಿಯ ಸಮಸ್ಯೆ ಎದುರಾಗಿತ್ತು. ಆಗ ಬೋರ್ಡ್ಗೆ ಹೋಗಿ ಸರಿ ಮಾಡಿಕೊಂಡು ಬಂದಿದ್ದೆವು. ಈ ಬಾರಿಯು ಸಮಸ್ಯೆ ಎದುರಾಗಿದ್ದು, ಸೋಮವಾರ ನೇರವಾಗಿ ಬೋರ್ಡ್ಗೆ ಹೋಗಿ ಸಮಸ್ಯೆ ಪರಿಹರಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಆದರೆ, ದ್ವಿತೀಯ ವರ್ಷದ ವಿದ್ಯಾರ್ಥಿ ಶಂಕರ್ ಪಾಟೀಲ್ ಹೇಳುವುದೇ ಬೇರೆ. ನನ್ನದು ಒಂದು ವಿಷಯದಲ್ಲಿ ಫೇಲ್ ಆಗಿತ್ತು. ಅದಕ್ಕೆ 1,050 ರುಪಾಯಿ ಪಾವತಿ ಮಾಡಿ, ಅರ್ಜಿ ಸಲ್ಲಿಸಿದ್ದೆ. ಬೇರೆ ಕಾಲೇಜುಗಳಲ್ಲಿ ಫಲಿತಾಂಶ ಬಂದಿದೆ. ನಮ್ಮ ಕಾಲೇಜಿನಲ್ಲಿ ಬರದಿರಲು ಕಾರಣವೇನು ಎಂದು ಆಡಳಿತಾಧಿಕಾರಿಗಳನ್ನು ಪ್ರಶ್ನಿಸಿದರೆ, ಬೋರ್ಡ್ಗೆ ನೀವು ಪಾವತಿ ಮಾಡಿರುವ ಶುಲ್ಕದ ಡಿಡಿ ತಲುಪಿಲ್ಲ. ಆದರಿಂದ ಫಲಿತಾಂಶ ಪ್ರಕಟವಾಗಿಲ್ಲ. ಅದಕ್ಕೆ ನೀವು ಪಾವತಿ ಮಾಡಿರುವ ಹಣ ವಾಪಸು ನೀಡುತ್ತೇವೆ ಎನ್ನುತ್ತಾರೆ.
ನಮಗೆ ಅವರ ಹಣ ನೀಡುವುದು ಬೇಡ, ನಮಗೆ ಪರೀಕ್ಷೆ ಫಲಿತಾಂಶ ನೀಡಿದರೆ ಸಾಕು. ನನಗೆ ಮರು ಮೌಲ್ಯಮಾಪನದಲ್ಲಿ ಪಾಸಾಗುವ ಭರವಸೆ ಇತ್ತು ಎನ್ನುತ್ತಾರೆ.
ವಿಷ ಸೇವನೆಗೆ ಯತ್ನ: ಈ ಘಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬ ವಿಷ ಸೇವನೆಗೆ ಯತ್ನಿಸಿದ ಘಟನೆ ನಡೆಯಿತು. ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ರಂಗನಾಥ್, ಪಾರ್ಟ್ ಕೆಲಸ ಮಾಡಿಕೊಂಡು ಪ್ಯಾರಾ ಮೆಡಿಕಲ್ ಓದುತ್ತಿದ್ದ ಈತ, ಒಂದು (ಕೆಮಿಸ್ಟ್ರಿ) ವಿಷಯದಲ್ಲಿ ಮಾತ್ರ ಫೇಲ್ ಆಗಿದ್ದಾನೆ. ಅದು ಕೆವಲ 4 ಅಂಕಗಳಲ್ಲಿ ಅನುತ್ತೀರ್ಣಗೊಂಡಿದ್ದೇನೆ.
ಅದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ, ಹಣ ಪಾವತಿ ಮಾಡಿದ್ದಾಗಿದೆ. ಆದರೆ, ಇದೀಗ ಕಾಲೇಜಿನ ನಿರ್ಲಕ್ಷ್ಯದಿಂದ ಫಲಿತಾಂಶವೇ ಬರದಿರುವುದು ಬೇಸರತಂದಿದ್ದು, ನನಗೆ ಕಾಲೇಜು ಆಡಳಿತ ಮಂಡಳಿಯ ಅಧಿಕಾರಿಗಳು ಸರಿಯಾದ ಪರಿಹಾರ ನೀಡಿದ್ದರೆ, ಇಲ್ಲಿಯೇ ವಿಷ ಸೇವಿಸಿ ಪ್ರಾಣ ಬಿಡುತ್ತೇನೆ ಎಂದು ಇಲಿ ಔಷಧಿಯನ್ನು ತಂದು, ವಿಷ ಸೇವಿಸಲು ಯತ್ನಿಸಿದ್ದಾನೆ.
ಕಾಲೇಜಿನಲ್ಲಿ ಅವ್ಯವಸ್ಥೆ
ಲ್ಯಾಬ್ ಇದೆ ಪರಿಕರಗಳಿಲ್ಲ.. ಗ್ರಂಥಾಲಯ ಇದೆ ಸರಿಯಾದ ಪುಸ್ತಕಗಳಿಲ್ಲ... ವಿದ್ಯಾರ್ಥಿಗಳಿದ್ದರೂ ಎಣಿಕೆಯಷ್ಟು ಉಪನ್ಯಾಸಕರು.. ಪರೀಕ್ಷಾ ಶುಲ್ಕ ಪಾವತಿ ಮಾಡಿದರೆ ಯಾವುದೋ ಸಣ್ಣದೊಂದು ಚೀಟಿಯಲ್ಲಿ ಸಂಸ್ಥೆ ವಿಳಾಸದ ಸೀಲು ಹಾಕಿರುವ ಚೀಟಿ ನೀಡುತ್ತಾರೆ. ಹೌದು ಈ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿನ ವಾಸ್ತವ್ಯ ಸ್ಥಿತಿ.
ಸಂಸ್ಥೆ ವಿದ್ಯಾರ್ಥಿಗಳನ್ನು ಅಡ್ಮಿಶನ್ ಮಾಡಿಕೊಳ್ಳುವಾಗ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಹೇಳಿತ್ತು. ಆದರೆ ಅದಾವುದನ್ನು ಇಂದು ವಿದ್ಯಾರ್ಥಿಗಳಿಗೆ ನೀಡಿಲ್ಲ. ಲ್ಯಾಬ್ರೆಟರಿ ಎಂಬ ಬೋರ್ಡ್ ಇದೆಯಾದರೂ ಲ್ಯಾಬ್ ಎಲ್ಲಿದೆ ಅನ್ನೊದನ್ನು ಹುಡಕಬೇಕು.
ಇನ್ನೂ ಗ್ರಂಥಾಲಯ ಹೇಸರಿಗಷ್ಟೆ ಸೀಮಿತವಾಗಿದ್ದು, ಅಧ್ಯಯನಕ್ಕೆ ಬೇಕಾದ ಪುಸ್ತಕಗಳಿಲ್ಲ. ಆರು ಬ್ಯಾಚ್ಗಳಿಂದ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೇವಲ ಮೂರು ಕ್ಲಾಸ್ ರೂಂಗಳಲ್ಲಿ ಪಾಠ. ಪ್ರವಚನ ಮಾಡುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

