ಶಿವಮೊಗ್ಗ

ಅಕ್ರಮವಾಗಿ ಗೋಮಾಳ ಹಂಚಿಕೆ: ಆಕ್ರೋಶ

Published On :

ಶಿವಮೊಗ್ಗ: ತಾಲೂಕಿನ ಆಯನೂರು ವ್ಯಾಪ್ತಿಯ ಹಾರನಹಳ್ಳಿ ಹೋಬಳಿ, ದೊಡ್ಡದಾನವಂದಿ ಗ್ರಾಮದ ಗೋಮಾಳದ ಜಾಗವನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಸುಳ್ಳು ಮಾಹಿತಿ ನೀಡಿ ತಾಲೂಕು ಸಕ್ರಮೀಕರಣ ಸಮಿತಿಯಲ್ಲಿ ಮಂಜೂರಾತಿ ಮಾಡಿಸಿಕೊಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
 ಅಷ್ಟೇ ಅಲ್ಲದೇ ಜಮೀನನ್ನು ಸ್ವಚ್ಛಗೊಳಿಸಲು ಬಂದವರನ್ನು ಗ್ರಾಮಸ್ಥರು ಹಿಮ್ಮೆಟ್ಟಿಸಿದ ಪ್ರಸಂಗವೂ ನಡೆದಿದೆ. ಇಲ್ಲಿನ ಸರ್ವೆ ನಂಬರ್ 3ರಲ್ಲಿ 119 ಎಕರೆ 08 ಗುಂಟೆ ಗೋಮಾಳವಿದ್ದು, ಇಲ್ಲಿನ ಗ್ರಾಮಸ್ಥರು ಕೆಲ ಭಾಗವನ್ನು ದನಕರುಗಳ ಮೇವಿಗೆ, ಮತ್ತೆ ಕೆಲ ಭಾಗವನ್ನು ಸ್ಮಶಾನಕ್ಕೆ ಬಳಕೆ ಮಾಡಿಕೊಂಡಿದ್ದರು. ಆದರೆ, ಗ್ರಾಮಸ್ಥರಲ್ಲದ 9 ವ್ಯಕ್ತಿಗಳು ತಮ್ಮ ಪ್ರಭಾವದಿಂದ ಈ ಜಮೀನನ್ನು ತಮ್ಮ ಹೆಸರಿಗೆ ತಾಲೂಕು ಸಕ್ರಮೀಕರಣ ಸಮಿತಿಯಲ್ಲಿ ಮಂಜೂರಾತಿ ಮಾಡಿಕೊಂಡು ಒತ್ತುವರಿ ಮಾಡಲು ಮುಂದಾಗಿದ್ದಾರೆ ಎಂಬುದು ಗ್ರಾಮಸ್ಥರ ನೇರ ಆರೋಪ.
ಗ್ರಾಮಸ್ಥರಿಂದ ತಡೆ: ಏಕಾಏಕಿ ಬಿ. ಚಂದ್ರಪ್ಪ ಮತ್ತು ಕೃಷ್ಣಮೂರ್ತಿ ಎಂಬವರು ಈ ಜಾಗದಲ್ಲಿನ ಜಮೀನನ್ನು ಸ್ವಾಧೀನ ಹೊಂದಲು ಜೆಸಿಬಿ ಮೂಲಕ ಪ್ರಯತ್ನಿಸಿದ್ದಾರೆ. ಇದನ್ನು ಗ್ರಾಮಸ್ಥರು ತಡೆದು, ಇದು ಹಲವಾರು ವರ್ಷಗಳಿಂದ ಬಳಸುತ್ತಿದ್ದ ಗೋಮಾಳ ಜಾಗ. ಈ ಜಮೀನಿನಲ್ಲಿ ಯಾವುದೇ ಕಾರಣಕ್ಕೂ ಸಾಗುವಳಿ ಮಾಡಲು ಬಿಡುವುದಿಲ್ಲ ಎಂದು ಜೆಸಿಬಿಯನ್ನು ಹಿಮ್ಮೆಟ್ಟಿಸಿದ ರು.
 ಶಿವಮೊಗ್ಗ ತಾಲೂಕು ಸಕ್ರಮೀಕರಣ ಸಮಿತಿ ಸ್ಥಳೀಯ ಗ್ರಾಮಸ್ಥರ ಗಮನಕ್ಕೆ ಬಾರದಂತೆ ಗ್ರಾಮಕ್ಕೆ ಸಂಬಂಧಪಡದ 9ಜನ ವ್ಯಕ್ತಿಗಳಿಗೆ ಮಂಜೂರಾತಿ ಮಾಡಿದೆ. ಅಲ್ಲದೇ, ಈ 9 ಜನರು ಬೇರೆಡೆಯಲ್ಲಿ ಈಗಾಗಲೇ ಜಮೀನು ಹೊಂದಿದ್ದು, ಸಕ್ರಮೀಕರಣ ಸಮಿತಿಗೆ ತಮಗೆ ಎಲ್ಲಿಯೂ ಯಾವುದೇ ಸಾಗುವಳಿ ಜಮೀನು ಇರುವುದಿಲ್ಲ ಎಂದು ಸುಳ್ಳು ಪ್ರಮಾಣ ಪತ್ರ ನೀಡಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪ: ಇದೀಗ ಜಮೀನು ಪಡೆದುಕೊಂಡ ಮೂವರಿಗೆ ಬೇರೆ ಕಡೆ ಈಗಾಗಲೇ ಜಮೀನು ಇದೆ. ಒಂದು ಕಡೆ ಜಮೀನಿದ್ದರೂ ಸಕ್ರಮೀಕರಣ ಸಮಿತಿ ಮುಂದೆ ಅರ್ಜಿ ಹಾಕಿ ಇಲ್ಲಿ ಜಮೀನು ಪಡೆದುಕೊಂಡಿರುವುದು ಅಕ್ಷಮ್ಯ ಅಪರಾಧ ಎಂದು ರೈತರ ವಾದ.
 ಜಮೀನು ಪಡೆದಿರುವ ಎನ್.ಬಿ. ಕುಮಾರಸ್ವಾಮಿ ಸೈನಿಕರಾಗಿದ್ದು, ಇವರು ಎಂ. ಶಿವರುದ್ರಸ್ವಾಮಿ ಅವರ ಹೆಂಡತಿ ತಮ್ಮನಾಗಿದ್ದಾರೆ. ಈತ ಬೇರೆ ಊರಿನ ವ್ಯಕ್ತಿ ಆಗಿದ್ದು, ಇಲ್ಲಿ ಯಾವುದೇ ಸ್ವಾಧೀನ ಇಲ್ಲಿಯವರೆಗೆ ಹೊಂದಿಲ್ಲ ಅವರಿಗೂ ಜಮೀನು ನೀಡಿರುವುದು ಸರಿಯಲ್ಲ. ನಿಜವಾದ ಬಗರ್ ಹುಕುಂ ರೈತರಿಗೆ ಅನ್ಯಾಯವಾಗಿದೆ ಎಂದು ರೈತರು ಜಿಲ್ಲಾಡಳಿತದ ಮುಂದೆ ಅಹವಾಲು ಮಂಡಿಸಿದ್ದಾರೆ.
 ಸಕ್ರಮೀಕರಣ ಸಮಿತಿ ಪ್ರಕಾರ ಇದುವರೆಗೂ ಯಾವುದೇ ಜಮೀನು ಇಲ್ಲದಿರುವ ನಿರಾಶ್ರಿತರಿಗೆ ಗೋಮಾಳ ಜಾಗದಲ್ಲಿ, ಜಮೀನು ನೀಡಬಹುದು ಎಂಬ ಕಾಯ್ದೆ ಇದೆ. ಆದರೆ, ದೊಡ್ಡದಾನವಂದಿ ಗ್ರಾಮದಲ್ಲಿನ ಸರ್ವೆ ನಂ 3ರಲ್ಲಿ ಅಕ್ರಮವಾಗಿ ಜಾಗವನ್ನು ಪಡೆದಿರುವ ವ್ಯಕ್ತಿಗಳಿಗೆ ಈಗಾಗಲೇ ಬೇರೆಡೆ ಹತ್ತಾರು ಎಕರೆ ಜಮೀನು ಹೊಂದಿದ್ದಾರೆ. ಇಂತಹ ವ್ಯಕ್ತಿಗಳಿಗೆ ಜಮೀನು ನೀಡಬಾರದು ಎಂದು ರೈತರು ಉಪವಿಭಾಗಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.
 ಕೂಡಲೇ ಜಿಲ್ಲಾಧಿಕಾರಿಗಳು, ಉಪ ತಹಸೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳು ಈ 9 ಜನರ ಮೇಲೆ ಕಾನೂನು ಕ್ರಮ ಜರುಗಿಸಿ, ಮಂಜೂರಾತಿ ರದ್ದುಪಡಿಸಿ ಬೇಕು, ಯಾವುದೇ ಹೊಸದಾಗಿ ವ್ಯಕ್ತಿಗಳು ಸ್ವಾಧೀನ ಹೊಂದಲು ಅವಕಾಶ ನೀಡಬಾರದು ಎಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಇಲ್ಲವಾದಲ್ಲಿ ಮುಂದೆ ಕಾನೂನು ಹೋರಾಟ ಮಾಡುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.